ಅಸಮರ್ಪಕ ರಸ್ತೆಯಲ್ಲಿ ಸಂಚರಿಸುತ್ತಿದ್ದ ವೇಳೆ ದ್ವಿಚಕ್ರ ವಾಹನವೊಂದು ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದ ವೇಳೆ ಟ್ಯಾಂಕರ್ವೊಂದರ ಅಡಿಗೆ ಬಿದ್ದ ಪರಿಣಾಮ, ಹಿಂಬದಿ ಸವಾರರಾಗಿದ್ದ ಮಹಿಳೆಯೋರ್ವರು ಮೃತಪಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರ ಸಮೀಪದ ತೊಕ್ಕೊಟ್ಟುವಿನ ಚೆಂಬುಗುಡ್ಡೆ ಬಳಿ ಕಳೆದ ಶನಿವಾರ(ನ.9) ಸಂಜೆ 5ರ ಸುಮಾರಿಗೆ ನಡೆದಿತ್ತು. ಈ ಭೀಕರ ಘಟನೆಯ ದೃಶ್ಯವು ಟ್ಯಾಂಕರ್ನಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಶನಿವಾರ ಈ ಘಟನೆಯು ತೊಕ್ಕೊಟ್ಟು – ಚೆಂಬುಗುಡ್ಡೆ ರಸ್ತೆಯಲ್ಲಿ ನಡೆದಿತ್ತು. ಮೃತಪಟ್ಟ ಮಹಿಳೆಯನ್ನು ಹಿಂಬದಿ ಸವಾರರಾಗಿದ್ದ ಸುರತ್ಕಲ್ ಸಮೀಪದ ಕುಳಾಯಿಯ ಮಹಿಳೆ ರಹಮತ್(47) ಎಂದು ಗುರುತಿಸಲಾಗಿತ್ತು. ಬೈಕ್ ಸವಾರರಾಗಿದ್ದ ಅವರ ಪತಿ ಅಬ್ದುಲ್ ರಶೀದ್ ಪ್ರಾಣಾಪಾಯದಿಂದ ಪಾರಾಗಿದ್ದರು.
ಪತಿ ರಶೀದ್ ದೇರಳಕಟ್ಟೆಯ ಯೆನೆಪೋಯ ಆಸ್ಪತ್ರೆಯಲ್ಲಿ ಇಲೆಕ್ಟ್ರಿಕಲ್ ವಿಭಾಗದ ಸಿಬ್ಬಂದಿಯಾಗಿದ್ದು, ಶನಿವಾರ ಸಂಜೆ ಸುಮಾರು 4:30ಕ್ಕೆ ತನ್ನ ಸ್ಕೂಟರ್ನಲ್ಲಿ ತನ್ನ ಪತ್ನಿ ರಹಮತ್ ಅವರನ್ನು ಕುಳ್ಳಿರಿಸಿ ದೇರಳಕಟ್ಟೆಯಿಂದ ಮಂಗಳೂರು ಕಡೆಗೆ ತೆರಳುತ್ತಿದ್ದರು. ತೊಕ್ಕೊಟ್ಟು-ಚೆಂಬುಗುಡ್ಡೆಯ ಸೇವಾ ಸೌಧದ ಬಳಿ ಹದಗೆಟ್ಟ ರಸ್ತೆಯ ಗುಂಡಿಯಿಂದ ಪಾರಾಗಲು ರಶೀದ್ ಹರಸಾಹಸ ಪಡುತ್ತಿದ್ದಂತೆಯೇ ನಿಯಂತ್ರಣ ಕಳಕೊಂಡು ಸ್ಕೂಟರ್ ಸ್ಕಿಡ್ಡಾಗಿ ಬಿದ್ದಿತ್ತು.
ಇದರಿಂದ ಸ್ಕೂಟರ್ ಹಿಂಬದಿ ಕುಳಿತಿದ್ದ ರಹಮತ್ ರಸ್ತೆಗೆ ಎಸೆಯಲಟ್ಟಿದ್ದರು. ಈ ವೇಳೆ ಆದೇ ರಸ್ತೆಯಲ್ಲಿ ಎದುರಿನಲ್ಲಿ ಸಾಗುತ್ತಿದ್ದ ಟ್ಯಾಂಕರ್ ಅಡಿಗೆ ರಹ್ಮತ್ ಅವರ ಬಿದ್ದಿದ್ದರಿಂದ ಅವರ ಮೇಲೆಯೇ ಹರಿದಿದ್ದರಿಂದ ಸ್ಥಳದಲ್ಲೇ ಮೃತಪಟ್ಟಿದ್ದರು.
ಘಟನೆ ನಡೆದ ಕೂಡಲೇ ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟರಲ್ಲಾಗಲೇ ಮೃತಪಟ್ಟಿರುವುದಾಗಿ ಘೋಷಿಸಲಾಗಿತ್ತು. ಘಟನೆಯ ಬಳಿಕ ಸ್ಥಳದಲ್ಲಿ ನೂರಾರು ಸಾರ್ವಜನಿಕರು ಆಕ್ರೋಶಗೊಂಡು ಸೇರಿ ಶಾಸಕ ಯು ಟಿ ಖಾದರ್ ಸೇರಿದಂತೆ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದರು.
ಅಪಘಾತ ಘಟನೆ ನಡೆದ ಶನಿವಾರ ರಾತ್ರಿಯೇ ಡಿವೈಎಫ್ಐ ಕಾರ್ಯಕರ್ತರು ಕೂಡ ಶಾಸಕ ಯು ಟಿ ಖಾದರ್ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಜನರ ಆಕ್ರೋಶದ ಬೆಂಕಿಯನ್ನು ಅರಿತ, ಸದ್ಯ ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಸ್ಪೀಕರ್ ಹಾಗೂ ಶಾಸಕ ಯು ಟಿ ಖಾದರ್, ಕೂಡಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರವಾಣಿ ಮೂಲಕ ನಿರ್ದೇಶನ ನೀಡಿ, ಕೂಡಲೇ ರಸ್ತೆಯನ್ನು ಸರಿಪಡಿಸಲು ಸೂಚನೆ ನೀಡಿದ್ದರಿಂದ, ತಾತ್ಕಾಲಿಕವಾಗಿ ಗುಂಡಿ ಮುಚ್ಚಲಾಗಿತ್ತು.
ಆದರೆ, ನೂರಾರು ವಾಹನಗಳ ಸಂಚಾರ ಇರುವ ರಸ್ತೆಯಲ್ಲಿ, ಮರುದಿನವೇ ಹಾಕಿದ್ದ ತಾತ್ಕಾಲಿಕ ಕಾಂಕ್ರೀಟ್ ಎದ್ದು ಹೋಗಿರುವುದಾಗಿ ಸ್ಥಳೀಯರು ವಿಡಿಯೋ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.
ಇದನ್ನು ಓದಿದ್ದೀರಾ? ಮಂಗಳೂರು | ಚೆಂಬುಗುಡ್ಡೆ ರಸ್ತೆ ಅವ್ಯವಸ್ಥೆ: ಗುಂಡಿ ಮುಚ್ಚಲು ಮಹಿಳೆಯ ಜೀವವೇ ಹೋಗಬೇಕಾಯಿತು!
ಇದೀಗ ಶನಿವಾರ ನಡೆದ ಚೆಂಬುಗುಡ್ಡೆ ಅಪಘಾತ ಘಟನೆಯು ಟ್ಯಾಂಕರ್ನಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವಿಡಿಯೋದಲ್ಲಿ ಹದಗೆಟ್ಟ ರಸ್ತೆಯ ಗುಂಡಿಯಿಂದ ಪಾರಾಗಲು ರಶೀದ್ ಹರಸಾಹಸ ಪಡುತ್ತಿದ್ದಂತೆಯೇ ನಿಯಂತ್ರಣ ಕಳಕೊಂಡು ಸ್ಕೂಟರ್ ಸ್ಕಿಡ್ಡಾಗಿ ಬಿದ್ದಾಗ, ಮಹಿಳೆ ರಹಮತ್ ಅವರು ರಸ್ತೆಗೆ ಬಿದ್ದಿದ್ದಾರೆ.

ಈ ವೇಳೆ ತಲೆಗೆ ಧರಿಸಿದ್ದ ಹೆಲ್ಮೆಟ್ ಹಾರಿ ಹೋದಾಗಲೇ, ತಲೆಯ ಮೇಲೆ ಟ್ಯಾಂಕರ್ನ ಚಕ್ರ ಹರಿದಿರುವುದು ಸೆರೆಯಾಗಿದೆ. ಸುಮಾರು 30 ಸೆಕೆಂಡ್ನ ವಿಡಿಯೋ ದೃಶ್ಯ ಭೀಕರವಾಗಿದೆ.
