ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರ ಹೊರವಲಯದ ಕುಡುಪು ಎಂಬಲ್ಲಿ ಅಪರಿಚಿತ ಯುವಕನ ಮೇಲೆ 25 ರಿಂದ 30 ಜನರ ಗುಂಪು ಹಲ್ಲೆ ನಡೆಸಿದ ಪರಿಣಾಮ ಮೃತಪಟ್ಟಿರುವುದಾಗಿ ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.
ಮಂಗಳವಾರ ಮಧ್ಯಾಹ್ನ ತಮ್ಮ ಕಚೇರಿಯಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಘಟನೆಗೆ ಸಂಬಂಧಿಸಿದಂತೆ ಗುಂಪು ಹತ್ಯೆಯಲ್ಲಿ ಭಾಗಿಯಾಗಿದ್ದ ಆರೋಪದಲ್ಲಿ ಸುಮಾರು 15 ಮಂದಿ ಆರೋಪಿಗಳನ್ನು ಬಂಧಿಸಿದ್ದೇವೆ. ವಶಕ್ಕೆ ತೆಗೆದುಕೊಂಡ ಆರೋಪಿಗಳಿಂದ ಘಟನೆಯ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿರುವುದಾಗಿ ತಿಳಿಸಿದ್ದಾರೆ.

ಪ್ರಾಥಮಿಕವಾಗಿ ಇದು ಕ್ರಿಕೆಟ್ ಜಗಳ ಎಂದು ಕಂಡು ಬಂದಿತ್ತಾದರೂ ಮೃತಪಟ್ಟ ವ್ಯಕ್ತಿ ಕ್ರಿಕೆಟ್ ಆಟದ ಭಾಗವಾಗಿರಲಿಲ್ಲ ಎಂದು ತಿಳಿದು ಬಂದಿದೆ. ಗುಪ್ತಾಂಗ ಸೇರಿದಂತೆ ಮೈಮೇಲೆ ದೊಣ್ಣೆ ಸೇರಿದಂತೆ ಹಲವು ವಸ್ತುಗಳಲ್ಲಿ ಹಲ್ಲೆ ಮಾಡಲಾಗಿದೆ. 25 ರಿಂದ 30 ಜನ ಸೇರಿ ಹಲ್ಲೆ ಮಾಡಿರುವುದು ತಿಳಿದು ಬಂದಿದೆ. 25 ಜನರ ಗುರುತು ಪತ್ತೆ ಮಾಡಲಾಗಿದೆ. ಈ ಪೈಕಿ 15 ಮಂದಿಯನ್ನು ಬಂಧಿಸಿದ್ದೇವೆ. ಇವರಲ್ಲಿ 5 ಮಂದಿ ಪ್ರಮುಖ ಆರೋಪಿಗಳು. ರಿಕ್ಷಾ ಚಾಲಕನಾಗಿರುವ ಸಚಿನ್ ಎಂಬಾತ ಪ್ರಥಮ ಆರೋಪಿಯಾಗಿದ್ದಾನೆ ಎಂದು ಪೊಲೀಸ್ ಕಮಿಷನರ್ ಮಾಹಿತಿ ನೀಡಿದ್ದಾರೆ.

ಬಂಧಿತ ಆರೋಪಿಗಳನ್ನು ಸಚಿನ್ ಟಿ(26), ದೇವದಾಸ್(50), ಮಂಜುನಾಥ್ (32), ಸಾಯಿದೀಪ್(29), ನಿತೇಶ್ ಕುಮಾರ್(33), ದೀಕ್ಷಿತ್ ಕುಮಾರ್ (32), ಸಂದೀಪ್ (23), ವಿವಿಯನ್ ಆಳ್ವಾರೀಸ್(41), ಶ್ರೀದತ್ತ(32), ರಾಹುಲ್ ( 23), ಪ್ರದೀಪ್ ಕುಮಾರ್ (35), ಮನೀಷ್ ಶೆಟ್ಟಿ(21), ಧನುಷ್(31), ದೀಕ್ಷಿತ್ (27) ಹಾಗೂ ಕಿಶೋರ್ ಕುಮಾರ್ (37) ಎಂದು ಗುರುತಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಮಾಹಿತಿ ನೀಡಿದ್ದಾರೆ.
ಮೃತಪಟ್ಟ ವ್ಯಕ್ತಿಯು ಬಿಹಾರದವ ಅಥವಾ ಮಲಯಾಳಿ ಇರಬಹುದು ಎಂದು ಅಂದಾಜಿಸಲಾಗಿದೆ. ಸುಮಾರು 45ರಿಂದ 50 ವರ್ಷ ವಯಸ್ಸು ಇರಬಹುದು. ಗುರುತು ಪತ್ತೆಹಚ್ಚಲು ಪೊಲೀಸ್ ಇಲಾಖೆ ಶ್ರಮಿಸುತ್ತಿದೆ ಎಂದು ತಿಳಿಸಿದ್ದಾರೆ.
ಮಾಜಿ ಕಾರ್ಪೋರೇಟರ್ ಓರ್ವರ ಗಂಡನ ಪಾತ್ರವಿದೆ ಎಂಬ ಮಾಹಿತಿಗಳು ಕೇಳಿ ಬಂದಿದೆ. ಅವರನ್ನು ಬಂಧಿಸಲಾಗಿದೆಯೇ ಎಂದು ಕಮಿಷನರ್ ಅವರಲ್ಲಿ ಪ್ರಶ್ನಿಸಿದಾಗ, ‘ಅವರನ್ನು ಅರೆಸ್ಟ್ ಮಾಡಿಲ್ಲ. ಅವರ ಪಾತ್ರದ ಬಗ್ಗೆ ಕೂಡ ಕೆಲವೊಂದು ಮಾಹಿತಿ ಹರಿದಾಡುತ್ತಿದೆ. ಈ ಬಗ್ಗೆ ಮುಂದಿನ ತನಿಖೆಯ ಬಳಿಕವಷ್ಟೇ ತಿಳಿಸುತ್ತೇನೆ’ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
“ಧರ್ಮದ ಆಧಾರದಲ್ಲಿ ಕೊಲೆ ಎನ್ನುವುದು ಗೊತ್ತಿಲ್ಲ. ತನಿಖೆ ನಡೆಸಲಿದ್ದೇವೆ. ತಲೆಮರೆಸಿಕೊಂಡಿರುವ ಕೆಲವು ಆರೋಪಿಗಳನ್ನು ಶೀಘ್ರವಾಗಿ ಪತ್ತೆ ಹಚ್ಚುತ್ತೇವೆ” ಎಂದು ಕಮಿಷನರ್ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.
