ಫುಟ್ಬಾಲ್ ಪಂದ್ಯದ ವೇಳೆ ಎರಡು ಕಾಲೇಜು ವಿದ್ಯಾರ್ಥಿಗಳ ನಡುವೆ ಗಲಭೆ ಉಂಟಾಗಿ, ತಂಡವೊಂದು ವಿದ್ಯಾರ್ಥಿಗಳನ್ನು ಅಪಹರಿಸಿ ಅಮಾನುಷವಾಗಿ, ಅರೆನಗ್ನಗೊಳಿಸಿ ಹಲ್ಲೆಗೈದಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಹಲ್ಲೆ ನಡೆಸಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ವಿಡಿಯೋ ಹೊರಬಂದ ಬೆನ್ನಲ್ಲೇ ಮಂಗಳೂರು ನಗರ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಮಂಗಳೂರು ನಗರದ ನೆಹರೂ ಮೈದಾನದಲ್ಲಿ ಕಳೆದ ಆ.14ರಂದು ಯೆನಪೋಯ ಮತ್ತು ಅಲೋಶಿಯಸ್ ಕಾಲೇಜು ವಿದ್ಯಾರ್ಥಿಗಳ ಮಧ್ಯೆ ಫುಟ್ಬಾಲ್ ಟೂರ್ನಮೆಂಟ್ ನಡೆದಿತ್ತು. ಈ ವೇಳೆ, ಮಹಮ್ಮದ್ ಶುರೈ, ಮಹಮ್ಮದ್ ಅಫ್ರಾನ್, ಇಬ್ರಾಹಿಂ ಖಲೀಲ್ ಮತ್ತು ಮಹಮ್ಮದ್ ಜುನೈದ್ ಎಂಬವರು ಯೆನಪೋಯ ತಂಡಕ್ಕೆ ಬೆಂಬಲಿಸಿದ ದ್ವೇಷದಲ್ಲಿ ಮತ್ತೊಂದು ತಂಡದ ವಿದ್ಯಾರ್ಥಿಗಳು ಇವರನ್ನು ಅಪಹರಿಸಿದ್ದಾರೆ. ಆಗಸ್ಟ್ 19ರ ಸೋಮವಾರ ಸಂಜೆ ಇವರನ್ನು ಪಾಂಡೇಶ್ವರದ ಫೋರಂ ಮಾಲ್ ಬಳಿಯಿಂದ ಕಾರಿನಲ್ಲಿ ಅಪಹರಿಸಿದ್ದು, ಮಹಾಕಾಳಿ ಪಡ್ಪು ಎಂಬಲ್ಲಿಗೆ ಕರೆದೊಯ್ದು ಹಲ್ಲೆ ನಡೆಸಿರುವುದಾಗಿ ವರದಿಯಾಗಿದೆ.

ಈ ಗಲಾಟೆಯಲ್ಲಿ ಮಹಮ್ಮದ್ ಶುರೈ, ಮಹಮ್ಮದ್ ಅಫ್ರಾನ್, ಇಬ್ರಾಹಿಂ ಖಲೀಲ್ ಮತ್ತು ಮಹಮ್ಮದ್ ಜುನೈದ್ ಎಂಬ ವಿದ್ಯಾರ್ಥಿಗಳಿಗೆ ಹಲ್ಲೆ ಮಾಡಲಾಗಿದೆ. ದಿಯಾನ್, ಅನ್ನೈ, ತಸ್ಮಿನ್, ಸಲ್ಮಾನ್, ಅನಸ್ ಹಲ್ಲೆಗೈದಿರುವ ಆರೋಪಿಗಳು. ಮಹಾಕಾಳಿ ಪಡ್ಪು, ಕಣ್ಣೂರು ಮಸೀದಿ ಬಳಿ ಸೇರಿದಂತೆ ವಿವಿಧ ಸ್ಥಳಗಳಿಗೆ ಕರೆದೊಯ್ದು ಮತ್ತಷ್ಟು ಹಲ್ಲೆ ನಡೆಸಿರುವುದಾಗಿ ವರದಿಯಾಗಿದೆ.
ಇದನ್ನು ಓದಿದ್ದೀರಾ? ಬೆಂಗಳೂರು | ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಬೃಹತ್ ಮರ: ಚಾಲಕ ಪವಾಡ ಸದೃಶ ಪಾರು
ಭೀಕರವಾಗಿ ಹಲ್ಲೆಗೈದು ಸಿಗರೇಟ್‌ನಿಂದ ಸುಟ್ಟು ಹಲ್ಲೆ ಮಾಡಲಾಗಿದೆ. ಮಂಗಳೂರಿನ ಮೂರು ಕಡೆಗಳಿಗೆ ಕರೆದೊಯ್ದು ಹಲ್ಲೆಗೈದು ಅರೆಬೆತ್ತಲೆ ಮಾಡಿ ಬಸ್ಕಿ ಹೊಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಕ್ಷಮೆ ಕೇಳುವಂತೆ ಹಲ್ಲೆ ಮಾಡಿರುವ ವಿಡಿಯೋ ವೈರಲ್ ಆಗಿದೆ.
ಸದ್ಯ ವಿಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ಮಂಗಳೂರಿನ ಪಾಂಡೇಶ್ವರ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ. ಒಟ್ಟು ಒಂಬತ್ತು ಮಂದಿಯ ತಂಡ ಈ ಕೃತ್ಯ ಎಸಗಿರುವುದಾಗಿ ತಿಳಿದುಬಂದಿದ್ದು, ಈಗಾಗಲೇ ಇಬ್ಬರನ್ನು ಬಂಧಿಸಿದ್ದು, ತನಿಖೆ ಮುಂದುವರಿಸಿದ್ದಾರೆ. ಆರೋಪಿಗಳ ಪೈಕಿ ದಿಯಾನ್ ಮತ್ತು ಸಲ್ಮಾನ್ ಎಂಬಿಬ್ಬರನ್ನು ಬಂಧಿಸಲಾಗಿದೆ. ಘಟನೆಯಲ್ಲಿ ಗಾಯಗೊಂಡ ವಿದ್ಯಾರ್ಥಿಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
