ರಾಜ್ಯದ ಕರಾವಳಿ ನಗರವಾದ ಮಂಗಳೂರಿನಲ್ಲಿ ನೂತನವಾಗಿ ನಿರ್ಮಾಣಗೊಳ್ಳಲಿರುವ ಹಜ್ ಭವನಕ್ಕಾಗಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ಉದ್ಯಮಿ ಇನಾಯತ್ ಅಲಿ ಹಾಗೂ ಅವರ ಕುಟುಂಬ ಮಂಗಳೂರಿನ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಸುಮಾರು ಎಂಟು ಕೋಟಿ ಮೌಲ್ಯದ ಒಂದು ಎಕರೆ ಎಂಬತ್ತು ಸೆಂಟ್ಸ್ ಜಮೀನನ್ನು ಕರ್ನಾಟಕ ರಾಜ್ಯ ಹಜ್ ಸಮಿತಿಗೆ ದಾನವಾಗಿ ನೀಡುವ ಮೂಲಕ ಮಾದರಿಯಾಗಿದ್ದಾರೆ.
ಕಳೆದ ಕೆಲವು ತಿಂಗಳುಗಳ ಹಿಂದೆಯೇ ತಮ್ಮ ಜಮೀನನ್ನು ದಾನ ಮಾಡಲು ಉದ್ದೇಶಿಸಿದ್ದ ಇನಾಯತ್ ಅಲಿ ಕುಟುಂಬವು, ರಾಜ್ಯ ಹಜ್ ಕಮಿಟಿಯ ಮುಖಂಡರನ್ನು ಸಂಪರ್ಕಿಸಿ ಮಾಹಿತಿ ನೀಡಿದ್ದರು. ಆ ಬಳಿಕ ಜಮೀನಿನ ದಾಖಲೆಗಳನ್ನು ಪರಿಶೀಲಿಸಿದ್ದ ಹಜ್ ಕಮಿಟಿಯು ಎಲ್ಲ ಪ್ರಕ್ರಿಯೆಗಳನ್ನು ಇತ್ತೀಚೆಗಷ್ಟೇ ಮುಗಿಸಿತ್ತು. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಸಮ್ಮುಖದಲ್ಲಿ ಉದ್ಯಮಿ ಡಾ. ಯೆನೆಪೋಯ ಅಬ್ದುಲ್ಲಾ ಕುಂಞಿಯವರ ಮನೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಜಮೀನಿನ ದಾಖಲೆ ಪತ್ರಕ್ಕೆ ಸಹಿ ಹಾಕಿ, ಹಸ್ತಾಂತರಿಸುವ ಪ್ರಕ್ರಿಯೆ ನಡೆಯಿತು.
ಈ ಬಗ್ಗೆ ಈದಿನ ಡಾಟ್ ಕಾಮ್ ಜೊತೆಗೆ ಮಾತನಾಡಿದ ದ.ಕ. ವಕ್ಫ್ ಜಿಲ್ಲಾ ಸಲಹಾ ಸಮಿತಿ ಅಧ್ಯಕ್ಷ ಬಿ.ಎ. ಅಬ್ದುಲ್ ನಾಸಿರ್ ಲಕ್ಕಿ ಸ್ಟಾರ್, “ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕಿಂತ ಒಂದೂವರೆ ಕಿಲೋಮೀಟರ್ ದೂರದಲ್ಲಿ ರಸ್ತೆ ಬದಿಯಲ್ಲೇ ಈ ಬೆಲೆಬಾಳುವ ಭೂಮಿ ಇದೆ. ಇಂದಿನ ಮಾರುಕಟ್ಟೆ ಮೌಲ್ಯದಲ್ಲಿ ಸುಮಾರು 8 ಕೋಟಿ ಬೆಲೆ ಬಾಳುವ ಜಮೀನನ್ನು ಇನಾಯತ್ ಅಲಿ ಕುಟುಂಬ ಹಜ್ ಕಮಿಟಿಗೆ ದಾನ ಮಾಡಿದೆ. ಇದು ಮಂಗಳೂರಿನ ವಿಮಾನ ನಿಲ್ದಾಣಕ್ಕೆ ಕೆಲವೇ ದೂರದಲ್ಲಿದೆ. ಇದರಿಂದಾಗಿ ಮಂಗಳೂರಿನಿಂದ ಮುಂದಿನ ದಿನಗಳಲ್ಲಿ ನೇರವಾಗಿ ಹಜ್‌ಗೆ ಹಜ್ ಯಾತ್ರಿಕರು ತೆರಳುವುದಕ್ಕೆ ನೆರವಾಗಲಿದೆ. ಜಮೀನು ದಾನವಾಗಿ ಸಿಕ್ಕಿರುವುದರಿಂದ ಕಮಿಟಿಗೆ ಹಜ್ ಭವನಕ್ಕೆ ನಿರ್ಮಾಣಕ್ಕೆ ಇದ್ದ ದೊಡ್ಡ ತೊಡಕು ನಿವಾರಣೆಯಾಗಿದೆ. ಇದಕ್ಕಾಗಿ ಕರಾವಳಿಯ ಜನರ ಪರವಾಗಿ ಇನಾಯತ್ ಅಲಿ ಕುಟುಂಬಕ್ಕೆ ಧನ್ಯವಾದ ಸಲ್ಲಿಸುತ್ತೇನೆ. ಅವರ ದಾನವನ್ನು ಅಲ್ಲಾಹನು ಸ್ವೀಕರಿಸಲಿ” ಎಂದು ತಿಳಿಸಿದರು.

ಈ ವೇಳೆ ಕರ್ನಾಟಕ ರಾಜ್ಯ ಹಜ್ ಸಮಿತಿಯ ಅಧ್ಯಕ್ಷ ಝುಲ್ಫಿಕರ್ ಅಹ್ಮದ್ ಟಿಪ್ಪು, ರಾಜ್ಯ ಹಜ್ ಸಮಿತಿಯ ಕಾರ್ಯನಿರ್ವಾಹಕ ಅಧಿಕಾರಿ ಎಸ್ ಸರ್ಫರಾಝ್ ಖಾನ್, ಯೆನೆಪೋಯ ವಿಶ್ವವಿದ್ಯಾಲಯದ ಕುಲಪತಿ ಡಾ. ಯೆನೆಪೋಯ ಅಬ್ದುಲ್ಲಾ ಕುಂಞಿ, ರಾಜ್ಯ ಅಲೈಡ್ ಎಂಡ್ ಹೆಲ್ತ್ ಕೇರ್ ಕೌನ್ಸಿಲ್ ಅಧ್ಯಕ್ಷರಾದ ಡಾ.ಯು.ಟಿ.ಇಫ್ತಿಕಾರ್ ಫರೀದ್, ಉದ್ಯಮಿಗಳಾದ ರಿಯಾಝ್ ಬಾವಾ, ಎಸ್.ಎಂ. ರಶೀದ್ ಹಾಜಿ, ನಿವೃತ್ತ ಪೊಲೀಸ್ ಅಧಿಕಾರಿ ಜಿ.ಎ. ಬಾವಾ, ಅಹ್ಮದ್ ಬಾವಾ, ಬಿ. ಎಸ್. ಬಶೀರ್, ರಾಜ್ಯ ಹಜ್ ಸಮಿತಿಯ ಸದಸ್ಯರಾದ ಸೈಯ್ಯದ್ ಮುಜಾಹಿದ್, ವಕೀಲರಾದ ಅಬ್ದುಲ್ ಅಝೀಝ್, ದ.ಕ. ವಕ್ಫ್ ಜಿಲ್ಲಾ ಸಲಹಾ ಸಮಿತಿ ಅಧ್ಯಕ್ಷ
ಬಿ.ಎ. ಅಬ್ದುಲ್ ನಾಸಿರ್ ಲಕ್ಕಿ ಸ್ಟಾರ್, ದ.ಕ. ಜಿಲ್ಲಾ ಹಜ್ ಕಮಿಟಿಯ ಸದಸ್ಯರಾದ ಸೈಯ್ಯದ್ ಅಶ್ರಫ್ ತಂಙಳ್, ಇನಾಯತ್ ಅಲಿಯವರ ಕುಟುಂಬದ ಸದಸ್ಯರು ಸೇರಿದಂತೆ ಹಲವರಿದ್ದರು.
ಏಪ್ರಿಲ್ 24ರಂದು ಹಜ್ ಭವನಕ್ಕೆ ಶಂಕುಸ್ಥಾಪನಾ ಸಮಾರಂಭ
ಹಜ್ ಭವನ ನಿರ್ಮಾಣ ಪ್ರಕ್ರಿಯೆ ಯಾವಾಗ ಆರಂಭವಾಗಲಿದೆ ಎಂದು ಈದಿನ ಡಾಟ್ ಕಾಮ್ ಅಬ್ದುಲ್ ನಾಸಿರ್ ಲಕ್ಕಿ ಸ್ಟಾರ್ ಅವರಲ್ಲಿ ಕೇಳಿದಾಗ, “ದಾಖಲೆಗಳ ಪ್ರಕ್ರಿಯೆ ಮುಗಿದಿದೆ. ಹೀಗಾಗಿ, ಮುಂದಿನ ಏಪ್ರಿಲ್ 24ರಂದು ಹಜ್ ಭವನಕ್ಕೆ ಅಡಿಗಲ್ಲು ಹಾಕುವ ಸಮಾರಂಭವನ್ನು ನಡೆಸಲು ರಾಜ್ಯ ಹಜ್ ಕಮಿಟಿಯು ಉದ್ದೇಶಿಸಿದೆ” ಎಂದು ಮಾಹಿತಿ ನೀಡಿದರು.

“ಈ ಸಮಾರಂಭದಲ್ಲಿ ಪೌರಾಡಳಿತ ಹಾಗೂ ಹಜ್ ಖಾತೆ ಸಚಿವ ರಹೀಂಖಾನ್, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸಚಿವರಾದ ಝಮೀರ್ ಅಹ್ಮದ್ ಖಾನ್, ಇನಾಯತ್ ಅಲಿ ಕುಟುಂಬ, ಹಜ್ ಕಮಿಟಿಯ ಪದಾಧಿಕಾರಿಗಳು ಸೇರಿದಂತೆ ಹಲವಾರು ಧಾರ್ಮಿಕ ಪಂಡಿತರು ಭಾಗವಹಿಸಲಿದ್ದಾರೆ” ಎಂದು ತಿಳಿಸಿದರು.
ನಿರ್ಮಾಣವಾಗಲಿರುವ ‘ಮಂಗಳೂರು ಹಜ್ ಭವನ’ದಲ್ಲಿ ಏನೆಲ್ಲ ಇರಲಿದೆ?
ಮುಂದಿನ ದಿನಗಳಲ್ಲಿ ನಿರ್ಮಾಣವಾಗಲಿರುವ ಹಜ್ ಭವನವು ನೆಲ ಅಂತಸ್ತು ಸೇರಿ ಎರಡು ಮಹಡಿಗಳು ಇರಲಿದೆ. ಇದರಲ್ಲಿ ಸುಮಾರು 200 ಮಂದಿ ಹಜ್ ಯಾತ್ರಾರ್ಥಿಗಳು ತಂಗಲಿರುವ ವ್ಯವಸ್ಥೆ ಕೂಡ ಇರಲಿದ್ದು, ಸುಮಾರು 20 ಕೋಟಿ ವೆಚ್ಚದಲ್ಲಿ ಹಜ್ ಭವನ ನಿರ್ಮಾಣವಾಗಲಿದೆ. ಈಗಾಗಲೇ ರಾಜ್ಯ ಸರ್ಕಾರವು 10 ಕೋಟಿ ಮೊತ್ತವನ್ನು ನೀಡಿರುವುದಾಗಿ ಎಂದು ಹಜ್ ಕಮಿಟಿ ಮಾಹಿತಿ ನೀಡಿದೆ.
ಮಂಗಳೂರಿನ ಹಜ್ ಭವನದಲ್ಲಿ ಮಸೀದಿ ಹಾಗೂ ಸುಮಾರು 2000 ಮಂದಿ ಭಾಗವಹಿಸುವಷ್ಟು ವ್ಯವಸ್ಥೆ ಇರುವ ಸಭಾಂಗಣ ಇರಲಿದ್ದು, ಈ ಸಭಾಂಗಣವನ್ನು ಮುಂದಿನ ದಿನಗಳಲ್ಲಿ ಮದುವೆ ಸಹಿತ ಇನ್ನಿತರ ಸಮಾರಂಭಗಳಿಗೆ ಬಳಸಿಕೊಳ್ಳಲು ಉದ್ದೇಶಿಸಿದೆ. ಶಂಕುಸ್ಥಾಪನಾ ಸಮಾರಂಭದ ಬಳಿಕ ಎಲ್ಲ ವಿವರವನ್ನು ಅಧಿಕೃತವಾಗಿ ಹಜ್ ಕಮಿಟಿ ನೀಡಲಿದೆ.
ಮಂಗಳೂರಿನಲ್ಲಿ ನೂತನವಾಗಿ ನಿರ್ಮಾಣಗೊಳ್ಳಲಿರುವ ಹಜ್ ಭವನಕ್ಕಾಗಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಹಾಗೂ ಸಹೋದರರು ತಮ್ಮ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಸುಮಾರು ಎಂಟು ಕೋಟಿ ಮೌಲ್ಯದ ಒಂದು ಎಕರೆ ಎಂಬತ್ತು ಸೆಂಟ್ಸ್ ಸ್ಥಳವನ್ನು ರಾಜ್ಯ ಹಜ್ ಸಮಿತಿಗೆ ದಾನವಾಗಿ ನೀಡಿದರು. ಅಲ್ಲಾಹನು ಇವರ ಸತ್ಕರ್ಮವನ್ನು ಸ್ವೀಕರಿಸಲಿ. pic.twitter.com/u8xMjdjQl6
— Irshad Venur (@irshad_venur) April 10, 2025
‘ಮಂಗಳೂರಿನಿಂದ ಹಜ್ ಯಾತ್ರೆಗೆ ನೇರ ವಿಮಾನಕ್ಕೆ ಕೇಂದ್ರಕ್ಕೆ ಮನವಿ’
“ಈ ಹಿಂದೆ ಮಂಗಳೂರಿನಿಂದಲೇ ಹಜ್ ಯಾತ್ರಿಕರಿಗೆ ನೇರ ವಿಮಾನ ಯಾನ ಸೌಲಭ್ಯ ಇತ್ತು. ಕೋವಿಡ್ ಬಳಿಕ ಇಂತಹ ವ್ಯವಸ್ಥೆ ಸ್ಥಗಿತಗೊಂಡಿದೆ. ಇದನ್ನು ಪುನರಾರಂಭಿಸಲು ಕೇಂದ್ರ ಸರಕಾರಕ್ಕೆ ನಿರಂತರ ನಿರಂತರ ಮನವಿ ಮಾಡಲಾಗಿದೆ. ರಾಜ್ಯದ ಕರಾವಳಿ ಮತ್ತು ಮಲೆನಾಡಿನ 5 ಜಿಲ್ಲೆಗಳ ಹಜ್ ಯಾತ್ರಿಗಳಿಗೆ ಇದರಿಂದ ಬಹಳಷ್ಟು ನೆರವಾಗಲಿದೆ” ಎಂದು ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಅಬ್ದುಲ್ ನಾಸಿರ್ ಲಕ್ಕಿಸ್ಟಾರ್ ಇದೇ ವೇಳೆ ತಿಳಿಸಿದ್ದಾರೆ.
ಇನಾಯತ್ ಅಲಿ ಕಾರ್ಯಕ್ಕೆ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕ ಮೆಚ್ಚುಗೆ
ಕಾಂಗ್ರೆಸ್ ಮುಖಂಡ ಇನಾಯತ್ ಅಲಿಯವರು ಹಜ್ ಭವನಕ್ಕೆ ಜಮೀನು ದಾನ ಮಾಡಿರುವ ವಿಚಾರ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದ್ದು, ಹಲವರಿಂದ ಮೆಚ್ಚುಗೆಗೆ ಪಾತ್ರವಾಗಿದೆ.

ಈ ಬಗ್ಗೆ ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿರುವ ಸನ್ಮಾರ್ಗ ಪತ್ರಿಕೆಯ ಸಂಪಾದಕರಾದ ಏ.ಕೆ. ಕುಕ್ಕಿಲ, “ಮಂಗಳೂರಿನ ಹೃದಯ ಭಾಗದಲ್ಲಿ ಒಂದೂವರೆ ಎಕರೆ ಭೂಮಿಯನ್ನು ಕಾಂಗ್ರೆಸ್ ಮುಖಂಡ ಇನಾಯತುಲ್ಲ ವಕ್ಫ್ ಮಾಡಿದ್ದಾರೆ. ಹಜ್ ಭವನ ನಿರ್ಮಿಸುವುದಕ್ಕಾಗಿ ದಿನದ ಹಿಂದೆ ಅವರು ಈ ದಾನ ಮಾಡಿದ್ದಾರೆ. ಮಂಗಳೂರಿನ ವಿಮಾನ ನಿಲ್ದಾಣಕ್ಕಿಂತ ಒಂದೂವರೆ ಕಿಲೋಮೀಟರ್ ದೂರದಲ್ಲಿ ರಸ್ತೆ ಬದಿಯಲ್ಲೇ ಈ ಬೆಲೆಬಾಳುವ ಭೂಮಿ ಇದೆ. ಇದು ಸುಮಾರು 8 ಕೋಟಿ ರೂಪಾಯಿಗಿಂತಲೂ ಅಧಿಕ ಬೆಲೆ ಬಾಳುತ್ತದೆ ಎಂದು ಅಂದಾಜು. ಉದ್ದೇಶಿತ ಈ ಹಜ್ ಭವನದಲ್ಲಿ ಮಸೀದಿ ಇರಲಿದೆ ಮತ್ತು ಹಜ್ ಗೆ ಹೋಗುವವರಿಗೆ ತರಬೇತಿಗೆಂದು ವಿವಿಧ ವ್ಯವಸ್ಥೆ, ಸೌಲಭ್ಯಗಳು ಇರಲಿವೆ. ಹಾಗಂತ ಈ ಬೆಲೆಬಾಳುವ ಭೂಮಿಯನ್ನು ವಕ್ಫ್ ಮಾಡಿದ ಇನಾಯತ್ ಅಲಿಯವರು ಅಂಬಾನಿಯೂ ಅಲ್ಲ, ಅದಾನಿಯೂ ಅಲ್ಲ. ಮಾತ್ರ ಅಲ್ಲ ಹೀಗೆ ವಕ್ಫ್ ಮಾಡಿದ ಬಳಿಕ ಆ ಭೂಮಿಯಲ್ಲಿ ಒಂದಿಂಚು ಹಕ್ಕೂ ಅವರಿಗಿಲ್ಲ. ಅಷ್ಟು ಮಾತ್ರ ಅಲ್ಲ, ಅವರ ಮಕ್ಕಳೋ ಮೊಮ್ಮಕ್ಕಳೋ ಭವಿಷ್ಯದಲ್ಲಿ ಅಂಥದ್ದೊಂದು ಹಕ್ಕು ಸಾಧಿಸುವುದಕ್ಕೂ ಆಗುವುದಿಲ್ಲ. ಅಂದಹಾಗೆ, ಯಾಕೆ ಇನಾಯತ್ ಅಲಿಯವರ ಈ ವಕ್ಫ್ ವಿಚಾರವನ್ನು ಇಲ್ಲಿ ಉಲ್ಲೇಖಿಸಿದ್ದೇನೆ ಎಂದರೆ, ವಕ್ಫ್ ಭೂಮಿ ಎಂಬುದು ಹಿಂದೂಗಳಿಂದ ಕಸಿದುಕೊಂಡದ್ದು, ಸ್ವಾತಂತ್ರ್ಯದ ಸಮಯದಲ್ಲಿ ಎಷ್ಟು ವಕ್ಫ್ ಭೂಮಿ ಇತ್ತೋ ಇವತ್ತು ಅದು ಡಬಲ್ ಆಗಿದೆ. ಸಿಕ್ಕಸಿಕ್ಕ ಭೂಮಿಯನ್ನು ವಕ್ಫ್ ಎಂದು ಅತಿಕ್ರಮಿಸಲಾಗಿದೆ ಎಂದು ಆರೋಪಿಸುತ್ತಾರಲ್ಲ ಅವರಿಗೆ ಸತ್ಯ ಏನೆಂದು ಗೊತ್ತಾಗಲಿ ಎಂಬ ಕಾರಣಕ್ಕೆ” ಎಂದು ತಿಳಿಸಿದ್ದಾರೆ.

“ಇಸ್ಲಾಮಿನಲ್ಲಿ ವಕ್ಫ್ ಗೆ ಬಹಳ ಮಹತ್ವ ಇದೆ. ದೊಡ್ಡ ದೊಡ್ಡ ಶ್ರೀಮಂತರಿಂದ ಹಿಡಿದು ತೀರ ಸಾಮಾನ್ಯರು ಕೂಡ ತಮ್ಮ ಭೂಮಿಯನ್ನು ಮಸೀದಿ, ಮದ್ರಸ ನಿರ್ಮಾಣಕ್ಕೆ ಮತ್ತು ಸ್ಮಶಾನಕ್ಕೆ ಹಾಗೂ ಇನ್ನಿತರ ಚಟುವಟಿಕೆಗಳಿಗಾಗಿ ವಕ್ಫ್ ಮಾಡುತ್ತಾರೆ. ಆ ಬಳಿಕ ಆ ದಾನದ ಭೂಮಿಯಲ್ಲಿ ಏನೆಲ್ಲ ಒಳಿತಿನ ಕಾರ್ಯಗಳು ನಡೆಯುತ್ತವೆಯೋ ಅದರ ಒಳಿತಿನ ಒಂದು ಅಂಶ ಈ ದಾನ ಮಾಡಿದವರಿಗೆ ಸದಾ ಸಲ್ಲುತ್ತಿರುತ್ತದೆ ಎಂಬ ನಂಬಿಕೆ ಮುಸ್ಲಿಮರದ್ದು. ಅವರ ಇಹಲೋಕ ಮತ್ತು ಪರಲೋಕದ ಒಳಿತಿಗೆ ಈ ದಾನದಿಂದ ಪ್ರಯೋಜನ ಇದೆ ಎಂದವರು ನಂಬುತ್ತಾರೆ. ಆದ್ದರಿಂದಲೇ ತಲೆತಲಾಂತರದಿಂದ ಮುಸ್ಲಿಮರು ವಕ್ಫ್ ಮಾಡುತ್ತಲೇ ಬಂದಿದ್ದಾರೆ. ಈ ಇನಾಯತ್ ಅಲಿ ಅವರಲ್ಲಿ ಒಬ್ಬರು ಮಾತ್ರ. ವಕ್ಫ್ ಚರ್ಚೆಯ ಸಂದರ್ಭದಲ್ಲಿಯೇ ಬೆಲೆಬಾಳುವ ಭೂಮಿಯನ್ನು ಹಜ್ ಭವನ ನಿರ್ಮಾಣಕ್ಕೆಂದು ವಕ್ಫ್ ಮಾಡಿದ ಇನಾಯತ್ ಅಲಿಯವರಿಗೆ ಧನ್ಯವಾದಗಳು.” ಎಂದು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಹಿಡನ್ ಅಜೆಂಡಾ | ಅಡೊಲೊಸೆನ್ಸ್ ಎಂಬ ನೆಟ್‌ಫ್ಲಿಕ್ಸ್ ಸಿರೀಸ್ ಹುಟ್ಟುಹಾಕಿದ ಪ್ರಶ್ನೆಗಳ ಸುತ್ತ
“ಮಂಗಳೂರಿನ ಮುಸ್ಲಿಂ ಸಮುದಾಯದಲ್ಲಿ ಶ್ರೀಮಂತರಿಗೆ ಕೊರತೆ ಇಲ್ಲ. ಇನಾಯತ್ ಅಲಿ ಅವರು ಮಂಗಳೂರಿನ ನಂಬರ್ ಒನ್ ಶ್ರೀಮಂತರಲ್ಲ. ಅವರು ನಂ.1 ಹೃದಯ ಶ್ರೀಮಂತ. ‘ಅದೊಂದು ಖಾಲಿ ಜಾಗ ಅಷ್ಟೇ. ನಾನು ಒಂದು ದಿನ ಮರಣ ಹೊಂದಲಿದ್ದೇನೆ, ಹೋಗುವಾಗ ಏನನ್ನೂ ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ, ಅದನ್ನು ಇಟ್ಟುಕೊಂಡು ನಾನೇನು ಮಾಡಲಿ’ ಅಂತ ಅವರು ನನ್ನಲ್ಲಿ ಹೇಳಿದರು. ಮಂಗಳೂರಲ್ಲಿ ನೂತನವಾಗಿ ನಿರ್ಮಾಣವಾಗಲಿರುವ ಹಜ್ ಭವನದಿಂದ ಹಜ್ ಯಾತ್ರೆ ಹೊರಡಲಿರುವ ಪ್ರತಿಯೊಬ್ಬರ ಪುಣ್ಯದಲ್ಲಿ ಒಂದು ಪಾಲು ಇನಾಯತ್ ಅಲಿ ಮತ್ತು ಅವರ ಕುಟುಂಬಕ್ಕೆ ದೊರಕಲಿದೆ” ಎಂದು ಪತ್ರಕರ್ತ ಶಫೀಕ್ ಅಬ್ಬಾಸ್ ವಳಾಲು ತಮ್ಮ ಫೇಸ್‌ಬುಕ್ ಗೋಡೆಯಲ್ಲಿ ಬರೆದುಕೊಂಡಿದ್ದಾರೆ.
ಇವರು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವೇಣೂರು ಸಮೀಪದವರು. ಕಳೆದ 13 ವರ್ಷಗಳಿಂದ ಪತ್ರಿಕೋದ್ಯಮದಲ್ಲಿದ್ದು, ವಾರ್ತಾಭಾರತಿ ದಿನಪತ್ರಿಕೆ, ಸಂಜೆ ವಾಣಿ, ಕೋಸ್ಟಲ್ ಡೈಜೆಸ್ಟ್ ಹಾಗೂ ಸನ್ಮಾರ್ಗ ವಾರಪತ್ರಿಕೆಯಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಸದ್ಯ ಈದಿನ ಡಾಟ್ ಕಾಮ್‌ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ.