ಹಿಂದೂ ದೇವರ ಬಗ್ಗೆ ಅಪಮಾನಕಾರಿಯಾಗಿ ಮಾತನಾಡಿರುವ ಆರೋಪದಲ್ಲಿ ಮಂಗಳೂರಿನ ವೆಲೆನ್ಸಿಯಾದ ಜೆರೋಸಾ ಶಾಲೆಯ ಶಿಕ್ಷಕಿ ಸಿಸ್ಟರ್ ಪ್ರಭಾ ಎಂಬವರನ್ನು ಶಾಲಾ ಆಡಳಿತ ಮಂಡಳಿ ಸೇವೆಯಿಂದ ಅಮಾನತುಗೊಳಿಸಿದೆ.
ಶಿಕ್ಷಕಿ ವಿರುದ್ಧ ಆಕ್ರೋಶ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಅವರನ್ನು ಶಾಲಾ ಆಡಳಿತ ಮಂಡಳಿಯು ಅಮಾನತುಗೊಳಿಸುವ ನಿರ್ಧಾರ ಕೈಗೊಂಡಿದೆ.
ಘಟನೆಯ ಬಗ್ಗೆ ಶಿಕ್ಷಣ ಇಲಾಖೆಯು ಆಂತರಿಕ ತನಿಖೆ ನಡೆಸಲಿದೆ ಎಂದು ತಿಳಿದು ಬಂದಿದೆ. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸೋಮವಾರ ಸಂಜೆ ಶಾಲೆಗೆ ಭೇಟಿ ನೀಡಿ ವಿಚಾರಣೆ ನಡೆಸಿದರು. ಶಿಕ್ಷಣ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಈ ಸಂದರ್ಭ ಉಪಸ್ಥಿತರಿದ್ದರು.
ಫೆ.8ರಂದು ಶಿಕ್ಷಕಿ ಪ್ರಭಾ ಶಾಲೆಯಲ್ಲಿ ʼWork is worship’ ಎಂಬ ವಿಷಯದ ಪಾಠ ಮಾಡುತ್ತಿದ್ದ ವೇಳೆ ಆಯೋಧ್ಯೆಯ ಶ್ರೀರಾಮ ಮಂದಿರ ಮತ್ತು ಶ್ರೀರಾಮನ ಬಗ್ಗೆ ನಿಂದಿಸಿರುವುದಾಗಿ ಆರೋಪಿಸಿ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಶಿಕ್ಷಕಿಯನ್ನು ಅಮಾನತು ಮಾಡಬೇಕೆಂದು ಕಳೆದ ಶನಿವಾರ ಪೋಷಕರೊಂದಿಗೆ ಸೇರಿ ಸಂಘಪರಿವಾರದ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಈ ನಡುವೆ ಇಂದು(ಫೆ.12) ಸಂಘಪರಿವಾರದ ಮುಖಂಡರೊಂದಿಗೆ ಡಿಡಿಪಿಐಯನ್ನು ಬಿಜೆಪಿ ಶಾಸಕರಾದ ವೇದವ್ಯಾಸ ಕಾಮತ್ ಹಾಗೂ ಭರತ್ ಶೆಟ್ಟಿಯವರು ಭೇಟಿ ಮಾಡಿ, ಕೂಡಲೇ ಅಮಾನತುಗೊಳಿಸುವಂತೆ ಆಗ್ರಹಿಸಿದ್ದರು. ವರದಿ ತರಿಸಿಕೊಂಡು ಕ್ರಮ ಕೈಗೊಳ್ಳುವ ಭರವಸೆ ನೀಡಲಾಗಿತ್ತು.
ಶಿಕ್ಷಕಿ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ಆಗ್ರಹಿಸಿ ಸೋಮವಾರ ಮಂಗಳೂರು ನಗರದ ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಅವರು ಸ್ಥಳಕ್ಕೆ ಆಗಮಿಸಿದ್ದರು. ಅವರ ನೇತೃತ್ವದಲ್ಲಿ ನೂರಾರು ಮಂದಿ ವಿದ್ಯಾರ್ಥಿಗಳ ಪೋಷಕರು ಹಾಗೂ ಕಾರ್ಯಕರ್ತರು ಶಾಲೆಗೆ ಮುತ್ತಿಗೆಗೆ ಯತ್ನ ನಡೆಸಿದ್ದರು. ಆದರೆ ಈ ವೇಳೆ ಪೊಲೀಸರು ಶಾಲೆಯ ಗೇಟ್ ಬಳಿ ಶಾಸಕ ಹಾಗೂ ಪೋಷಕರನ್ನು ತಡೆದಿದ್ದರು.
ಜೆಪ್ಪು ಸಂತ ಜೆರೋಸಾ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿರುವ ಇತ್ತೀಚಿನ ಘಟನೆಯ ಹಿನ್ನೆಲೆಯಲ್ಲಿ ಶಾಲೆಯ ಶಿಕ್ಷಕಿ ಸಿಸ್ಟರ್ ಪ್ರಭಾ ಅವರನ್ನು ತಮ್ಮ ಸಂಸ್ಥೆಯಿಂದ ವಜಾಗೊಳಿಸಲಾಗಿದೆ ಹಾಗೂ ಅವರ ಸ್ಥಾನಕ್ಕೆ ಬೇರೆ ಶಿಕ್ಷಕರನ್ನು ನೇಮಿಸಲಾಗುವುದು ಎಂದು ಶಾಲಾ ಮುಖ್ಯ ಶಿಕ್ಷಕಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಮಂಗಳೂರು | ತರಗತಿಯಲ್ಲಿ ರಾಮನ ಬಗ್ಗೆ ಅವಹೇಳನ ಆರೋಪ: ಪೋಷಕರೊಂದಿಗೆ ಸೇರಿ ಸಂಘಪರಿವಾರ ಪ್ರತಿಭಟನೆ
ಇದುವರೆಗೂ ಒಳ್ಳೆಯ ಮನೋಭಾವ ಹಾಗೂ ಶ್ರೇಷ್ಠ ಗುಣಮಟ್ಟದ ಶಿಕ್ಷಣದಿಂದ ನಮ್ಮ ನಡುವೆ ಉತ್ತಮ ಸಂಬಂಧವನ್ನು ನಿರ್ಮಿಸಿದ್ದೇವೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಆರೋಪ ಏನು?
ಶ್ರೀರಾಮ ಹಾಗೂ ಅಯೋಧ್ಯೆ ಮಂದಿರ ಅವಹೇಳನ ಮಾಡಿರುವ ಶಿಕ್ಷಕಿ ಸಿಸ್ಟರ್ ಪ್ರಭಾ ಎಂಬಾಕೆ ಶ್ರೀರಾಮ ಕಲ್ಲು ಅಂದಿದ್ದಾರೆ. ಅಯೋಧ್ಯೆಯಲ್ಲಿ ಡೆಕೋರೇಷನ್ ಮಾಡಿದ್ದಾರೆ ಎಂದೆಲ್ಲ ಮಕ್ಕಳ ಮುಂದೆ ಹೇಳುವ ಮೂಲಕ ಧರ್ಮಗಳ ಬಗ್ಗೆ ವಿಷಬೀಜ ಬಿತ್ತುತ್ತಿದ್ದಾರೆ ಎಂದು ವಿದ್ಯಾರ್ಥಿಗಳ ಪೋಷಕರು ಆರೋಪಿಸಿದ್ದಾರೆ.
ಅಲ್ಪಸಂಖ್ಯಾತರನ್ನು ಓಲೈಸುವ ಅವರನ್ನು ರಕ್ಷಿಸುವ ಪಕ್ಷ ರಾಜ್ಯದಲ್ಲಿ ಅಧಿಕಾರದಲ್ಲಿರುವುದರಿಂದಲೇ ಕೆಲವು ಅವಿವೇಕಿಗಳು, ಮತಾಂಧರು ಹಿಂದೂ ಧರ್ಮದ ಕುರಿತಂತೆ ತುಚ್ಚವಾಗಿ ಮಾತನಾಡುತ್ತಿದ್ದಾರೆ. ಈ ರೀತಿಯ ವಿಷಬೇರುಗಳನ್ನು ಕಿತ್ತೂಗೆಯುವುದು ಅಗತ್ಯವಾಗಿದೆ. ಸನಾತದ ಹಿಂದೂ ಧರ್ಮದ ಕುರಿತಂತೆ ಅವಹೇಳಕಾರಿಯಾಗಿ ಮಾತನಾಡುವ ಈ ಜನ್ರು ಬೇರೆ ಧರ್ಮದ ಕುರಿತಂತೆ ಹಗುರವಾಗಿ ಮಾತನಾಡುವರೇ.. ಅದು ಅವ್ರಿಗೆ ಸಾಧ್ಯವೇ..
ಎಂ.ಶಿವರಾಂ.. ಬೆಂಗಳೂರು.