“ಮಂಗಳೂರು ನಗರದ ಕುಡುಪು ಎಂಬಲ್ಲಿ ಮುಸ್ಲಿಂ ಯುವಕನೋರ್ವನನ್ನು ಗುಂಪೊಂದು ಮನಬಂದಂತೆ ಥಳಿಸಿ, ಹತ್ಯೆಗೈದಿದೆ. ಅಲ್ಲದೇ, ಘಟನೆಗೆ ಪಾಕಿಸ್ತಾನ್ ಜಿಂದಾಬಾದ್ ಕೂಗಿದ್ದು ಎಂಬ ಕಥೆ ಸೃಷ್ಟಿಸಲಾಗಿದೆ. ಮುಸ್ಲಿಮರ ಮೇಲೆ ನಡೆಯುವ ಇಂತಹ ಕೃತ್ಯಗಳನ್ನು ನಾರ್ಮಲೈಝ್ ಮಾಡಲಾಗುತ್ತಿದೆ. ಸಂಘಪರಿವಾರ ಹುಟ್ಟುಹಾಕುವ ಇಂತಹ ನಿರೂಪಣೆಯನ್ನೇ ಕಾಂಗ್ರೆಸ್ ನಾಯಕರು ಚಾಚೂ ತಪ್ಪದೆ ಪಾಲಿಸುತ್ತಿರುವುದು ದುರದೃಷ್ಟಕರ” ಎಂದು ಸೋಲಿಡಾರಿಟಿ ಯೂತ್ ಮೂಮೆಂಟ್‌ನ ಕರ್ನಾಟಕ ರಾಜ್ಯ ಮುಖಂಡ ಲಬೀದ್ ಶಾಫಿ ಕಿಡಿಕಾರಿದ್ದಾರೆ.
ಈ ಬಗ್ಗೆ ಪೋಸ್ಟ್ ಹಾಕಿರುವ ಅವರು, “ಮಂಗಳೂರಿನ ಕುಡುಪು ಎಂಬಲ್ಲಿ ಅಶ್ರಫ್ ಎಂಬ ವಲಸೆ ಕಾರ್ಮಿಕನ ಗುಂಪು ಹತ್ಯೆ ನಿರ್ಜನ ಪ್ರದೇಶದಲ್ಲಿ ನಡೆದಿಲ್ಲ, ಕ್ರಿಕೆಟ್ ಪಂದ್ಯಾವಳಿ ನಡೆಯುತ್ತಿರುವ ಜನ ನಿಬಿಡ ಪ್ರದೇಶದಲ್ಲಿ ನಡೆದಿದೆ. ಸುಮಾರು 30 ಜನ ಸೇರಿ ಆ ಅಮಾಯಕ ಜೀವವನ್ನು ಥಳಿಸಿ ಕೊಂದು ಹಾಕಿದ್ದಾರೆ. ಎರಡು ತಾಸುಗಳ ವರೆಗೆ ಮೃತಶರೀರವು ಹಾಗೆಯೇ ಬಿದ್ದಿತ್ತು. ಆ ಪ್ರದೇಶದಲ್ಲಿ ನೂರಾರು ಜನರು ಇದ್ದರೂ ಯಾರಿಂದಲೂ ಹತ್ಯೆಯನ್ನು ತಡೆಯಲು ಸಾಧ್ಯವಾಗಿಲ್ಲ” ಎಂದು ಆಕ್ರೋಶ ಹೊರಹಾಕಿದ್ದಾರೆ.
ಮೊದಲು ಈ ಗುಂಪು ಹತ್ಯೆ ಪ್ರಕರಣವನ್ನು ಮುಚ್ಚು ಹಾಕುವಂತಹ ಪ್ರಯತ್ನ ನಡೆದಿದೆ. ಗುಂಪು ಹತ್ಯೆ ಮಾಡಿರುವ ಅದೇ ಗುಂಪಿನ ಪ್ರಧಾನ ವ್ಯಕ್ತಿಯಿಂದಲೆ ಪ್ರಥಮವಾಗಿ ಪೊಲೀಸ್ ಇಲಾಖೆ ದೂರು ಬರೆಸಿಕೊಂಡದ್ದು, ದುರ್ಬಲವಾದ ಯುಡಿಆರ್, ಗೊಂದಲದ ಲುಕ್ ಔಟ್ ಪ್ರಕಟನೆ ಹೊರಡಿಸಿದ್ದು, 36 ಗಂಟೆಗಳ ಕಾಲ ಪೊಲೀಸ್ ಕಮಿಷನರ್ ಮಾಧ್ಯಮದವರಿಗೆ ಮಾಹಿತಿ ನೀಡದೆ ಮೌನ ವಹಿಸಿದ್ದು, ಎರಡನೇ ದಿನ ಸಾರ್ವಜನಿಕರು ಬಲವಾಗಿ ಪ್ರಶ್ನಿಸತೊಡಗಿದ ತರುವಾಯ ಪೋಸ್ಟ್ ಮಾರ್ಟಂ ಮಾಡಿಸಿದ್ದು, ಎಫ್ಐಆರ್ ದಾಖಲು ಮಾಡಲು 32 ತಾಸು ತೆಗೆದಿರುವುದು ಇವೆಲ್ಲವೂ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ನಡೆದಿದೆ ಎಂಬ ಅನುಮಾನವನ್ನು ಗಟ್ಟಿಗೊಳಿಸುತ್ತದೆ ಎಂದು ಆರೋಪಿಸಿದ್ದಾರೆ.
ಮುಸ್ಲಿಮರ ಮೇಲೆ ನಡೆಯುವ ಇಂತಹ ಕೃತ್ಯಗಳನ್ನು ನಾರ್ಮಲೈಝ್ ಮಾಡಲಾಗುತ್ತಿದೆ. ದುರದೃಷ್ಟದ ಸಂಗತಿ ಏನೆಂದರೆ, ಸಂಘಪರಿವಾರ ಹುಟ್ಟುಹಾಕಿರುವ ಈ ನೆರೇಟಿವ್ ಅನ್ನು ಕಾಂಗ್ರೆಸ್ ನಾಯಕರು ಚಾಚು ತಪ್ಪದೆ ಪಾಲಿಸುತ್ತಿರುವುದು. ಮುಸ್ಲಿಮ್ ಎಂಬ ಕಾರಣಕ್ಕೆ ಹೊಡೆದು ಸಾಯಿಸಿ ತದನಂತರ ದನದ ಮಾಂಸ ಮಾರಾಟ ಮಾಡುತ್ತಿದ್ದ, ಪಾಕಿಸ್ತಾನ್ ಜಿಂದಾಬಾದ್ ಹೇಳಿದ ಎಂದು ಆರೋಪಿಸಿದರೆ ಸಾಕು ಕ್ಷಣ ಮಾತ್ರದಲ್ಲಿ ಎಲ್ಲ ಕೃತ್ಯಗಳು ಜಸ್ಟಿಫೈ ಆಗಿ ಬಿಡುತ್ತದೆ. ಇಲ್ಲಿ ಈ ಗೂಂಡಾಗಳಿಗೆ ಗೃಹ ಸಚಿವರು ಲೈಸೆನ್ಸ್ ನೀಡುತ್ತಿರುವುದು ದುರಂತ ಎಂದು ಗೃಹ ಸಚಿವ ಪರಮೇಶ್ವರ್ ಅವರ ಹೇಳಿಕೆಯನ್ನು ಲಬೀದ್ ಶಾಫಿ ಖಂಡಿಸಿದ್ದಾರೆ.
ಇದನ್ನು ಓದಿದ್ದೀರಾ? ಮಂಗಳೂರು ಗುಂಪು ಹತ್ಯೆ | ಮೃತಪಟ್ಟ ಅಶ್ರಫ್ ಅಂತ್ಯಸಂಸ್ಕಾರ; ಮಗನ ಮೃತದೇಹ ಕಂಡು ಕಣ್ಣೀರಿಟ್ಟ ತಾಯಿ ರುಕಿಯಾ
ಸಂಘ ಪರಿವಾರದ ಅಜೆಂಡಾದ ಜೊತೆಗೆ ಹೆಜ್ಜೆ ಹಾಕುವುದನ್ನು ರಾಜ್ಯ ಸರಕಾರವು ನಿಲ್ಲಿಸಬೇಕು. ಪಹಲ್ಗಾಮ್ ದಾಳಿಯ ನಂತರ ಭಾರತದಾದ್ಯಂತ ಮುಸ್ಲಿಮ್ ವಿರೋಧಿ ದ್ವೇಷ ಅಭಿಯಾನಗಳು ಮತ್ತು ಹಿಂಸಾಚಾರವು ನಿರಂತರವಾಗಿ ನಡೆಯುತ್ತಿದೆ. ಈ ಸಾಲಿನಲ್ಲಿ ಈಗ ಕರ್ನಾಟಕವೂ ಸೇರಿಕೊಂಡಿದೆ. ಪತ್ರಿಕೋದ್ಯಮದ ಹೆಸರಿನಲ್ಲಿ ದ್ವೇಷ ಬಿತ್ತುವ ಮಾಧ್ಯಮಗಳ ಹಾಗೂ ದ್ವೇಷ ಭಾಷಣ ಮಾಡುವ ಕೋಮುವಾದಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಂಡಿದ್ದರೆ ಇಂದು ಅಮಾಯಕ, ಕೇರಳದ ಯುವಕ ಮುಹಮ್ಮದ್ ಅಶ್ರಫ್‌ನ ಜೀವವು ಉಳಿಯುತ್ತಿತ್ತು ಎಂದು ಸೋಲಿಡಾರಿಟಿ ಯೂತ್ ಮೂಮೆಂಟ್‌ನ ಕರ್ನಾಟಕದ ಮಾಜಿ ರಾಜ್ಯಾಧ್ಯಕ್ಷ ಲಬೀದ್ ಶಾಫಿ ತಿಳಿಸಿದ್ದಾರೆ.