ಕರ್ನಾಟಕ ಸೇರಿ ದೇಶಾದ್ಯಂತ ವಕ್ಫ್ ಆಸ್ತಿ ವಿಚಾರ ಚರ್ಚೆ ನಡೆಯುತ್ತಿರುವಾಗಲೇ ಮಂಗಳೂರು ಹೊರವಲಯದ ಮಳಲಿ ಮಸೀದಿಯ ವಿವಾದಕ್ಕೆ ಸಂಬಂಧಿಸಿ ಪಹಣಿ ಪತ್ರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಎಂಬ ಹಿಂದೂ ಸಂಘಟನೆಗಳ ಮನವಿಯನ್ನು ಮಂಗಳೂರು ಸಹಾಯಕ ಕಮಿಷನರ್ (ಎಸಿ) ಕೋರ್ಟ್ ತಿರಸ್ಕರಿಸಿದೆ.
ಮಸೀದಿಯ ಪಹಣಿ ಪತ್ರದಲ್ಲಿ ಸರ್ಕಾರಿ ಭೂಮಿ ಜೊತೆಗೆ ಮಸೀದಿ ಜಾಗ ಎಂದು ನಮೂದಾಗಿರುವ ವಿಚಾರಕ್ಕೆ ಸಂಬಂಧಿಸಿ ಹಿಂದಿನ ಸಹಾಯಕ ಕಮಿಷನರ್ ಕೋರ್ಟ್ ಯಥಾಸ್ಥಿತಿಗೆ ಸೂಚಿಸಿತ್ತು. ಈ ವಿವಾದದ ಕುರಿತು ಮಂಗಳೂರಿನ ಜಿಲ್ಲಾ ಮೂರನೇ ಸಿವಿಲ್ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದ್ದು, ಅಂತಿಮ ತೀರ್ಪು ಬರುವವರೆಗೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ವಿಶ್ವ ಹಿಂದೂ ಪರಿಷತ್ ಮನವಿ ಸಲ್ಲಿಸಿದ್ದವು. ಈ ಮನವಿಯನ್ನು ಎಸಿ ಕೋರ್ಟ್ ತಿರಸ್ಕರಿಸಿದೆ. ಈ ನಿರ್ಧಾರದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಲು ಸಂಘಪರಿವಾರ ಬೆಂಬಲಿತ ಸಂಘಟನೆ ಮುಂದಾಗಿವೆ.
ಮಳಲಿ ಮಸೀದಿಯ ಪಹಣಿ ಪತ್ರದ ಕಾಲಂ 9ರಲ್ಲಿ ಸರ್ಕಾರಿ ಜಾಗ ಎಂದಿದ್ದು, ಕಾಲಂ 11ರಲ್ಲಿ ಮಸೀದಿಯ ಹೆಸರು ನಮೂದಿಸಲಾಗಿದೆ. ಈ ದ್ವಂದ್ವವನ್ನು ಪ್ರಶ್ನಿಸಿ ಹಿಂದೂ ಸಂಘಟನೆಗಳು ಈ ಹಿಂದಿನ ಸಹಾಯಕ ಕಮಿಷನರ್ ಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದಲ್ಲದೆ, ಕಂದಾಯ ದಾಖಲೆ (ಆರ್‌ಟಿಸಿ) ಯಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸೂಚಿಸುವಲ್ಲಿ ಸಫಲರಾಗಿದ್ದವು.

ಈ ಹಿಂದೆ ಮಸೀದಿ ಇರುವ ಸ್ಥಳದ ಆರ್‌ಟಿಸಿಯ ಕಲಂ 9ರಲ್ಲಿ ಕಂದಾಯ ಭೂಮಿ ಎಂದು ಉಲ್ಲೇಖಿಸಲಾಗಿತ್ತು. ಇತ್ತೀಚೆಗೆ ರಾಜ್ಯದ ಹಲವೆಡೆ ಉಂಟಾಗಿರುವ ವಕ್ಫ್ ವಿವಾದ ಹಿನ್ನೆಲೆಯಲ್ಲಿ ಅನುಮಾನ ವ್ಯಕ್ತವಾಗಿ ಮಳಲಿ ಮಸೀದಿ ಬಗ್ಗೆಯೂ ಅರ್ಜಿ ಸಲ್ಲಿಸಲಾಗಿತ್ತು. ಆದರೆ ಈ ಹಿಂದಿನ ದಾಖಲೆಯನ್ನು ಬದಲಾಯಿಸಬಾರದು. ಈ ಬಗ್ಗೆ ಸಿವಿಲ್ ನ್ಯಾಯಾಲಯದಲ್ಲಿರುವ ವ್ಯಾಜ್ಯ ತೀರ್ಮಾನ ಆಗುವವರೆಗೂ ಯಾವುದೇ ಪ್ರಕ್ರಿಯೆ ನಡೆಸಬಾರದು ಎಂದು ವಿಹಿಂಪ ಪರ ವಕೀಲರು ಅರ್ಜಿ ಸಲ್ಲಿಸಿದ್ದರು. ಹಿಂದುತ್ವ ಸಂಘಟನೆಯ ಮನವಿಯನ್ನು ಮಂಗಳೂರು ಸಹಾಯಕ ಕಮಿಷನರ್ (ಎಸಿ) ಕೋರ್ಟ್ ತಿರಸ್ಕರಿಸಿದೆ.
ಏನಿದು ವಿವಾದ?
2022ರಲ್ಲಿ ಮಳಲಿ ಮಸೀದಿ ನವೀಕರಣ ವೇಳೆ ಹಿಂದೂ ಧಾರ್ಮಿಕ ಕೇಂದ್ರದ ಕುರುಹು ಪತ್ತೆಯಾಗಿದೆ ಎಂದು ಸಂಘಪರಿವಾರ ಗುಲ್ಲೆಬ್ಬಿಸಿದ್ದವು. ಆಗ ಮಸೀದಿ ಕಟ್ಟಡ ಜಾಗದಲ್ಲಿ ಉತ್ಪತನನ ನಡೆಸುವಂತೆ ಕೋರಿ ಹಿಂದೂ ಸಂಘಟನೆಗಳು ಕೋರ್ಟ್‌ಗೆ 2022ರ ಏ.22ರಂದು ಅರ್ಜಿ ಸಲ್ಲಿಸಿದ್ದವು. ಮಸೀದಿ ಆಸ್ತಿ ಯಾರಿಗೆ ಸೇರಿದೆ ಎಂದು ತೀರ್ಮಾನಿಸುವಂತೆ ಜಿಲ್ಲಾ ಸಿವಿಲ್ ನ್ಯಾಯಾಲಯಕ್ಕೆ ಹೈಕೋರ್ಟ್ ನಿರ್ದೇಶನ ನೀಡಿತ್ತು. ಈ ಕುರಿತ ವಿಚಾರಣೆ ನಡೆಯುತ್ತಿದ್ದು, ಅಂತಿಮ ತೀರ್ಪು ಬಾಕಿ ಇದೆ.
