ಗಾಯ ಗಾರುಡಿ | ದೊಡ್ಡಬಳ್ಳಾಪುರದ ಟೌನ್‍ಹಾಲ್‌ನಲ್ಲಿ ಮೇಧಾ ಪಾಟ್ಕರ್ ಎಬ್ಬಿಸಿದ ‘ಲಗಾನ್’ ಹಾಡಿನ ಹವಾ

Date:


(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ ಸ್ಪಾಟಿಫೈ ಮ್ಯೂಸಿಕ್)

ನಾವು 40 ಹಳ್ಳಿಗಳಲ್ಲಿ ನಾಟಕ ಮಾಡಬೇಕಿತ್ತು. ವ್ಯವಸ್ಥೆ ಚೆನ್ನಾಗಿಯೇನೋ ಇತ್ತು. ಆದರೆ, ನಮ್ಮ ತಂಡದ ಲೀಡರ್ ಸಸ್ಯಾಹಾರಿ. ಹಳ್ಳಿಗಳಲ್ಲಿ ಮಾಂಸದಡುಗೆಯ ತಯಾರಿಯಲ್ಲಿದ್ದಾಗ ಇವರು, “ನಮ್ಮ ಹುಡುಗರಿಗೆ ಖಾರ ತಿಂದರೆ ಆರೋಗ್ಯ ಹಾಳಾಗಬಹುದು, ದಯವಿಟ್ಟು ಸಿಹಿ ಊಟ ಮಾಡಿಸಿ; ಬೆಳ್ಳುಳ್ಳಿ ಬಳಸದ್ದಿದ್ದರೆ ಇನ್ನೂ ಒಳ್ಳೆಯದು…” ಎಂದುಬಿಡುತ್ತಿದ್ದರು!

2003ರಲ್ಲಿ ಬಿ.ಎ ಮುಗಿಸಿದ ನಾನು, ಸೋಷಿಯಾಲಜಿ ಎಂ.ಎ ಮಾಡಲು ಬೆಂಗಳೂರು ಯೂನಿವರ್ಸಿಟಿ ಅಲೆದು, ಸೀಟು ಸಿಗದೆ ಸುಮ್ಮನಾದೆ. ಎರಡು ವರ್ಷ ಊಟ ಮತ್ತು ವಸತಿಗಾಗಿ ಬೆಂಗಳೂರು ಯೂನಿವರ್ಸಿಟಿ ಆರಿಸಿಕೊಂಡಿದ್ದೆ. ಗದ್ದರ್ ಕರ್ನಾಟಕಕ್ಕೆ ಬಂದಾಗ ಅವರ ಜೊತೆ ಕನ್ನಡ ಹಾಡು ಹಾಡುತ್ತಿದ್ದ ನಮ್ಮ ತಂಡ (ನಾನು, ನಂದಾ, ಶಿವು, ರಾಣಿ, ಕಿರಣ್) 2002ರಲ್ಲಿ ಸಿಜಿಕೆ ನಿರ್ದೇಶಕರಾಗಿದ್ದ ಜ್ಞಾನಭಾರತಿಯ ಗಾಂಧಿ ಭವನಕ್ಕೆ ಹೋದಾಗ, ಅಲ್ಲಿ ಕಾರ್ಯಕ್ರಮ ಮುಗಿಸಿ ಊಟಕ್ಕೆ ಅಲ್ಲೇ ಪಕ್ಕದಲ್ಲಿದ್ದ ಪಿಎಚ್‍ಡಿ ಹಾಸ್ಟೆಲ್‍ಗೆ ಹೋದೆವು. ಅಷ್ಟು ದೊಡ್ಡ ಅಂಬೇಡ್ಕರ್ ಫೋಟೊ ನಾನು ಆವರೆಗೆ ನೋಡಿರಲಿಲ್ಲ. ಅಲ್ಲಿನ ವಿದ್ಯಾರ್ಥಿಗಳ ಗತ್ತು, ಸ್ವಾಭಿಮಾನ, ಊಟದ ಹಾಲ್, ಕೈ ತೊಳೆಯಲು ಬಿಸಿನೀರು ತುಂಬಿ ಮುಂದಿಟ್ಟ ತಟ್ಟೆ, ರುಚಿಯಾದ ಮತ್ತು ಹೊಟ್ಟೆ ತುಂಬಾ ಊಟ ಇವೆಲ್ಲ ನನ್ನಲ್ಲಿ ಉಳಿದುಬಿಟ್ಟಿದ್ದವು ಮತ್ತು ಎಂಎ ಮಾಡಿದರೆ ಇಲ್ಲೇ ಮಾಡಬೇಕೆಂಬ ಆಸೆ ಹುಟ್ಟಿಸಿದ್ದ ಕಾರಣಕ್ಕೆ ನಾನು ಸಮಾಜಶಾಸ್ತ್ರ ವಿಭಾಗಕ್ಕೆ ಅರ್ಜಿ ಹಾಕಿದ್ದೆ.

ಮಾರ್ಕ್ಸ್ ಕಡಿಮೆಯಿದ್ದ ಕಾರಣಕ್ಕೆ ಜ್ಞಾನಭಾರತಿಯಲ್ಲಿ ಸೀಟು ಸಿಗದೆ ಹಾಸ್ಟೆಲ್ ಆಸೆ ಕಮರಿತು. ಈ ಮೊದಲೇ ಹೇಳಿದಂತೆ, 1998ರಿಂದ 2003ರವರೆಗೆ ವರ್ಷ ನನ್ನ ಬದುಕಿನಲ್ಲಿ ನಡೆದದ್ದೆಲ್ಲ ಮುಖ್ಯವಾದ ವಿದ್ಯಮಾನಗಳೇ. ಅವುಗಳಲ್ಲಿ ಒಂದು – ಈಗ ಸಾರ್ವಜನಿಕವಾಗಿ ಹೇಳಲಾಗದಂಥದ್ದು (ನಾನು ಮತ್ತು ಡಿಎಂಸಿ ಶಿವು ಒಂದು ದೊಡ್ಡ ನಿರ್ಧಾರ ಮಾಡಿ ಮುಂದುವರಿಯಲಾಗದೆ ಸುಮ್ಮನಾದೆವು). ಇದಕ್ಕೆ ಮೊದಲು 2000ದಲ್ಲಿ ದೊಡ್ಡಬಳ್ಳಾಪುರದಲ್ಲಿ ನಡೆಸಿದ ‘ಸಾವಿರಾರು ನದಿಗಳು’ ಎಂಬ ಕಾರ್ಯಕ್ರಮ ಮತ್ತು 2003ರಲ್ಲಿ ದೊಡ್ಡಬಳ್ಳಾಪುರ ತಾಲ್ಲೂಕಿನಾದ್ಯಂತ ನಡೆಸಿದ ‘ಜನಾಧಿಕಾರ ಜನಾಂದೋಲನ ಜಾಥಾ’ ಇವೆರಡೂ, ‘ಗೋಗೋ ಫ್ಯಾಕ್ಟರಿ’ ವಿರುದ್ಧ ನಡೆಸಿದ ಹೋರಾಟ ಮತ್ತು ಬಿಎಂಐಸಿ ವಿರುದ್ಧದ ಸೈಕಲ್ ಜಾಥಾದಂತೆಯೇ ನನ್ನನ್ನು ಹೆಚ್ಚು ಗಟ್ಟಿಗೊಳಿಸಿದವು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

‘ಸಾವಿರಾರು ನದಿಗಳು’ – ಸಂವಾದ ಸಂಸ್ಥೆಯ ಸಹಯೋಗದಲ್ಲಿ ‘ಜನಧ್ವನಿ ಯುವ ವೇದಿಕೆ’ ಆಯೋಜಿಸಿದ ದೊಡ್ಡ ಸಾಸ್ಕøತಿಕ ಸಮಾವೇಶ. ಆಗ ಜನಾರ್ದನ ಕೆಸರಗದ್ದೆ ಅವರ ನೇತೃತ್ವದಲ್ಲಿ ಸಂವಾದ ‘ಹಾಡು ಹಬ್ಬ’ಗಳನ್ನು ನಡೆಸುತ್ತಿತ್ತು. 2000ನೇ ಇಸವಿಯಲ್ಲಿ ದೊಡ್ಡಬಳ್ಳಾಪುರದ ಬೆಸೆಂಟ್ ಪಾರ್ಕಿನಲ್ಲಿ ನಡೆದ ಎರಡನೇ ‘ಹಾಡು ಹಬ್ಬ’ಕ್ಕೆ ರಾಜ್ಯದ ಮೂಲೆಮೂಲೆಯಿಂದ ದಲಿತ, ಮಹಿಳಾ ಹೋರಾಟಗಳ ಲೆಜೆಂಡ್ ಹಾಡುಗಾರರು, ಕವಿಗಳು ಬಂದಿದ್ದರು. ಗ್ಯಾರಂಟಿ ರಾಮಣ್ಣ, ಶಿವಪುತ್ರ ಭೇರಿ, ಪಾರ್ಥಸಾರಥಿ, ದಾನಪ್ಪಣ್ಣ, ಡಿಂಗ್ರಿ ನರಸಪ್ಪ, ರಾಜೇಂದ್ರ ಪ್ರಭಾಕರ್, ರೂಮಿ ಹರೀಶ್… ಹೀಗೆ ಎಷ್ಟೊಂದು ಜನ ಆಗತಾನೇ ಜಗತ್ತನ್ನು ನೋಡುತ್ತಿದ್ದ ನಮ್ಮೆದುರು ಹೋರಾಟದ ಹಾಡುಗಳ ದೊಡ್ಡ ಲೋಕವನ್ನೇ ತೆರೆದಿಟ್ಟಿದ್ದರು. ಆ ಎರಡು ದಿನಗಳ ಹಾಡುಗಳ ಕಾರ್ಯಗಾರದ ನಂತರ ಕೊನೆಯ ದಿನ ದೊಡ್ಡಬಳ್ಳಾಪುರದ ಟೌನ್‍ಹಾಲ್‌ಲ್ಲಿ ‘ಸಾವಿರಾರು ನದಿಗಳು’ ಸಮಾವೇಶ ಆಯೋಜನೆ ಮಾಡಿದ್ದೆವು. ಕವಿ ಸಿದ್ಧಲಿಂಗಯ್ಯನವರು ಅಧ್ಯಕ್ಷತೆ ವಹಿಸಿದ್ದ ಈ ಸಮಾವೇಶಕ್ಕೆ ದೂರದ ಗುಜರಾತಿನಿಂದ ಮೇಧಾ ಪಾಟ್ಕರ್ ಬಂದದ್ದು ವಿಶೇಷವಾಗಿತ್ತು. ವೇದಿಕೆ ಮೇಲೆ ನಮ್ಮ ತಂಡ ಹಾಡಲು ಶುರು ಮಾಡುತ್ತಿದ್ದಂತೆ ನಮ್ಮ ಜತೆ ಬಂದು ನಿಂತ ಮೇಧಾ ಪಾಟ್ಕರ್, ಆಗತಾನೇ ಹೆಸರು ಮಾಡಿದ್ದ ‘ಲಗಾನ್’ ಸಿನಿಮಾದ ಹಾಡು ಹಾಡುತ್ತ, ಎಲ್ಲ ಯುವತಿ-ಯುವಕರ ಕೈ ಹಿಡಿದುಕೊಂಡು ವೇದಿಕೆಯ ಕೆಳಗೆ ಇಳಿದರು. ಇಡೀ ಟೌನ್‍ಹಾಲಿನೊಳಗೆಲ್ಲ ಸಂಚರಿಸುತ್ತ-ಹಾಡುತ್ತ ಅಲ್ಲಿ ಸೇರಿದ್ದ ಎಲ್ಲರೊಳಗೂ ರೋಮಾಂಚನ ಉಂಟಾಗುವಂತೆ ಮಾಡಿದರು. ಆ ದಿನ ರೂಮಿ ಹಾಡಿದ ಕೋಟಿಗಾನಹಳ್ಳಿ ರಾಮಯ್ಯನವರ ‘ಸಂತಿ ಬಂತಾ ಸಂತಿ’ ಹಾಡು ಈಗಲೂ ನನ್ನ ಜೀವಕೋಶಗಳೊಳಗೆ ಅನುರಣಿಸುತ್ತದೆ. ಗೌರಿಬಿದನೂರಿನ ಶಿಲ್ಪಾ ಹಾಡಿದ ಮಾದಪ್ಪನ ‘ಆನುಮಲೆ ಹದುಕಾರ’ ಹಾಡು – ಅದಾದ ಮೇಲೆ ನಮ್ಮ ನಾಂದಿ ಹಾಡಾಗಿಹೋಗಿತ್ತು. ಜನಾರ್ದನ್ ಅದೇ ವರ್ಷ ತಾವು ಬರೆದ ಹೋರಾಟದ ಹಾಡುಗಳೊಂದಿಗೆ ಇನ್ನೂ ಕೆಲವು ಮುಖ್ಯ ಹಾಡುಗಳನ್ನು ಸೇರಿಸಿ ‘ಹಾಡು ಹಬ್ಬ’ ಎಂಬ ಟೈಟಲ್ಲಿನ ಪುಸ್ತಕವೊಂದನ್ನು ಹೊರತಂದರು. ಈ ಕಾರ್ಯಕ್ರಮ ನಮ್ಮ ತಂಡಕ್ಕೆ ಹಾಡುಗಾರರ ಪಟ್ಟ ತಂದುಕೊಟ್ಟಿದ್ದಲ್ಲದೆ, ನಾಡಿನ ಇತರ ಭಾಗಗಳ ಹೋರಾಟದ ಹಾಡುಗಾರರಿಗೆ ನಮ್ಮ ಪರಿಚಯವಾಗುವಂತೆ ಮಾಡಿತು.

2003ರಲ್ಲಿ ಬೆಂಗಳೂರಿನ ‘ಸಮುದಾಯ’ ಸಂಘಟನೆಯಿಂದ ನಮ್ಮ ತಂಡಕ್ಕೆ ಒಂದು ಅವಕಾಶ ಸಿಕ್ಕಿತು. ಆ ಸಮಯದಲ್ಲಿ ನನಗೂ ಎಂ.ಎ ಸೀಟು ಸಿಕ್ಕಿರಲಿಲ್ಲದ ಕಾರಣಕ್ಕೆ ಈ ಅವಕಾಶ ವರದಾನವಾಯಿತು. ಆಗ್ಗೆ ನಮ್ಮ ಸೀನಿಯರ್ ಆಗಿದ್ದ ಲವಕುಮಾರ್ ಈ ವಿಷಯವನ್ನು ನಮಗೆ ಹೇಳಿ, ಹತ್ತರಿಂದ ಹದಿನೈದು ಹುಡುಗ-ಹುಡುಗಿಯರನ್ನು ಕರೆದುಕೊಂಡು ರಾಮನಗರದ ಜಾನಪದ ಲೋಕಕ್ಕೆ ಹೋಗಬೇಕೆಂದು ಹೇಳಿದರು. ಯಾವಾಗಲೂ ಹದಿಮೂರು ಜನರಿರುತ್ತಿದ್ದ ನಮ್ಮ ಕಲಾತಂಡಕ್ಕೆ ಕುಂದಾಪುರದಿಂದ ಅಕ್ಕನ ಮನೆಗೆ ಬಂದಿದ್ದ ಶ್ರೀಧರ್ ಸೇರಿಕೊಂಡ. ಜಾನಪದ ಲೋಕದಲ್ಲಿ ನಮ್ಮ ಹಾಗೇ ಹಲವಾರು ಕಲಾತಂಡಗಳು ಜಾಥಾದಲ್ಲಿ ಮಾಡಬೇಕಾದ ನಾಟಕಗಳ ತಾಲೀಮು ನಡೆಸುತ್ತಿದ್ದರು. ಸಿ ಬಸವಲಿಂಗಯ್ಯ ಅದರ ನಿರ್ದೇಶಕರು. ಆ ತಂಡಗಳಲ್ಲಿ ನೆಲಮಂಗಲದಿಂದ ಬಂದಿದ್ದ ಭಾಸ್ಕರ್ ಪ್ರಸಾದ್ ಅವರ ತಂಡವೂ ಒಂದು. ಹತ್ತು ದಿನಗಳಲ್ಲಿ ಆರು ಬೀದಿನಾಟಕಗಳನ್ನು ಕಲಿತೆವು.

ಅದೊಂದು ಜಿಲ್ಲಾ ಪಂಚಾಯ್ತಿ ಕಾರ್ಯಕ್ರಮವಾಗಿದ್ದು, ಪಂಚಾಯ್ತಿ ಬಗ್ಗೆ ಜನರಿಗಿರುವ ಅಧಿಕಾರವನ್ನು ಅವರ ಅರಿವಿಗೆ ತರುವ ಕಾರ್ಯಕ್ರಮವಾದ್ದರಿಂದ ‘ಸಮುದಾಯ’ ಇದರ ಉಸ್ತುವಾರಿಗೆ ಒಪ್ಪಿಕೊಂಡಿತ್ತು. ಹಾಗೆ ನೋಡಿದರೆ ಇದು ಸರ್ಕಾರದ ಹಣದಲ್ಲಿ ಸರ್ಕಾರಿ ಭ್ರಷ್ಟಾಚಾರದ ವಿರುದ್ಧ ನಡೆಸಿದ ಜಾಥಾ ಆಗಿತ್ತು. ನಮ್ಮ ತಂಡಕ್ಕೆ ಸಮುದಾಯದ ಸುಧಾ ಲೀಡರ್. ಅವರ ಭಾವ ಮತ್ತು ಹಿರಿಯ ರಂಗಕರ್ಮಿ ಶಶಿಧರ ಭಾರಿಘಾಟ್ ನಮ್ಮ ಎಲ್ಲ ತಂಡಗಳ ಕೋಆರ್ಡಿನೇಟರ್. ನಮ್ಮ ತಂಡದಲ್ಲಿ ನಾನೊಬ್ಬನೇ ಕಂಜಿರ ಮತ್ತು ತಮಟೆ ನುಡಿಸುತ್ತಿದ್ದುದರಿಂದ ಮೊದಲಿಗೆ ಅದನ್ನು ಕಂಡುಕೊಳ್ಳಲು ಬಸವಲಿಂಗಯ್ಯನವರು ಒಂದು ಪರೀಕ್ಷೆ ಮಾಡಿದರು. ರಾಮಯ್ಯನವರು ಬರೆದಿದ್ದ ‘ಜನಾಧಿಕಾರ’ ಹಾಡನ್ನು ಭಾಸ್ಕರ್ ಪ್ರಸಾದ್ ಹಾಡುವುದು, ನಾನು ಮತ್ತು ಅವರದ್ದೇ ತಂಡದ ಕಿರಣ್ ಕಂಜಿರ ನುಡಿಸುವುದು. ಇಬ್ಬರ ತಾಳಪ್ರಜ್ಞೆಯನ್ನೂ ಗಮನಿಸಿದ ಬಸು, ನನ್ನದೇ ಗೆಲುವೆಂದು ಘೋಷಿಸಿದರು. ನಾನು ಮೊದಲ ಸಲವೇ ಗೆದ್ದಿದ್ದೆ.

ಎಲ್ಲ ತಂಡಗಳಿಗೂ ಅವರದ್ದಲ್ಲದ ಬೇರೆ-ಬೇರೆ ತಾಲೂಕುಗಳಲ್ಲಿ ನಾಟಕ ಮಾಡುವ ಅವಕಾಶ ಸಿಕ್ಕರೆ, ನಮಗೆ ದೊಡ್ಡಬಳ್ಳಾಪುರವೇ ಸಿಕ್ಕಿತು. ಒಟ್ಟು ನಲವತ್ತು ಹಳ್ಳಿಗಳಲ್ಲಿ ನಾವು ನಾಟಕ ಮಾಡಬೇಕಿತ್ತು. ಸ್ಥಳೀಯ ಪಂಚಾಯ್ತಿ ಅಧಿಕಾರಿಗಳು ಆಯಾ ಹಳ್ಳಿಗಳಲ್ಲಿ ನಮಗೆ ತೊಂದರೆಯಾಗದಂತೆ ಸೌಕರ್ಯ ನೋಡಿಕೊಳ್ಳಬೇಕೆಂದು ನಿಗದಿಯಾಯಿತು. ನಮ್ಮ ತಂಡಕ್ಕೆ ನಮ್ಮ ತಾಲೂಕಿನ ಪ್ರತಿ ಹಳ್ಳಿಯಲ್ಲಿಯೂ ಪರಿಚಯಸ್ಥರಿದ್ದಿದ್ದರಿಂದ ಅನುಕೂಲವಾಯಿತು. ಆದರೆ, ನಮ್ಮ ತಂಡದ ಲೀಡರ್ ಸಸ್ಯಾಹಾರಿಯಾಗಿದ್ದದ್ದು ಸ್ವಲ್ಪ ತೊಂದರೆಯಾಯಿತು. ಪಂಚಾಯ್ತಿಯವರು ಮಾಂಸದೂಟ ಮಾಡುವ ಸಿದ್ಧತೆಯಲ್ಲಿದ್ದಾಗ ಇವರು, “ನಮ್ಮ ಹುಡುಗರಿಗೆ ಖಾರ ತಿಂದರೆ ಆರೋಗ್ಯ ಹಾಳಾಗಬಹುದು. ದಯವಿಟ್ಟು ಸಿಹಿ ಊಟ ಮಾಡಿಸಿ; ಬೆಳ್ಳುಳ್ಳಿ ಬಳಸದ್ದಿದ್ದರೆ ಇನ್ನೂ ಒಳ್ಳೆಯದು,” ಎಂದು ಹೇಳಿಬಿಡುತ್ತಿದ್ದರು. ಇದು ಜಗಳಕ್ಕೆ ಕಾರಣವಾಗಿತ್ತು. ಕೆಲವು ಹಳ್ಳಿಗಳಲ್ಲಿ ಬಹಳ ಚೆನ್ನಾಗಿ ನೋಡಿಕೊಳ್ಳುತ್ತಿದ್ದವರು ನಾಟಕ ನೋಡಿದ ಮೇಲೆ ನಮ್ಮ ಕಡೆ ನೋಡುತ್ತಲೂ ಇರಲಿಲ್ಲ. ಅದರಲ್ಲೂ, ‘ಪುಕ್ಸಟ್ಟೆ ಪ್ರಸಂಗ’ ಎನ್ನುವ ನಾಟಕದಲ್ಲಿ ಮಹಿಳಾ ಪಂಚಾಯ್ತಿ ಅಧ್ಯಕ್ಷೆಯ ಗಂಡನ ಅಧಿಕಾರ ಲಾಲಸೆಯ ವಿಡಂಬನೆ ಇತ್ತು. ಆ ನಾಟಕ ಜನರಿಗೆ ಎಷ್ಟು ಇಷ್ಟವಾಗುತ್ತಿತ್ತೋ ಅಧ್ಯಕ್ಷೆ ಗಂಡನಿಗೆ ಕೋಪ ಬರಿಸುತ್ತಿತ್ತು!

ಈ ಜಾಥಾ ಅನುಭವಗಳನ್ನು ಇನ್ನೊಂದು ಸಂಚಿಕೆಯಲ್ಲಿ ಮುಂದುವರಿಸುವೆ…

ಈದಿನ.ಕಾಮ್ ಆಡಿಯೊಗಳನ್ನು ಆಲಿಸಲು ಕ್ಲಿಕ್ ಮಾಡಿ:
ನುಡಿ ಹಲವು | ಅಂಕಣ | ವೈವಿಧ್ಯ

ಪೋಸ್ಟ್ ಹಂಚಿಕೊಳ್ಳಿ:

ಹುಲಿಕುಂಟೆ ಮೂರ್ತಿ
ಹುಲಿಕುಂಟೆ ಮೂರ್ತಿ
ದೊಡ್ಡಬಳ್ಳಾಪುರ ತಾಲೂಕಿನ ಹುಲಿಕುಂಟೆಯವರು. ಕನ್ನಡ ಮೇಷ್ಟ್ರು. ಸಮಕಾಲೀನ ಚಳವಳಿಗಳ ಸಂದರ್ಭದಲ್ಲಿ ತಪ್ಪದೆ ಕಾಣಿಸಿಕೊಳ್ಳುವ ಹೆಸರು. ಸಾಮಾಜಿಕ ಅನ್ಯಾಯಗಳನ್ನು ಕಂಡರೆ ಸಿಡಿದೇಳುವ ಸ್ವಭಾವದ ಮೂರ್ತಿ ಅವರಿಗೆ, ಕವಿತೆಗಳು ಅಚ್ಚುಮೆಚ್ಚು.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹೊಸಿಲ ಒಳಗೆ-ಹೊರಗೆ | ಬ್ರಾ… ಪ್ರತಿಭಟನೆ ಮತ್ತು ಬಿಡುಗಡೆಯ ಭಾವ

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಮೈಕ್ರೋಸ್ಕೋಪು | ಅಯೋಧ್ಯೆ ರಾಮ ಮಂದಿರದಲ್ಲಿ ‘ವಿಜ್ಞಾನ’ ಬಳಕೆ; ನಿಜಕ್ಕೂ ದೇಶದಲ್ಲಿ ಇದೇ ಮೊದಲಾ?

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಹೊಸಿಲ ಒಳಗೆ-ಹೊರಗೆ | ನೀವು ಕೊಕ್ಕರೆಯಾದರೂ ಸರಿಯಲ್ಲ, ನರಿಯಾದರೂ ಸರಿಯಲ್ಲ; ಯಾಕೆಂದರೆ…

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಮನಸ್ಸಿನ ಕತೆಗಳು – 20 | ಡಿವೋರ್ಸ್‌ವರೆಗೂ ಮುಂದುವರಿದಿದ್ದ ಗರ್ಭಿಣಿ ಹರಿಣಿಯ ಕತೆ

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...