ಮಂಗಳೂರಿನ ಕೋಟೆಕಾರ್ ಸಹಕಾರಿ ಸಂಘದ ತಲಪಾಡಿ ಕೆ.ಸಿ.ರೋಡ್ ಶಾಖೆಗೆ ಕಳೆದ ಶುಕ್ರವಾರ ನುಗ್ಗಿ, ಸಿಬ್ಬಂದಿಯನ್ನು ಬೆದರಿಸಿ ಕೋಟ್ಯಂತರ ಮೌಲ್ಯದ ಚಿನ್ನ ಹಾಗೂ ನಗದು ದರೋಡೆಗೈದು ಪರಾರಿಯಾಗಿದ್ದ ಐವರ ಪೈಕಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಸೋಮವಾರ ತಿಳಿಸಿದ್ದಾರೆ.
ಕಾರೊಂದರಲ್ಲಿ ಬಂದಿದ್ದ ಐವರು ಮುಸುಕುಧಾರಿಗಳ ತಂಡ ಬ್ಯಾಂಕ್ ಸಿಬ್ಬಂದಿಗೆ ಬಂದೂಕು ಹಾಗೂ ತಲವಾರು ತೋರಿಸಿ ಬೆದರಿಸಿ ಈ ದರೋಡೆ ನಡೆಸಿದ್ದರು.
ಮುರುಗನ್, ಪ್ರಕಾಶ್, ಮನಿವಣ್ಣನ್ ಬಂಧಿತ ಆರೋಪಿಗಳು ಎಂದು ತಿಳಿದುಬಂದಿದೆ. ಘಟನೆ ನಡೆದು ನಾಲ್ಕು ದಿನಗಳ ಬಳಿಕ ಆರೋಪಿಗಳನ್ನು ಬಂಧಿಸುವಲ್ಲಿ ಮಂಗಳೂರಿನ ಪೊಲೀಸರು ಯಶಸ್ವಿಯಾಗಿದ್ದಾರೆ.
ಇದನ್ನು ಓದಿದ್ದೀರಾ? ಆರ್‌ಜಿ ಕರ್ ಅತ್ಯಾಚಾರ- ಕೊಲೆ ಪ್ರಕರಣ | ಆರೋಪಿ ಸಂಜಯ್ ರಾಯ್ ತಪಿತಸ್ಥ; ಕೋರ್ಟ್ ಘೋಷಣೆ
“ಕೇರಳದ ಮೂಲಕ ತಮಿಳುನಾಡಿಗೆ ಹೋಗಿದ್ದ ಆರೋಪಿಗಳು, ಕೃತ್ಯಕ್ಕೆ ಮಹಾರಾಷ್ಟ್ರ ಮೂಲದ ಕಾರು ಬಳಸಿದ್ದರು. ದರೋಡೆ ಮಾಡಿದ ನಂತರ ಆರೋಪಿಗಳು ತಮಿಳುನಾಡಿನ ತಿರುವನ್ವೇಲಿಗೆ ತೆರಳಿದ್ದರು. ಬಂಧಿತರಿಂದ ತಲ್ವಾರ್, 2 ಪಿಸ್ತೂಲ್ ಹಾಗೂ ಇತರ ಸೊತ್ತುಗಳನ್ನು ಜಪ್ತಿ ಮಾಡಲಾಗಿದೆ. ಇನ್ನುಳಿದ ಇಬ್ಬರು ಆರೋಪಿಗಳ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ. ಆರೋಪಿಗಳಿಗೆ ಸ್ಥಳೀಯರು ಕೂಡ ಸಹಕಾರ ನೀಡಿರುವ ಬಗ್ಗೆ ಅನುಮಾನವಿದೆ. ಪೊಲೀಸ್ ಕಸ್ಟಡಿಗೆ ತೆಗೆದುಕೊಂಡ ನಂತರ ವಿಚಾರಣೆ ನಡೆಸುತ್ತೇವೆ” ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.
ವಿಡಿಯೋ ಕೃಪೆ: ಸನ್ಮಾರ್ಗ ನ್ಯೂಸ್
