ಎರಡು ಪ್ರತ್ಯೇಕ ಚೆಕ್‌ಬೌನ್ಸ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಮಂಗಳೂರು ನಗರದ 9ನೇ ಜೆಎಂಎಫ್‌ಸಿ ನ್ಯಾಯಾಲಯ ಉಡುಪಿಯ ಇಬ್ಬರು ಉದ್ಯಮಿಗಳಿಗೆ ಜೈಲು ಶಿಕ್ಷೆ ಪ್ರಕಟಿಸಿದ್ದು, ದಂಡವನ್ನು ವಿಧಿಸಿದೆ.
ಎರಡೂ ಪ್ರಕರಣಗಳನ್ನು ಕೇವಲ ಒಂದೇ ವರ್ಷದಲ್ಲಿ ವಿಚಾರಣೆ ನಡೆಸಲಾಗಿದ್ದು, 9ನೇ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರಾದ ಡಾ. ಶಿಲ್ಪಾ ಬ್ಯಾಡಗಿ ಅವರಿದ್ದ ನ್ಯಾಯಪೀಠ ಈ ಕ್ಷಿಪ್ರಗತಿಯ ತೀರ್ಪು ನೀಡಿದೆ.
ಪ್ರಕರಣಗಳ ವಿವರ:
ಉಡುಪಿಯ ಪ್ರಕಾಶ್ ಆಚಾರ್ಯ ಮಾಲಕತ್ವದ ವಿಶ್ವ ಕನ್ಸ್‌ಟ್ರಕ್ಷನ್ ಸಂಸ್ಥೆಯು ಮಂಗಳೂರಿನ ಕೆನ್ ಎಂಟರ್‌ಪ್ರೈಸಸ್‌ನವರಿಂದ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದ ಸಾಮಗ್ರಿಗಳನ್ನು ಪಡೆದುಕೊಂಡಿತ್ತು. ಈ ಸಾಮಗ್ರಿಗಳಿಗೆ ಸಂಬಂಧಿಸಿದಂತೆ ಬಾಡಿಗೆ ಹಾಗೂ ಇತರ ಮೊತ್ತವನ್ನು ಪಾವತಿಸುವಲ್ಲಿ ವಿಫಲವಾಗಿತ್ತು.
ಈ ಬಗ್ಗೆ ಸಾಕಷ್ಟು ಬಾರಿ ಹಣದ ಬೇಡಿಕೆ ಇಟ್ಟಿದ್ದರೂ ಹಣ ನೀಡದ ಹಿನ್ನೆಲೆಯಲ್ಲಿ ಭದ್ರತೆಗಾಗಿ ನೀಡಿದ್ದ ಚೆಕ್ಕನ್ನು ನಗದೀಕರಣಕ್ಕೆ ಬ್ಯಾಂಕಿಗೆ ಹಾಜರುಪಡಿಸಲಾಯಿತು. ಚೆಕ್ ಅಮಾನ್ಯಗೊಂಡ ಕಾರಣ, ಮಂಗಳೂರಿನ 9ನೇ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿತ್ತು.
2024ರ ಫೆಬ್ರವರಿಯಲ್ಲಿ ದಾಖಲಾದ ಪ್ರಕರಣವನ್ನು ಕ್ಷಿಪ್ರ ಗತಿಯ ವಿಚಾರಣೆ ನಡೆಸಿದ ಮಾನ್ಯ ನ್ಯಾಯಾಲಯ ಆರೋಪಿಗೆ 14.40 ಲಕ್ಷ ರೂ. ದಂಡ ಪಾವತಿಸುವಂತೆ ಆದೇಶ ಹೊರಡಿಸಿದೆ. ದಂಡದ ಮೊತ್ತ ಪಾವತಿಸುವಲ್ಲಿ ವಿಫಲರಾದರೆ, ಆರು ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿದೆ.
ದಂಡದ ಮೊತ್ತದಲ್ಲಿ 14.35 ಲಕ್ಷವನ್ನು ದೂರುದಾರರಿಗೆ ನೀಡಬೇಕು. ಜೈಲು ಶಿಕ್ಷೆ ಅನುಭವಿಸಿದರೂ ದೂರುದಾರರಿಗೆ ಪರಿಹಾರ ನೀಡುವ ಬಾಧ್ಯತೆಯಿಂದ ಮುಕ್ತರಾಗುವುದಿಲ್ಲ ಎಂದು ತೀರ್ಪಿನಲ್ಲಿ ಸ್ಪಷ್ಟಪಡಿಸಲಾಗಿದೆ.
ಇನ್ನೊಂದು ಪ್ರಕರಣದಲ್ಲಿ ಉಡುಪಿಯ ರವಿ ಕುಮಾರ್ ಎಂಬವರು ಮಂಗಳೂರಿನ ಕೆನ್ ಎಂಟರ್‌ಪ್ರೈಸಸ್‌ನಿಂದ ಕಟ್ಟಡ ನಿರ್ಮಾಣದ ಸಾಮಗ್ರಿ ಪಡೆದುಕೊಂಡು, ಅದರ ಮೊತ್ತವನ್ನು ಪಾವತಿಸಿರಲಿಲ್ಲ. ಅವರು ನೀಡಿದ್ದ ಚೆಕ್ ಅಮಾನ್ಯಗೊಂಡಿತ್ತು.
ಇದನ್ನು ಓದಿದ್ದೀರಾ? ದ.ಕ.ಜಿಲ್ಲೆಯ ಎಲ್ಲ ‘ಟಾರ್ಗೆಟೆಡ್ ಮರ್ಡರ್’ಗಳ ಬಗ್ಗೆ ಎಸ್‌ಐಟಿ ರಚಿಸಿದರೆ ವಾಸ್ತವ ಬಯಲು: ರಮಾನಾಥ ರೈ
ಕೆನ್ ಸಂಸ್ಥೆಯ ಮಾಲೀಕರು ರವಿ ಕುಮಾರ್ ಅವರ ವಿರುದ್ಧ 9ನೇ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಒಂದೇ ವರ್ಷದೊಳಗೆ ಪ್ರಕರಣವನ್ನು ಇತ್ಯರ್ಥ ಮಾಡಿದ ನ್ಯಾಯಾಲಯ, ಆರೋಪಿಗೆ 4.05 ಲಕ್ಷ ರೂ. ದಂಡ ವಿಧಿಸಿದೆ. ದಂಡ ವಿಧಿಸಲು ವಿಫಲರಾದರೆ ನಾಲ್ಕು ತಿಂಗಳು ಜೈಲು ಶಿಕ್ಷೆಯನ್ನು ವಿಧಿಸಿದೆ. ದಂಡದ ಮೊತ್ತದಲ್ಲಿ 4 ಲಕ್ಷ ರೂ.ಗಳನ್ನು ದೂರುದಾರರಿಗೆ ಪರಿಹಾರವಾಗಿ ನೀಡಲು ಆದೇಶಿಸಲಾಗಿದೆ.
ಎರಡೂ ಪ್ರಕರಣಗಳಲ್ಲಿ ದೂರುದಾರರ ಪರವಾಗಿ ಮಂಗಳೂರಿನ ವಕೀಲರಾದ ಸುಕೇಶ್ ಕುಮಾರ್ ಶೆಟ್ಟಿ ಅವರು ವಾದಿಸಿದ್ದರು.