ಪತ್ನಿಯ ವಿವಾಹೇತರ ಸಂಬಂಧಕ್ಕೆ ಬೇಸತ್ತ ಪತಿರಾಯನೊಬ್ಬ ಮಗುವಿನೊಂದಿಗೆ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದಾಗ ಸ್ಥಳೀಯ ಮುಸ್ಲಿಮರು ಮಗುವಿನ ಸಹಿತ ಇಬ್ಬರನ್ನೂ ರಕ್ಷಿಸಿದ ಘಟನೆ ರವಿವಾರ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಸಮೀಪದ ಗುರುಪುರ ಸೇತುವೆಯ ಬಳಿ ನಡೆದಿದೆ.
ಕಂದಾವರ ಪಡ್ಡಾಯಿ ಪದವಿನ ಸಂದೀಪ್ (34) ಎಂಬಾತ 2 ವರ್ಷದ ಮಗುವನ್ನು ಹಿಡಿದುಕೊಂಡು ಸೇತುವೆ ಮೇಲೆ ನಿಂತು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿಕೊಳ್ಳುತ್ತಿದ್ದ. ಈ ವೇಳೆ ಸ್ಥಳೀಯರು ಕೆಳಗೆ ಹಾರಬೇಡ ಎಂದು ಒತ್ತಾಯಿಸಿದ್ದಾರೆ.
ಈ ವೇಳೆ ಆತ, ‘ಯಾರೂ ಹತ್ತಿರ ಬರಬೇಡಿ’ ಎಂದು ಕೂಗಿಕೊಂಡಿದ್ದಾನೆ. ಇದೇ ವೇಳೆ ಆಯತಪ್ಪಿ ರಸ್ತೆಯ ಬದಿಗೆ ಬಿದ್ದಾಗಲೇ, ಓಡೋಡಿ ಬಂದ ಸ್ಥಳೀಯರು, ಕೊನೆಗೂ ಇಬ್ಬರನ್ನೂ ಹಿಡಿದು ಮಗುವಿನ ರಕ್ಷಣೆ ಮಾಡಿದ್ದಾರೆ.
“ಪತ್ನಿಯು ತನ್ನ ಕಣ್ಣೆದುರೇ ವಿವಾಹೇತರ ಸಂಬಂಧ ಹೊಂದಿದ್ದನ್ನು ನೋಡಿದ್ದೇನೆ. ಇದನ್ನು ಪ್ರಶ್ನಿಸಿದಾಗ ನನ್ನ ಮೇಲೆಯೇ ಮಹಿಳಾ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಿದ್ದಾಳೆ. ಇದರಿಂದಾಗಿ ತುಂಬಾ ಮನನೊಂದು ಈ ನಿರ್ಧಾರಕ್ಕೆ ಬಂದಿದ್ದೆ” ಎಂದು ಸ್ಥಳೀಯರು ರಕ್ಷಣೆ ಮಾಡಿದ ಬಳಿಕ ಸಂದೀಪ್ ಹೇಳಿಕೆಯನ್ನು ನೀಡಿದ್ದಾನೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕೌಟುಂಬಿಕ ಕಲಹದಿಂದ ನೊಂದು ಆತ್ಮಹತ್ಯೆಗೆ ಮುಂದಾಗಿದ್ದ ಎಂದು ಸದ್ಯ ತಿಳಿದು ಬಂದಿದೆ. ಸ್ಥಳೀಯರು ಬುದ್ದಿ ಮಾತು ಹೇಳಿ ಮನೆಗೆ ಕಳುಹಿಸಿದ್ದಾರೆ. ಘಟನೆಯ ದೃಶ್ಯಾವಳಿಗಳ ವಿಡಿಯೋ ಸೆರೆಯಾಗಿದೆ.
ನಿರಂತರ ಜಗಳ ನಡೆಯುತ್ತಿದ್ದ ಕಾರಣದಿಂದ ಸಂದೀಪ್ ವಿರುದ್ಧ ಪತ್ನಿ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಳು ಎಂದು ತಿಳಿದು ಬಂದಿದೆ. ಈ ಘಟನೆಗೆ ಸಂಬಂಧಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆಯೇ ಎಂಬುದು ಇನ್ನಷ್ಟೇ ತಿಳಿದು ಬರಬೇಕಿದೆ.
ಮಗು ಹಾಗೂ ತಂದೆಯನ್ನು ರಕ್ಷಿಸಿದ ಸ್ಥಳೀಯ ಮುಸ್ಲಿಮರ ಕಾರ್ಯಕ್ಕೆ ಸೋಷಿಯಲ್ ಮೀಡಿಯಾಗಳಲ್ಲಿ ಶ್ಲಾಘನೆ ವ್ಯಕ್ತವಾಗಿದೆ.

Wa tukali
Wa tukali wa