- ಮಂಗಳೂರಿನ ತೌಡುಗೋಳಿ ಕ್ರಾಸ್ನಲ್ಲಿ ನಡೆದಿದ್ದ ಘಟನೆ,
- ಬಸ್ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿದ್ದ ಟ್ರಾಫಿಕ್ ಪೊಲೀಸರು
ಮಹಿಳೆಯೋರ್ವರನ್ನು ಅಪಘಾತದಿಂದ ಪಾರು ಮಾಡಿದ್ದ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಬಳಿಕ ಮಂಗಳೂರು ಪೊಲೀಸರು, ಇದೀಗ ಪವಾಡ ಸದೃಶವಾಗಿ ಪಾರಾಗಿದ್ದ ಪಾದಚಾರಿ ಮಹಿಳೆಗೂ ದಂಡ ವಿಧಿಸಿರುವ ಅಪರೂಪದ ಘಟನೆ ನಡೆದಿದೆ.
ಮಂಗಳೂರು ತಾಲೂಕಿನ ಮಂಜನಾಡಿ-ತೌಡುಗೋಳಿ ಮಾರ್ಗವಾಗಿ ಮುಡಿಪು ಕಡೆಗೆ ಸಂಚರಿಸುತ್ತಿದ್ದ ಖಾಸಗಿ ಬಸ್ಸು ವೇಗವಾಗಿ ನರಿಂಗಾನ ಗ್ರಾಮದ ತೌಡುಗೋಳಿ ಎಂಬಲ್ಲಿ ಬರುತ್ತಿದ್ದಾಗ ಮಹಿಳೆಯೊಬ್ಬರು ಬಸ್ಸನ್ನು ಗಮನಿಸದೆ ರಸ್ತೆ ದಾಟಿದ್ದರು. ಈ ಸಂದರ್ಭದಲ್ಲಿ ಚಾಲಕ ತ್ಯಾಗರಾಜ್ ಕೈರಂಗಳ ಸಮಯ ಪ್ರಜ್ಞೆ ಮೆರೆದಿದ್ದರಿಂದ ಮಹಿಳೆ ಕೂದಳೆಲೆಯ ಅಂತರದಲ್ಲಿ ಅಪಘಾತದಿಂದ ಪಾರಾಗಿದ್ದರು.
ಈ ಘಟನೆಯ ಸಿಸಿಟಿವಿ ದೃಶ್ಯಾವಳಿ ಎಲ್ಲ ಕಡೆ ವೈರಲ್ ಆಗಿತ್ತು. ಅಲ್ಲದೇ, ಹಲವು ಮಾಧ್ಯಮಗಳಲ್ಲಿ ಸುದ್ದಿ ಕೂಡ ಪ್ರಕಟವಾಗಿತ್ತು. ಬಳಿಕ ಈ ವಿಡಿಯೋ ಪೊಲೀಸರಿಗೆ ಸಾಕ್ಷಿಯಾಗಿ ದೊರೆತ ಹಿನ್ನೆಲೆಯಲ್ಲಿ ಚಾಲಕನ ವಿರುದ್ಧ ಕರ್ಕಶ ಹಾರ್ನ್, ಅತಿವೇಗ, ಅಜಾಗರೂಕತೆ ಚಾಲನೆಯ ಕೇಸ್ ಜಡಿದಿದ್ದಲ್ಲದೆ, ಬಸ್ಸನ್ನು ವಶಕ್ಕೆ ಪಡೆದು ನಂತರ ಬಿಟ್ಟು ಕಳಿಸಿದ್ದರು.
ಆ ಬಳಿಕ ಈಗ ಮಹಿಳೆಗೂ ದಂಡ ವಿಧಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ವಾಹನವನ್ನು ಗಮನಿಸದೆ ಮಹಿಳೆ ರಸ್ತೆ ದಾಟಿದ್ದಾರೆ. ರಸ್ತೆ ದಾಟುವಾಗ ನಿರ್ಲಕ್ಷ್ಯ ತೋರಿದ್ದ ಹಿನ್ನೆಲೆಯಲ್ಲಿ ಸಂಚಾರ ನಿಯಮ ಉಲ್ಲಂಘನೆ ಕಾಯ್ದೆಯ ಸೆಕ್ಷನ್ 13 ಹಾಗೂ ಕರ್ನಾಟಕ ಪೊಲೀಸ್ ಕಾಯ್ದೆಯ 92ಜಿ ಅಡಿಯಲ್ಲಿ ಪಾದಚಾರಿ ಮಹಿಳೆಗೂ ದಂಡವಾಗಿ 100 ರೂಪಾಯಿ ವಿಧಿಸಲಾಗಿದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಕುಲದೀಪ್ ಕುಮಾರ್ ಜೈನ್ ಮಾಹಿತಿ ನೀಡಿದ್ದಾರೆ.