ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಶನ್ (SIO) ಹಾಗೂ ಸೋಲಿಡಾರಿಟಿ ಯೂತ್ ಮೂವ್ಮೆಂಟ್ ದಕ್ಷಿಣ ಕನ್ನಡ ವಿಭಾಗವು ಇತ್ತೀಚೆಗೆ ಧರ್ಮದ ಆಧಾರದಲ್ಲಿ ಕೇರಳದ ಅಶ್ರಫ್ ಮತ್ತು ಕರ್ನಾಟಕದ ಅಬ್ದುಲ್ ರಹ್ಮಾನ್ ಎಂಬವರ ಹತ್ಯೆಯ ಪ್ರಕರಣಗಳಲ್ಲಿ ಶೀಘ್ರ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿ ಮಂಗಳೂರಿನ ಕ್ಲಾಕ್ ಟವರ್ ಬಳಿ ಶಾಂತಿಯುತ ಪ್ರತಿಭಟನೆ ನಡಸಿತು.
ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಹಿಂಸಾಚಾರದ ವಿರುದ್ಧ ರಾಜ್ಯ ಸರಕಾರವು ಸ್ಪಷ್ಟ ಮತ್ತು ಕಟ್ಟುನಿಟ್ಟಾದ ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನಾಕಾರರು ಈ ಸಂದರ್ಭದಲ್ಲಿ ಆಗ್ರಹಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ಸೋಲಿಡಾರಿಟಿ ಮೂವ್ಮೆಂಟ್ ಕೇರಳ ರಾಜ್ಯಾಧ್ಯಕ್ಷ ತೌಫಿಕ್ ಮಂಬಾಡ್ ಅವರು ಅಶ್ರಫ್ ಅವರ ಗುಂಪು ಹತ್ಯೆಯ ಬಗ್ಗೆ ಮಾತನಾಡಿ, ಅಬ್ದುಲ್ ರಹ್ಮಾನ್ ಅವರ ಹತ್ಯೆಯ ಕುರಿತು ಧ್ವನಿಗೂಡಿಸಿದರು. ಕೇರಳ ಮತ್ತು ಕರ್ನಾಟಕದ ಜನತೆ ಒಂದಾಗಿ ಇಂತಹ ಹಿಂಸೆಯ ವಿರುದ್ಧ ಎದ್ದು ನಿಲ್ಲಬೇಕೆಂದು ತಿಳಿಸಿದರು.

ಅಡ್ವೊಕೇಟ್ ಅಮೃತ್ ಶೆಣೈ ಅವರು ಮಾತನಾಡುತ್ತಾ, ಯಾವುದೇ ವ್ಯಕ್ತಿಯು ಧರ್ಮದ ಹೆಸರಿನಲ್ಲಿ ಅಥವಾ ಇನ್ನಾವುದೇ ಕಾರಣಕ್ಕೂ ಹಿಂಸೆಗೆ ಒಳಗಾಗಬಾರದು. ಕಾನೂನು ಬಲವರ್ಧನೆ ಮತ್ತು ಸರ್ವಧರ್ಮೀಯರ ಸಹಬಾಳ್ವೆಯ ಅಗತ್ಯತೆಗಳನ್ನು ಒತ್ತಿ ಹೇಳಿದರು.
ಬಳಿಕ ಅಶ್ರಫ್ ಅವರ ಸಹೋದರ ಜಬ್ಬಾರ್ ಅವರು ಪೊಲೀಸರು ತನಿಖೆ ಆರಂಭಿಸಿರುವ ಬಗ್ಗೆ ಸಂತೋಷ ವ್ಯಕ್ತಪಡಿಸಿ, ಎಸ್‌ಐಓನ ಹೋರಾಟಕ್ಕೆ ತಮ್ಮ ಸಂಪೂರ್ಣ ಬೆಂಬಲವಿರುವುದಾಗಿ ಹೇಳಿದರು.
ಆನಂತರ ವೆಲ್ಫೇರ್ ಪಾರ್ಟಿ ಜಿಲ್ಲಾ ಕಾರ್ಯದರ್ಶಿ ಮುನೀರ್ ಪದ್ರಂಗಿ ಮಾತನಾಡಿ, ರಾಜ್ಯದಲ್ಲಿ ಬಜರಂಗದಳವನ್ನು ನಿಷೇಧಿಸಬೇಕೆಂದು ಮತ್ತು ಎರಡು ಕುಟುಂಬಗಳಿಗೂ ತಲಾ ₹50 ಲಕ್ಷ ಪರಿಹಾರ ಘೋಷಿಸಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಎಸ್‌ಐಓ ಕರ್ನಾಟಕ ರಾಜ್ಯ ಕಾರ್ಯದರ್ಶಿ ಆಸಿಫ್ ಡಿ ಕೆ ಮಾತನಾಡಿ, ರಾಜ್ಯ ಸರ್ಕಾರವು ಸಮುದಾಯಗಳ ನಡುವೆ ಶಾಂತಿಯನ್ನು ಕಾಪಾಡುವಲ್ಲಿ ವಿಫಲವಾಗಿದೆ ಎಂದು ಟೀಕಿಸಿದರು. ಅಬ್ದುಲ್ ರಹ್ಮಾನ್ ಅವರ ಪತ್ನಿಗೆ ಸರಕಾರಿ ಉದ್ಯೋಗ ನೀಡಬೇಕೆಂದು ಒತ್ತಾಯಿಸಿದರು ಮತ್ತು ₹50 ಲಕ್ಷ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಇದನ್ನು ಓದಿದ್ದೀರಾ? ಅಂತರ್ಜಾತಿ ವಿವಾಹ | ಶುದ್ಧೀಕರಣ ಹೆಸರಲ್ಲಿ ತಲೆ ಬೋಳಿಸಿಕೊಂಡ ಯುವತಿ ಕುಟುಂಬದ 40 ಸದಸ್ಯರು
ಪ್ರತಿಭಟನೆಯಲ್ಲಿ ಎಸ್‌ಐಓ ಹಾಗೂ ಸೋಲಿಡಾರಿಟಿ ಯೂತ್ ಮೂವ್ಮೆಂಟ್ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು.



