ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಅಡ್ಡೂರಿನ ಹಿರಿಯ ಪ್ರಾಥಮಿಕ ಕನ್ನಡ ಮಾಧ್ಯಮ ಶಾಲೆಗೆ ಹೊಸದಾಗಿ ಆಂಗ್ಲ ಮಾಧ್ಯಮ ತರಗತಿಯನ್ನು ಸೇರ್ಪಡೆಗೊಳಿಸುವ ಉದ್ಘಾಟನಾ ಸಮಾರಂಭ ಮಂಗಳೂರು ಉತ್ತರದ ಶಾಸಕ ಭರತ್ ಶೆಟ್ಟಿ ಉಪಸ್ಥಿತಿಯಲ್ಲಿ ನೆರವೇರಿತು.
ಸಮಾರಂಭದಲ್ಲಿ ಮಾತನಾಡಿದ ಶಾಸಕ ಭರತ್ ಶೆಟ್ಟಿ, “ಊರಿನ ಅಭಿವೃದ್ಧಿ ವಿದ್ಯೆಗೆ ನೀಡುವ ಮಹತ್ವದ ಮೇಲೆ ನಿರ್ಧಾರವಾಗುತ್ತದೆ. ಅಭಿವೃದ್ಧಿಯ ಕೆಲಸದಲ್ಲಿ ರಾಜಕೀಯ ನಾವು ಮಾಡಲ್ಲ, ಸರ್ಕಾರಿ ಶಾಲೆಯ ಉದ್ಧಾರಕ್ಕೆ ನನ್ನ ಕೈಲಾದ ಸಹಾಯ ಸಹಕಾರ ಖಂಡಿತವಾಗಿಯೂ ಮಾಡುವೆ. ರಾಜಕೀಯವನ್ನು ಶಾಲೆಯ ವಠಾರದಿಂದ ಹೊರಗಿಟ್ಟು ಬಂದರೆ ಖಂಡಿತ ಶಾಲೆ ಅಭಿವೃದ್ಧಿಯಾಗುತ್ತದೆ. ಅಡ್ಡೂರು ಶಾಲೆಯ ಹಳೆ ವಿದ್ಯಾರ್ಥಿಗಳು, ಕೊಡುಗೈ ದಾನಿಗಳ ಕಾಳಜಿ, ಮುತುವರ್ಜಿ ಶ್ಲಾಘನೀಯ” ಎಂದರು.
ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಆಗಮಿಸಿದ್ದ ಉದ್ಯಮಿ, ಶಿಕ್ಷಣ ಪೋಷಕ ಝಕಾರಿಯಾ ಜೋಕಟ್ಟೆ ಮಾತನಾಡಿ, “ನಾನು ಅಡ್ಡೂರಿನ ಅಳಿಯ, ನನ್ನ ಪತ್ನಿ, ಮಾವ, ಅತ್ತೆ ಎಲ್ಲರೂ ಅಡ್ಡೂರಿನವರು. ನನ್ನ ಪತ್ನಿಯ ಆಶಯದಂತೆ ನನ್ನ ಮಾವ ಮತ್ತು ಅತ್ತೆಯ ನೆನಪಿಗಾಗಿ ಸುಸಜ್ಜಿತವಾದ ಐದು ತರಗತಿಗಳ ನೆಲಮಹಡಿ ಕಟ್ಟಡದ ಸಂಪೂರ್ಣ ವೆಚ್ಚವನ್ನು ಭರಿಸಲು ನಿರ್ಧರಿಸಿದ್ದೇನೆ ಎಂದು ಘೋಷಿಸಿದರು. ವಿದ್ಯೆಗೆ ಪೋಷಣೆ ನೀಡುವ ಹಲವು ಕಾರ್ಯಕ್ರಮಗಳನ್ನು ನಾವು ಅತ್ಯಂತ ಸಂತೋಷದಿಂದ ಮಾಡುತ್ತಾ ಬಂದಿದ್ದೇವೆ ಇನ್ನೂ ಮುಂದುವರೆಸುತ್ತೇವೆ. ಅಡ್ಡೂರಿನ ಈ ಶಾಲೆಯಲ್ಲಿ ಉತ್ತಮ ಶಿಕ್ಷಕರ ನೇಮಕವಾಗಿ ಮಕ್ಕಳ ಭವಿಷ್ಯ ಉಜ್ವಲವಾಗಲಿ” ಎಂದು ಹಾರೈಸಿದರು.
ಅಡ್ಡೂರು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ, ಅನಿವಾಸಿ ಉದ್ಯಮಿ ಹಿದಾಯತ್ ಅಡ್ಡೂರು ಮಾತನಾಡಿ, “1967ರಲ್ಲಿ ಕಡಂಬಾರು ಕುಟುಂಬದವರು ದಾನವಾಗಿ ನೀಡಿದ ಜಾಗದಲ್ಲಿ ಪ್ರಾರಂಭವಾದ ಅಡ್ಡೂರು ಸರ್ಕಾರಿ ಶಾಲೆ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯಕ್ಕೆ ಅಡಿಪಾಯ ನೀಡಿದೆ. ನಾನೂ ಈ ಶಾಲೆಯ ಹೆಮ್ಮೆಯ ವಿದ್ಯಾರ್ಥಿ. ನಮ್ಮ ನೆಚ್ಚಿನ ಸರ್ಕಾರಿ ಶಾಲೆ ಮುಚ್ಚಿ ಹೋಗದಂತೆ ನೋಡಿಕೊಂಡು, ಆಂಗ್ಲ ಮಾಧ್ಯಮ ಅನುಮತಿಗಾಗಿ ಜಾತಿ ಧರ್ಮ ಭೇದ-ಭಾವವಿಲ್ಲದೆ ಶ್ರಮವಹಿಸಿದ ಅಡ್ಡೂರಿನ ಎಲ್ಲಾ ನಾಗರಿಕರು, ಸ್ಥಳೀಯ ಸಂಘ ಸಂಸ್ಥೆಗಳು, ಅಡ್ಡೂರು ಸೆಂಟ್ರಲ್ ಕಮಿಟಿ, ನಮ್ಮ ಶಾಸಕರಾದ ಭರತ್ ಶೆಟ್ಟಿ, ಶಿಕ್ಷಣ ಸಚಿವ ಮಧುಬಂಗಾರಪ್ಪ ಎಲ್ಲರನ್ನೂ ಈ ಸಂದರ್ಭದಲ್ಲಿ ನೆನಪಿಸಿಕೊಳ್ಳುತ್ತೇನೆ” ಎಂದರು.
ಅಲ್ಲದೇ, “ಆಂಗ್ಲ ಮಾಧ್ಯಮದ ಕಟ್ಟಡದ ನೆಲ ಮಹಡಿ ನಿರ್ಮಾಣದ ಸಂಪೂರ್ಣ ಜವಾಬ್ದಾರಿ ಹೊತ್ತ ಕೊಡುಗೈ ದಾನಿ ಝಕಾರಿಯ ಜೋಕಟ್ಟೆಯವರಿಗೆ ವಿಶೇಷವಾಗಿ ಧನ್ಯವಾದ ಹೇಳುತ್ತೇನೆ. ನಿಮ್ಮ ಈ ಕೊಡುಗೆ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ಸಹಕಾರಿ ಆಗಲಿದೆ” ಎಂದರು.

ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಮಂಗಳೂರು ದಕ್ಷಿಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಈಶ್ವರ್ ಎಚ್ ಆರ್, ಬಡವರ ಮನೆಗೆ ಭಗವಂತ ಬಂದಂತೆ ಝಕಾರಿಯಾ ಜೋಕಟ್ಟೆಯವರು ಆಂಗ್ಲ ಮಾಧ್ಯಮ ಶಾಲೆಯ ನೆಲಮಹಡಿ ನಿರ್ಮಾಣದ ಜವಾಬ್ದಾರಿ ಹೊತ್ತಿರುವುದು ಶ್ಲಾಘನೀಯ ಎಂದು ಪ್ರಶಂಸಿಸಿದರು. ಅಲ್ಲದೇ ಹಿದಾಯತ್ ಅಡ್ಡೂರು ಮತ್ತು ತಂಡದವರು ನಿರಂತರ, ನಿಸ್ವಾರ್ಥ ಪ್ರಯತ್ನದಿಂದ ಮಾತ್ರವೇ ಇಂದು ಈ ತರಗತಿ ಉದ್ಘಾಟನೆ ಸಾಧ್ಯವಾಗಿದೆ. ವಿದೇಶದಲ್ಲಿದ್ದುಕೊಂಡೇ ಶಿಕ್ಷಣ ಸಚಿವರಿಗೆ, ಸ್ಪೀಕರ್ ಅವರಿಗೆ, ಶಾಸಕರಿಗೆ ಕರೆ ಮಾಡಿ ಅನುಮತಿ ಪತ್ರ ಸಿಗುವವರೆಗೂ ನಿರಂತರ ಪ್ರಯತ್ನ ಮಾಡಿದ್ದಾರೆ. ಹಾಗೂ ಸ್ಥಳೀಯ ಯುವಕರ ಸಂಸ್ಥೆಗಳಂತೂ ಒಗ್ಗಟ್ಟಾಗಿ ಕೆಲಸ ಮಾಡಿದೆ. ಇಂತಹ ಉತ್ತಮ ಪೋಷಕರಿರುವ ಈ ಶಿಕ್ಷಣ ಸಂಸ್ಥೆ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ” ಎಂದು ಶುಭ ಹಾರೈಸಿದರು.
ಇದನ್ನು ಓದಿದ್ದೀರಾ? ಸಾಬರ ಹೆಸ್ರಿಗೆ ಜಮೀನು ಮಾಡಿದ್ರೆ ನೇಣಿಗೆ ಹಾಕೋದು ಗ್ಯಾರಂಟಿ: ದ್ವೇಷ ಹರಡಿದ ಶ್ರೀರಂಗಪಟ್ಟಣ ಕಾಂಗ್ರೆಸ್ ಶಾಸಕ!
ಅಡ್ಡೂರು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮಹಮ್ಮದ್ ಅಲಿ ಅವರು ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದರು. ಗುರುಪುರ ಗ್ರಾಮ ಪಂಚಾಯತ್ ಅಧ್ಯಕ್ಷೆ ಸಫರಾ ಎಂ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಯು.ಪಿ ಇಬ್ರಾಹಿಂ, ಉದ್ಯಮಿ ಶೌಕತ್ ಅಲಿ, ಮಹಮ್ಮದ್ ಅಶ್ರಫ್, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಲೀಲಾವತಿ, ಅಡ್ಡೂರು ಸೆಂಟ್ರಲ್ ಕಮಿಟಿಯ ಅಬ್ದುಲ್ ರಝಾಕ್, ಬಾಲಕೃಷ್ಣ ರಾವ್ ನೂಯಿ, ಶಿಕ್ಷಕಿ ಅಸುರ ಸ್ವಾಗತಿಸಿದರು, ಮುಖ್ಯೋಪಾಧ್ಯಾಯಿ ದೇವಕಿ ಧನ್ಯವಾದ ಸಲ್ಲಿಸಿದರು, ಶಿಕ್ಷಕಿ ನಮೃತಾ ಕಾರ್ಯಕ್ರಮ ನಿರೂಪಿಸಿದರು.



