ಮಂಗಳೂರು ನಗರದ ಮಂಗಳಾದೇವಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಹಿನ್ನೆಲೆಯಲ್ಲಿ ಪೂಜೆಗೆಂದು ತೆರಳಿದ್ದ ವೇಳೆ ಮೂವರು ಮಹಿಳೆಯರ ಚಿನ್ನದ ಸರಗಳು ಕಳವುಗೈದಿರುವ ಘಟನೆ ನಡೆದಿದ್ದು, ಈ ಸಂಬಂಧ ಪಾಂಡೇಶ್ವರದಲ್ಲಿರುವ ಮಂಗಳೂರು ನಗರ ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
“ನಾನು ಮತ್ತು ಚಿಕ್ಕಮ್ಮ ಲೀಲಾ (55 ವರ್ಷ) ನವರಾತ್ರಿ ಪ್ರಯುಕ್ತ ಇದೇ 11ರಂದು ಮಂಗಳಾದೇವಿ ದೇವಸ್ಥಾನಕ್ಕೆ ತೆರಳಿದ್ದೆವು. ಊಟ ಮುಗಿಸಿ ದೇವಸ್ಥಾನದ ಅಂಗಳದಲ್ಲಿ ಕುಳಿತಿದ್ದಾಗ ಚಿಕ್ಕಮ್ಮನ ಕುತ್ತಿಗೆಯಲ್ಲಿದ್ದ ಸುಮಾರು 6 ಪವನ್ ತೂಕದ ಚಿನ್ನದ ಸರ ಕಾಣೆಯಾಗಿದ್ದು ಕಂಡುಬಂತು” ಎಂದು ಸ್ಮಿತಾ ಎಂಬುವರು ದೂರು ನೀಡಿದ್ದಾರೆ.
ಅದೇ ದಿನ ದೇವಸ್ಥಾನಕ್ಕೆ ತೆರಳಿದ್ದ ಕಮಲಾಕ್ಷಿ (75 ವರ್ಷ) ಎಂಬುವರ 30 ಗ್ರಾಂ (ಮೂರು ಮುಕ್ಕಾಲು ಪವನ್) ತೂಕದ ಚಿನ್ನದ ಹಾಗೂ ಇನ್ನೊಬ್ಬ ಮಹಿಳೆ ಮೀನಾಕ್ಷಿ (75 ವರ್ಷ) ಅವರ 36 ಗ್ರಾಂ (ನಾಲ್ಕೂವರೆ ಪವನ್) ತೂಕದ ಚಿನ್ನದ ಸರ ಕಾಣೆಯಾಗಿದೆ. ಮೂವರು ಮಹಿಳೆಯರ ಚಿನ್ನಾಭರಣಗಳನ್ನು ಯಾರೋ ಕಳವು ಮಾಡಿರಬಹುದು ಎಂದು ಶಂಕಿಸಲಾಗಿದೆ. ಕಳವಾದ ಚಿನ್ನಾಭರಣಗಳ ಅಂದಾಜು ಮೌಲ್ಯ ₹ 4 ಲಕ್ಷ ಎಂದು ಮಂಗಳೂರು ಪೊಲೀಸರು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ರೈಲಿನಿಂದ ಯುವತಿ ಅಪಹರಣ; ಮೂವರು ಕಾಮುಕರಿಂದ ಸಾಮೂಹಿಕ ಅತ್ಯಾಚಾರ
ಮೂರು ಪ್ರಕರಣಗಳನ್ನು ದಾಖಲಿಸಿಕೊಂಡಿರುವ ಮಂಗಳೂರು ನಗರ ದಕ್ಷಿಣ ಪೊಲೀಸರು, ತನಿಖೆ ಮುಂದುವರಿಸಿದ್ದಾರೆ.
