ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ಖಾಸಗಿ ಸಿಟಿ ಬಸ್ ಸಿಬ್ಬಂದಿಗಳು ಸಾರ್ವಜನಿಕರ ಎದುರಲ್ಲೇ ಹೊಡಿದಾಡಿಕೊಂಡ ಘಟನೆ ನಡೆದಿದೆ. ಘಟನೆಯ ವಿಡಿಯೋ ಸದ್ಯ ಸೋಷಿಯಲ್ ಮೀಡಿಯಾಗಳಲ್ಲಿ ವೈರಲಾಗಿದೆ. ಘಟನೆಯು ಉಳ್ಳಾಲ ತಾಲೂಕಿನ ತೊಕ್ಕೊಟ್ಟು ಓವರ್ ಬ್ರಿಡ್ಜ್ ಬಳಿ ಬುಧವಾರ ಸಂಜೆ ನಡೆದಿರುವುದಾಗಿ ತಿಳಿದುಬಂದಿದೆ.
ಕೇರಳ ಕರ್ನಾಟಕದ ಗಡಿಭಾಗವಾದ ತಲಪಾಡಿಯಿಂದ ಮಂಗಳೂರು ನಡುವೆ ಚಲಿಸುವ ಖಾಸಗಿ ಸಿಟಿ ಬಸ್ ಮತ್ತು ಮಂಜೇಶ್ವರದ ಹೊಸಂಗಡಿ ಜಂಕ್ಷನ್‌ನಿಂದ ಮಂಗಳೂರು ನಡುವೆ ಸಂಚರಿಸುವ ಖಾಸಗಿ ಸರ್ವಿಸ್ ಬಸ್ ನಿರ್ವಾಹಕರ ನಡುವೆ ಈ ಹೊಯ್ ಕೈ ನಡೆದಿರುವುದಾಗಿ ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಈ ಬೀದಿ ಜಗಳದ ವಿಡಿಯೋವನ್ನು ಬಸ್‌ನ ಹಿಂಬದಿಯಲ್ಲಿ ನಿಲ್ಲಿಸಿದ್ದ ಕಾರೊಂದರಲ್ಲಿದ್ದವರು ಸೆರೆ ಹಿಡಿದಿದ್ದು, ಅದು ಈಗ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ತಲಪಾಡಿಯಿಂದ ಮಂಗಳೂರಿಗೆ ಧಾವಿಸುತ್ತಿದ್ದ ಬಸ್ಸನ್ನು ಬೆನ್ನಟ್ಟಿದ ಬಸ್ ಚಾಲಕ, ತೊಕ್ಕೊಟ್ಟು ಓವರ್ ಬ್ರಿಡ್ಜ್ ಬಳಿ ಅಡ್ಡಲಾಗಿ ಇಟ್ಟಿದ್ದಾನೆ. ಈ ವೇಳೆ ಎರಡು ಬಸ್ಸು ನಿರ್ವಾಹಕರ ನಡುವೆ ಮಾತಿನ ಚಕಮಕಿ ನಡೆದು, ಹೊಯ್ ಕೈ ನಡೆದಿರುವುದಾಗಿ ತಿಳಿದುಬಂದಿದೆ.
ಈ ಘಟನೆಯು ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ದಾಖಲಾಗಿದೆ. ಬಸ್ ನಿರ್ವಾಹಕರಾದ ಅಜಯ್ ಮತ್ತು ವಿಷ್ಣು ಎಂಬವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಓವರ್ ಟೇಕ್ ವಿಚಾರದಲ್ಲಿ ಜಗಳ ಮಾಡಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಕರಾವಳಿ ಜಿಲ್ಲೆಗಳಾದ ಮಂಗಳೂರು ಹಾಗೂ ಉಡುಪಿ ಜಿಲ್ಲೆಗಳಲ್ಲಿ ಖಾಸಗಿ ಸಿಟಿ ಹಾಗೂ ಕಾಂಟ್ರ್ಯಾಕ್ಟ್ ಕ್ಯಾರೇಜ್ ಬಸ್‌ಗಳು ಕಾರ್ಯಾಚರಿಸುತ್ತಿವೆ. ಖಾಸಗಿ ಬಸ್ ಚಾಲಕ, ನಿರ್ವಾಹಕರ ನಡುವೆ ‘ಟೈಮಿಂಗ್ಸ್’ ವಿವಾದವು ಹಲವು ವರ್ಷಗಳಿಂದ ಇದೆ. ಇದರಿಂದಾಗಿ ನಿತ್ಯ ಗಲಾಟೆಗಳಾಗುತ್ತಿದ್ದು ಬಸ್ಸು ಪ್ರಯಾಣಿಕರು ಮತ್ತು ಸಾರ್ವಜನಿಕರು ನಿತ್ಯ ಕಿರಿಕಿರಿ, ಸಮಸ್ಯೆ ಅನುಭವಿಸುವಂತಾಗಿದೆ.
ಇಂತಹ ಘಟನೆಗಳಿಗೆ ಸಾರಿಗೆ ಇಲಾಖೆ ಹಾಗೂ ಪೊಲೀಸ್ ಇಲಾಖೆಯವರು ಕಡಿವಾಣ ಹಾಕಬೇಕು ಎಂಬ ಆಗ್ರಹ ಸಾರ್ವಜನಿಕ ವಲಯದಿಂದ ಕೇಳಿಬಂದಿದೆ.
