ದೇವರು ನಮಗೆ ಸುಂದರವಾದ ಜೀವನ ನೀಡಿದ್ದಾನೆ. ಅದನ್ನು ಮಾದಕ ವಸ್ತುಗಳ ಸೇವನೆ ಮಾಡುವ ಮೂಲಕ ಹಾಳು ಮಾಡಿಕೊಳ್ಳಬಾರದು. ಮಾದಕ ವಸ್ತು ಸೇವನೆಯು ಯಾರಿಗೂ ಒಳ್ಳೆಯದು ಅಲ್ಲ. ಅಂತಹ ಕೆಟ್ಟ ಚಟ ಜೀವನದಲ್ಲಿ ಬಾರದಂತೆ ವಿದ್ಯಾರ್ಥಿಗಳು ಜಾಗೃತರಾಗಿರಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಹೆಚ್ ವಿ ಹೇಳಿದರು.

ಮಂಗಳೂರು ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಮಂಗಳೂರು ನಗರ ಪೊಲೀಸ್ ಇಲಾಖೆಯು ನಿಟ್ಟೆ ಇನ್ಸ್ಟಿಟ್ಯೂಟ್ ಆಫ್ ಪ್ರೊಫೆಶನಲ್ ಎಜುಕೇಶನ್ ಸಂಸ್ಥೆಯ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಆಶ್ರಯದಲ್ಲಿ ಗುರುವಾರ ಆಯೋಜಿಸಿದ ಅಂತಾರಾಷ್ಟ್ರೀಯ ಮಾದಕವಸ್ತು ವಿರೋಧಿ ದಿನಾಚರಣೆಯಲ್ಲಿ ಅವರು ಮಾತನಾಡಿದರು.
“ಯೌವನದಲ್ಲಿ ಎಲ್ಲವೂ ಸರಿಯಾಗಿ ಕಾಣುತ್ತದೆ. ಆದರೇ ಇಳಿವಯಸ್ಸಿನಲ್ಲಿ ಅದರ ನೋವು ಏನು ಎಂದು ತಿಳಿಯುತ್ತದೆ. ಹೆತ್ತವರಿಗೆ ನಾವು ಕೀರ್ತಿ ತರಬೇಕೆ ಹೊರತು ನೋವು ನೀಡಬಾರದು. ಆದರೆ ಇಂದಿನ ಕೆಲವು ಮಕ್ಕಳು ತಂದೆ ತಾಯಿಗಳಿಗೆ ನೋವು ನೀಡುತ್ತಿರುವುದು ತೀರ ವಿಷಾದನೀಯ. ಕೆಲವರು ಕ್ಷಣಿಕ ಸುಖಕ್ಕಾಗಿ ತಮ್ಮ ಪೂರ್ತಿ ಜೀವನ ಹಾಳು ಮಾಡಿಕೊಳ್ಳುತ್ತಾರೆ. ನಾವು ಒಂದು ವೇಳೆ ಇಂತಹ ಚಟಕ್ಕೆ ಒಳಗಾಗಿದ್ದಾರೆ ಯಾವುದೇ ಸಂಕೋಚವಿಲ್ಲದೇ ಹೆತ್ತವರ ಬಳಿ ಅಥವಾ ನಿಮಗೆ ಮೇಲೆ ನಂಬಿಕೆ ಇರುವವರ ಹತ್ತಿರ ಹೇಳಿಕೊಂಡು ಚಟದಿಂದ ಹೊರಗೆ ಬರಲು ಪ್ರಯತ್ನ ಮಾಡಬೇಕು” ಎಂದು ಸಲಹೆ ನೀಡಿದರು.
ಇದನ್ನೂ ಓದಿ: ಮಂಗಳೂರು | ರೈತರ ಹೆಸರಿನಲ್ಲಿ ಅಧಿಕಾರ ಪಡೆದವರು ಈಗ ಕಾರ್ಪೊರೇಟಿಗರ ಗುಲಾಮರು: ಯಾದವ ಶೆಟ್ಟಿ

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಮಾತನಾಡಿ, “ಮಾದಕವಸ್ತುಗಳಿಗೆ ಗೆಳೆಯರು ದಾಸರಾಗಿದ್ದರೆ ಅವರನ್ನು ಸರಿ ದಾರಿಗೆ ತರುವ ಕೆಲಸ ಸ್ನೇಹಿತರದ್ದೇ ಆಗಿರುತ್ತದೆ. ಎಲ್ಲರೂ ಒಂದುಗೂಡಿದರೆ, ಯಾವುದೇ ಸಮಸ್ಯೆ ದೊಡ್ಡದಾಗಿ ಕಾಣುವುದಿಲ್ಲ. ಎಲ್ಲರೂ ಒಗ್ಗಟ್ಟಾಗಿ ಈ ಪಿಡುಗನ್ನು ಸಮಾಜದಿಂದ ಹೊರಹಾಕಬೇಕು” ಎಂದು ವಿದ್ಯಾರ್ಥಿಗಳಿಗೆ ಪ್ರತಿಜ್ಞೆ ಮಾಡಿಸುವ ಮೂಲಕ ಸಲಹೆ ನೀಡಿದರು.

ಇದನ್ನೂ ಓದಿ: ಮಂಗಳೂರು | ಶಾಲಾ ಕಾಲೇಜುಗಳಲ್ಲಿ ಮಾದಕ ವ್ಯಸನದ ಜಾಗೃತಿ ಮೂಡಿಸಲು ಡಿಸಿ ಸೂಚನೆ
ನಟ ರೂಪೇಶ್ ಶೆಟ್ಟಿ ಮಾತನಾಡಿ, “ವಿದ್ಯಾರ್ಥಿಗಳಿಗೆ, ಯುವಕರಿಗೆ ಮಾದಕವಸ್ತುಗಳ ನಶೆ ಬೇಡ. ನಿಮಗೆ ಜೀವನದಲ್ಲಿ ಸಾಧನೆ ಮಾಡುವ ನಶೆ ಇರಲಿ. ಸಾಧಿಸುವ ನಶೆಯಿದ್ದರೆ ಜೀವನದಲ್ಲಿ ಯಶಸ್ಸು ಸಿಕ್ಕೆ ಸಿಗುತ್ತದೆ. ನಾವು ಬೇರೆಯವರ ಒಳ್ಳೆಯ ಗುಣಗಳನ್ನು ಕಲಿಯಬೇಕೆ ಹೊರತು, ಅವರ ಕೆಟ್ಟ ವಿಷಯಗಳನ್ನಲ್ಲ. ಅವರ ಕೆಟ್ಟ ಗುಣಗಳನ್ನು ಅನುಕರಣೆ ಮಾಡಿದರೆ ಜೀವನ ಹಾಳು ಮಾಡಿಕೊಳ್ಳತ್ತೀರಾ” ಎಂದು ಎಚ್ಚರಿಕೆ ನೀಡಿದರು.