ಅಂಚೆ ಇಲಾಖೆಯ ಮಂಗಳೂರು ವಿಭಾಗವು ಫಿಟ್ ಇಂಡಿಯಾ ಮಿಷನ್ ಅಡಿಯಲ್ಲಿ ಸಂಡೇಸ್ ಓನ್ ಸೈಕಲ್(Sundays on Cycle) ಅಭಿಯಾನವನ್ನು ಆಯೋಜಿಸಿತ್ತು.
ಕರ್ನಾಟಕ ವೃತ್ತದ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಆಗಿರುವ ಎಸ್ ರಾಜೇಂದ್ರ ಕುಮಾರ್ ಅವರು ಸೈಕ್ಲಿಂಗ್ ಅನ್ನು ಉದ್ಘಾಟಿಸಿದರು. ಬಳಿಕ ಸೈಕ್ಲಿಂಗ್‌ನ ಪ್ರಾಮುಖ್ಯತೆಯನ್ನು ತಿಳಿಸಿ, “ಹಸಿರು ಮತ್ತು ಫಿಟ್‌ನೆಸ್ ಇರುವ ಭಾರತಕ್ಕಾಗಿ, ಆರೋಗ್ಯಕರ ಜೀವನಕ್ಕಾಗಿ ಜಾಗೃತಿ ಮೂಡಿಸಲು ಇಲಾಖೆಯ ಸಿಬ್ಬಂದಿಗಳು ಬದ್ಧರಾಗಿರಬೇಕು” ಎಂದರು.
ಈ ಅಭಿಯಾನವು ಸೈಕ್ಲಿಂಗ್ ಅಭ್ಯಾಸವನ್ನು ಉತ್ತೇಜಿಸಲು, ಮೋಟಾರು ವಾಹನಗಳ ಬಳಕೆಯನ್ನು ಕಡಿಮೆ ಮಾಡಲು, ಇಂಧನ ಬಳಕೆಯನ್ನು ಕಡಿಮೆ ಮಾಡಲು ಮತ್ತು ಮಾನವನ ಫಿಟ್‌ನೆಸ್ ಮತ್ತು ದೀರ್ಘಾಯುಷ್ಯವನ್ನು ಹೆಚ್ಚಿಸಲು ಉದ್ದೇಶಿಸಲಾಗಿದೆ. ಫಿಟ್‌ನೆಸ್ ಅನ್ನುವುದು ನಮ್ಮ ದೈನಂದಿನ ಜೀವನದ ಅವಿಭಾಜ್ಯ ಅಂಗ. ಸೈಕಲ್ ಬಳಸುವುದರಿಂದ ಆರೋಗ್ಯಕರವಾಗಿರಬಹುದು. ಸುಸ್ಥಿರ ಸಾರಿಗೆಯಾಗಿ ಉತ್ತೇಜಿಸಲು ಹಾಗೂ ಇದನ್ನು ಸಾಧಿಸುವ ಉದ್ದೇಶದಿಂದ ಸಂಡೇಸ್ ಓನ್ ಸೈಕಲ್ ಅಭಿಯಾನವನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಈ ರ್‍ಯಾಲಿಯಲ್ಲಿ ಮಂಗಳೂರಿನ 100ಕ್ಕೂ ಹೆಚ್ಚು ಸಿಬ್ಬಂದಿಗಳು ಭಾಗವಹಿಸಿದ್ದರು. ಮಂಗಳೂರು ಅಂಚೆ ವಿಭಾಗದ ಹಿರಿಯ ಅಂಚೆ ಅಧೀಕ್ಷಕರಾದ ಎಂ ಸುಧಾಕರ ಮಲ್ಯ, ಉಪ ಅಂಚೆ ಅಧೀಕ್ಷಕರಾದ ದಿನೇಶ್ ಪಿ, ಮಂಗಳೂರಿನ ಪ್ರಧಾನ ಅಂಚೆ ಕಚೇರಿಯ ಹಿರಿಯ ಅಂಚೆ ಪಾಲಕರಾದ ಶ್ರೀನಾಥ್ ಎನ್ ಬಿ, ಆರ್.ಎಮ್.ಎಸ್, ಮಂಗಳೂರು ಅಧೀಕ್ಷಕರಾದ ರವೀಂದ್ರ ನಾಯ್ಕ್, ಮಂಗಳೂರು ಪೂರ್ವ ಉಪವಿಭಾಗದ ಸಹಾಯಕ ಅಧೀಕ್ಷಕ ಸಿ ಪಿ ಹರೀಶ್ ಅವರು ರ್‍ಯಾಲಿಯಲ್ಲಿ ಭಾಗವಹಿಸಿದ್ದರು.
ಇದನ್ನು ಓದಿದ್ದೀರಾ? ಬೆಳಗಾವಿ | ಫೈನಾನ್ಸ್ ಕಂಪನಿಯಿಂದ ಮನೆಗೆ ಬೀಗ: ವಿಶೇಷ ಚೇತನ ಮಗುವಿನೊಂದಿಗೆ ಬೀದಿಗೆ ಬಿದ್ದ ಕುಟುಂಬ!
ಬೆಳಗ್ಗೆ 8 ಗಂಟೆಗೆ ಮಂಗಳೂರು ಪ್ರಧಾನ ಅಂಚೆ ಕಚೇರಿ, ಪಾಂಡೇಶ್ವರದಿಂದ ರ್‍ಯಾಲಿ ಪ್ರಾರಂಭವಾಗಿ, ಎಬಿ ಶೆಟ್ಟಿ ವೃತ್ತ, ಪೊಲೀಸ್ ಆಯುಕ್ತರ ಕಚೇರಿ, ಸ್ಟೇಟ್ ಬ್ಯಾಂಕ್, ಟೌನ್ ಹಾಲ್, ಕ್ಲಾಕ್ ಟವರ್, ಯುನಿವರ್ಸಿಟಿ ಕಾಲೇಜು, ಆರ್‌ಟಿಒ, ಕಾರ್ಪೊರೇಷನ್ ಬ್ಯಾಂಕ್ ವೃತ್ತದ ಮೂಲಕ ಸಾಗಿ ಬೆಳಗ್ಗೆ 9 ಗಂಟೆಗೆ ಮಂಗಳೂರು ಪ್ರಧಾನ ಅಂಚೆ ಕಚೇರಿಯಲ್ಲಿ ಮುಕ್ತಾಯವಾಯಿತು.
