ಮಂಗಳೂರು ನಗರದ ಬಜಪೆ ಸಮೀಪ ಮೇ 1ರ ಗುರುವಾರದಂದು ನಡೆದ ರೌಡಿಶೀಟರ್ ಸುಹಾಸ್ ಶೆಟ್ಟಿ ಹತ್ಯೆಗೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ ಎಂಟು ಮಂದಿಯನ್ನು ಬಂಧಿಸಿದ್ದು, ತನಿಖೆ ಮುಂದುವರಿಸಿದ್ದಾರೆ ಎಂದು ರಾಜ್ಯದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಶನಿವಾರ (ಮೇ 03) ನಗರದ ಕಮಿಷನರ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶುಕ್ರವಾರ ರಾತ್ರಿ ಆರೋಪಿಗಳನ್ನು ಬಂಧಿಸಲಾಗಿದೆ. ಅವರ ಹಿನ್ನೆಲೆ, ಘಟನೆಗೆ ಕಾರಣವಾದ ಅಂಶಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ಅಬ್ದುಲ್ ಸಫ್ವಾನ್, ನಿಯಾಜ್ ಶಾಂತಿಗುಡ್ಡೆ, ಬಜ್ಪೆ, ಮೊಹಮ್ಮದ್ ಮುಝಮ್ಮಿಲ್, ಕಲಂದರ್ ಶಾಫಿ, ರಂಜಿತ್, ನಾಗರಾಜ್, ಮೊಹಮ್ಮದ್ ರಿಜ್ವಾನ್ ಜೋಕಟ್ಟೆ, ಆದಿಲ್ ಮೆಹರೂಫ್ ಎಂಬವರು ಬಂಧಿತ ಆರೋಪಿಗಳು.
ದ.ಕ ಜಿಲ್ಲೆ ಕೋಮು ಘಟನೆಗೆ ಸಂಬಂಧಿಸಿದಂತೆ ಗಮನ ಸೆಳೆಯುತ್ತಲೇ ಇರುತ್ತದೆ. ಸುಹಾಸ್ ಶೆಟ್ಟಿ ಕೊಲೆ ಕೂಡ ಇದೇ ಭಾವನೆ ಮೂಡಿಸಿತ್ತು. ಆದರೆ, ಜನ ಇದನ್ನು ಬಯಸಲ್ಲ. ಜನರು ಶಾಂತಿ ಸುವ್ಯವಸ್ಥೆ ನೆಲೆಗೊಳ್ಳುವಂತೆ ಮಾಡುವುದು ಸರಕಾರದ ಆದ್ಯತೆ ಎಂದು ಪರಮೇಶ್ವರ್ ತಿಳಿಸಿದರು.
ಈ ಘಟನೆ ಮತ್ತು ಅಶ್ರಫ್ ಕೊಲೆ ಕೋಮು ಸೌಹಾರ್ದಕ್ಕೆ ಸವಾಲಾಗಿತ್ತು. 21 ಮಂದಿಯನ್ನು ಅಶ್ರಫ್ ಗುಂಪು ಹತ್ಯೆ ಪ್ರಕರಣದಲ್ಲಿ ಬಂಧಿಸಲಾಗಿದೆ. ಶಾಂತಿ ಕದಡುವ ದುಷ್ಟ ಶಕ್ತಿಗಳಿಗೆ ಜಿಲ್ಲೆಯಲ್ಲಿ ಅವಕಾಶ ನೀಡುವುದಿಲ್ಲ. ಅವರು ಯಾವ ಸಮುದಾಯದವರು ಆದರೂ ಸರಿ. ನಮ್ಮ ಉದ್ದೇಶ ಇಲ್ಲಿ ಶಾಂತಿ ಇರಬೇಕು. ಈ ಹಿಂದೆ ಇಲ್ಲಿ ಶಾಂತಿ ಪಾದಯಾತ್ರೆ ನಡೆದಿತ್ತು. ಆ ಬಳಿಕ ಕೋಮು ಸಂಘರ್ಷದ ಘಟನೆ ನಡೆದಿರಲಿಲ್ಲ, ಈಗ ಕೋಮು ಶಕ್ತಿಗಳು ತಲೆ ಎತ್ತಿವೆ. ಇನ್ನುಮುಂದೆ ಇಂತಹ ಘಟನೆ ಮರುಕಳಿಸಬಾರದು ಎಂದು ಟಾಸ್ಕ್ ಫೋರ್ಸ್ ರಚಿಸುತ್ತೇವೆ ಎಂದು ಗೃಹ ಸಚಿವರು ತಿಳಿಸಿದ್ದಾರೆ.
Anti ನಕ್ಸಲ್ ಫೋರ್ಸ್‌ನಂತೆ, ಯಾರು ಕೋಮು ಸೌಹಾರ್ದ ಕದಡುವ ಕೆಲಸ ಮಾಡುತ್ತಾರೋ ಅಂಥವರ ಮೇಲೆ ನಿರ್ದಾಕ್ಷಿಣ್ಯ ಕ್ರಮಕ್ಕೆ ಪೊಲೀಸರಿಗೆ ತಿಳಿಸಿದ್ದೇನೆ. Anti ನಕ್ಸಲ್ ಫೋರ್ಸ್‌ನಂತೆ ಉಡುಪಿ, ಮಂಗಳೂರಿನಲ್ಲಿ ANTI COMMUNAL ಫೋರ್ಸ್ ರಚನೆ ಮಾಡಿ, ಶಾಂತಿಗಾಗಿ ಕೆಲಸ ಮಾಡುತ್ತೇವೆ. ಪ್ರಚೋದನಾಕಾರಿ ಹೇಳಿಕೆ ನೀಡುವವರ ವಿರುದ್ಧವೂ ನಿರ್ದಾಕ್ಷಿಣ್ಯ ಕ್ರಮಕ್ಕೆ ಸೂಚನೆ ನೀಡಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
