ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ಕೆಎಸ್ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸುವ ವೇಳೆ ನಿದ್ದೆಯಲ್ಲಿದ್ದ ಯುವತಿಯ ಮೇಲೆ ಬಸ್ಸಿನ ಕಂಡಕ್ಟರ್ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆಗೆ ಸಂಬಂಧಿಸಿದಂತೆ ಆರೋಪಿ ಕಂಡಕ್ಟರ್ ಪ್ರದೀಪ್ ಎಂಬಾತನನ್ನು ಸೇವೆಯಿಂದಲೇ ವಜಾ ಮಾಡುವಂತೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿಯವರು ಸೂಚನೆ ನೀಡಿದ್ದಾರೆ.
ಈ ಬಗ್ಗೆ ಗುರುವಾರ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದಿರುವ ಸಾರಿಗೆ ಸಚಿವರು, “ಈ ಘಟನೆಗೆ ಸಂಬಂಧಪಟ್ಟಂತೆ ಕೂಡಲೇ ವಿಚಾರಣಾ ಪ್ರಕ್ರಿಯೆ ಪ್ರಾರಂಭಿಸಿ, ತ್ವರಿತವಾಗಿ ವಿಚಾರಣೆ ಮುಗಿಸಿ, ಆ ನಿರ್ವಾಹಕನನ್ನು ಸೇವೆಯಿಂದಲೇ ವಜಾ ಮಾಡಲು ಕ್ರಮ ಕೈಗೊಳ್ಳಿ” ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
“ಇಂದು ಮಂಗಳೂರು ವಿಭಾಗದ ಕೆ ಎಸ್ ಆರ್ ಟಿ ಸಿ ಬಸ್ಸಿನಲ್ಲಿ ನಿರ್ವಾಹಕನೊಬ್ಬ ಮಹಿಳಾ ಪ್ರಯಾಣಿಕರೊಡನೆ ಅತ್ಯಂತ ಕೆಟ್ಟದಾಗಿ ನಡೆದುಕೊಂಡಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾದ ವಿಡಿಯೋಗೆ ಸಂಬಂಧಪಟ್ಟಂತೆ, ಮೇಲ್ನೋಟಕ್ಕೆ ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ ಈಗಾಗಲೇ ನಿರ್ವಾಹಕನನ್ನು ಅಮಾನತು ಮಾಡಿರುವುದು ಸರಿಯಷ್ಟೇ. ಬಸ್ಸಿನಲ್ಲಿ ಪ್ರಯಾಣಿಸುವ ಪ್ರತಿಯೊಬ್ಬ ಹೆಣ್ಣು ಮಕ್ಕಳೊಡನೆ ಗೌರವದೊಂದಿಗೆ ನಡೆದುಕೊಳ್ಳುವುದು ನಮ್ಮ ಸಿಬ್ಬಂದಿಗಳ ಆದ್ಯ ಕರ್ತವ್ಯವಾಗಿರಬೇಕು. ಈ ರೀತಿಯ ಅಸಹ್ಯಕರ ನಡವಳಿಕೆ ಅಕ್ಷಮ್ಯ ಅಪರಾಧ” ಎಂದು ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಮಂಗಳೂರು | ಚಲಿಸುತ್ತಿದ್ದ ಬಸ್‌ನಲ್ಲಿ ಯುವತಿ ಮೇಲೆ ಕಂಡಕ್ಟರ್‌ನಿಂದ ಲೈಂಗಿಕ ದೌರ್ಜನ್ಯ

“ಕೆ ಎಸ್ ಆರ್ ಟಿ ಸಿ ಬಸ್ಸುಗಳು ಹಾಗೂ ಚಾಲಕ ನಿರ್ವಾಹಕರ ಬಗ್ಗೆ ಸಾರ್ವಜನಿಕ ಪ್ರಯಾಣಿಕರು ಅತೀವ ನಂಬಿಕೆ ಮತ್ತು ಪ್ರೀತಿ ಹೊಂದಿದ್ದಾರೆ. ಕೆಲವೊಬ್ಬರು ಮಾಡುವ ಈ ರೀತಿಯ ಕೆಲಸಗಳು ಸಂಸ್ಥೆ ಹಾಗೂ ಸಿಬ್ಬಂದಿಗಳ ಗೌರವಕ್ಕೆ ಧಕ್ಕೆ ತರುವಂತಹದು. ಈ ಘಟನೆಗೆ ಸಂಬಂಧಪಟ್ಟಂತೆ ಕೂಡಲೇ ವಿಚಾರಣಾ ಪ್ರಕ್ರಿಯೆ ಪ್ರಾರಂಭಿಸಿ, ತ್ವರಿತವಾಗಿ ವಿಚಾರಣೆ ಮುಗಿಸಿ, ಆ ನಿರ್ವಾಹಕನನ್ನು ಸೇವೆಯಿಂದಲೇ ವಜಾ ಮಾಡಲು ಕ್ರಮಕೈಗೊಳ್ಳುವಂತೆ ಸೂಚಿಸಿದ್ದೇನೆ” ಎಂದು ತಿಳಿಸಿದ್ದಾರೆ.
ಏನಿದು ಘಟನೆ?
ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸುವ ವೇಳೆ ನಿದ್ದೆಯಲ್ಲಿದ್ದ ಯುವತಿಯ ಮೇಲೆ ಬಸ್‌ನ ಕಂಡಕ್ಟರ್ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ನಡೆದಿದೆ. ಘಟನೆಯ ವಿಡಿಯೋ ಹೊರ ಬಂದ ಬಳಿಕ ಬೆಳಕಿಗೆ ಬಂದಿದೆ.
ಮಂಗಳೂರು ಡಿಪೋದಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ ಕಂಡಕ್ಟರ್‌ನನ್ನು ಬಾಗಲಕೋಟೆ ಮೂಲದ ಪ್ರದೀಪ್ ಎಂದು ಗುರುತಿಸಲಾಗಿದೆ.
ಬುಧವಾರ, ಮಂಗಳೂರಿನಿಂದ ಮುಡಿಪು ಮಾರ್ಗದಲ್ಲಿ ಸಂಚರಿಸುವ ಕೆಎಸ್‌ಆರ್‌ಟಿಸಿ ನಗರ ಸಾರಿಗೆಯಲ್ಲಿ ಕಂಡಕ್ಟರ್ ಕೃತ್ಯ ಎಸಗಿದ್ದಾನೆ. ಆತನ ಕೃತ್ಯವನ್ನು ಸಹ ಪ್ರಯಾಣಿಕರೊಬ್ಬರು ವಿಡಿಯೋ ಮಾಡಿದ್ದಾರೆ. ವಿಡಿಯೋದಲ್ಲಿ ಆರೋಪಿ ಕಂಡಕ್ಟರ್ ಎಸಗಿರುವ ದುಷ್ಕೃತ್ಯ ಸೆರೆಯಾಗಿದೆ. ವಿಡಿಯೋ ಬೆಳಕಿಗೆ ಬಂದ ಕೂಡಲೇ, ಕೊಣಾಜೆ ಪೊಲೀಸ್ ಠಾಣೆಯ ಪೊಲೀಸರು ಬಿಎಸ್‌ಎನ್ ಸೆಕ್ಷನ್ 74, 75 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಯನ್ನು ವಶಕ್ಕೆ ಪಡೆದಿದ್ದು, ತನಿಖೆ ನಡೆಸುತ್ತಿದ್ದಾರೆ.