ಮಂಗಳೂರು ನಗರದ ಕುಡುಪುವಿನಲ್ಲಿ 2025ರ ಏಪ್ರಿಲ್ 27 ರಂದು ನಡೆದಿದ್ದ ಕೇರಳದ ಮುಸ್ಲಿಂ ಯುವಕ ಅಶ್ರಫ್ ಗುಂಪು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಹೋರಾಟಗಾರರ ತಂಡವು ಇತ್ತೀಚೆಗೆ ಮಂಗಳೂರಿಗೆ ಭೇಟಿ ನೀಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆಸಿದ ಸತ್ಯಶೋಧನಾ ವರದಿಯನ್ನು ನಾಳೆ(ಜೂನ್ 28)ರಂದು ಬೆಂಗಳೂರಿನಲ್ಲಿ ಬಿಡುಗಡೆ ಮಾಡಲಿದೆ.
‘ಮಂಗಳೂರು ಗುಂಪು ಹತ್ಯೆ ಪ್ರಕರಣ – ಸಂವಿಧಾನದ ಕಗ್ಗೊಲೆಯ ಬಗ್ಗೆ ಮೌನ ಮುರಿಯಬೇಕಿದೆ’ ಹೆಸರಿನ ಸತ್ಯಶೋಧನಾ ವರದಿಯನ್ನು ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ ಕರ್ನಾಟಕ, ಅಸೋಸಿಯೇಷನ್ ಆಫ್ ಪ್ರೊಟೆಕ್ಷನ್ ಫಾರ್ ಸಿವಿಲ್ ರೈಟ್ಸ್ ಕರ್ನಾಟಕ, ಆಲ್ ಇಂಡಿಯಾ ಅಸೋಸಿಯೇಷನ್ ಫಾರ್ ಜಸ್ಟಿಸ್ ಕರ್ನಾಟಕ ಜಂಟಿಯಾಗಿ ನಡೆಸಿದೆ. ಸತ್ಯಶೋಧನೆ ವರದಿಯನ್ನು ಜೂನ್ 28ರಂದು ಬೆಳಗ್ಗೆ 11.30 ಗಂಟೆಗೆ ಬೆಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಸಾಮಾಜಿಕ ಹೋರಾಟಗಾರರ ತಂಡವು ಮಾಹಿತಿ ನೀಡಿದೆ.
2025ರ ಏಪ್ರಿಲ್ 27ರಂದು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ಕೇರಳ ಮೂಲದ, ಪ್ಲಾಸ್ಟಿಕ್ ಬಾಟಲಿಗಳನ್ನು ಆಯುವ ಮುಸ್ಲಿಂ ಯುವಕ ಅಶ್ರಫ್‌ನನ್ನು ಕ್ರಿಕೆಟ್ ಆಡುತ್ತಿದ್ದವರ ಗುಂಪು ಅಮಾನುಷವಾಗಿ ಥಳಿಸಿ ಕೊಂದಿತು. ಆ ಘಟನೆಯಿಂದಾಗಿ ಕರ್ನಾಟಕ ತಲೆತಗ್ಗಿಸುವಂತಾಗಿ ಎರಡು ತಿಂಗಳುಗಳೇ ಉರುಳಿದೆ. ಈ ಹೊತ್ತಿನಲ್ಲಿ ಅಶ್ರಫ್ ಅವರಿಗೂ ಅವರ ಕುಟುಂಬಕ್ಕೂ ನ್ಯಾಯ ಒದಗಿಸಬೇಕೆಂದು ನಾವು ಆಗ್ರಹಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ರಾಯಚೂರು | ಜಿಲ್ಲೆಯ 23 ಗ್ರಾಮಗಳಲ್ಲಿ ಮೊಹರಂ ಆಚರಣೆ ನಿಷೇಧ: ಜಿಲ್ಲಾಧಿಕಾರಿ ಆದೇಶ
ವರದಿಯ ಬಿಡುಗಡೆಯ ವೇಳೆ ಸತ್ಯಶೋಧನಾ ವರದಿಯನ್ನು ಪಿಯುಸಿಎಲ್ ಕರ್ನಾಟಕದ ಪರವಾಗಿ ವಕೀಲರಾದ ಮಾನವಿ ಮತ್ತು ಶಶಾಂಕ್ ಮಂಡನೆ ಮಾಡಲಿದ್ದಾರೆ. ವರದಿಗೆ ವಿಶ್ವಸಂಸ್ಥೆಯ ವರ್ಣಭೇದ ನೀತಿ ಸದಸ್ಯೆ ಅಶ್ವಿನಿ ಕೆಪಿ, ದ. ಸಂ. ಸ (ಅಂಬೇಡ್ಕರ್ ವಾದ) ಮುಖಂಡರಾದ ಮಾವಳ್ಳಿ ಶಂಕರ್, AILAJ ಕರ್ನಾಟಕದ ಅಡ್ವೊಕೇಟ್ ಮೈತ್ರೇಯಿ, ವಕೀಲರೂ, ಸಾಮಾಜಿಕ ಮುಖಂಡ ವಿನಯ್ ಶ್ರೀನಿವಾಸ್, ಎಪಿಸಿಆರ್ ಕರ್ನಾಟಕದ ಮುಖಂಡರಾದ ಮೊಬಶಿರ್ ಸ್ಪಂದನೆಯನ್ನು ನೀಡಲಿದ್ದಾರೆ ಎಂದು ಸಾಮಾಜಿಕ ಹೋರಾಟಗಾರರ ತಂಡವು ಮಾಹಿತಿ ನೀಡಿದೆ.
