ಮಂಡ್ಯದ ನಾಗಮಂಗಲ ಗಲಾಟೆಯ ಹಿನ್ನೆಲೆಯಲ್ಲಿ ನಿನ್ನೆ(ಶುಕ್ರವಾರ) ಬೆಂಗಳೂರಿನ ಟೌನ್‌ಹಾಲ್ ಬಳಿ ಸಂಘಪರಿವಾರದ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಈ ಪ್ರತಿಭಟನೆಗೆ ಗಣೇಶ ಮೂರ್ತಿಯನ್ನೂ ಕೂಡ ತಂದಿದ್ದರು. ಪ್ರತಿಭಟನೆ ಮಾಡುವ ವೇಳೆ ಪೋಲಿಸರು ಸಂಘಪರಿವಾರದ ಕಾರ್ಯಕರ್ತರ ಕೈಯ್ಯಲ್ಲಿದ್ದ ಗಣೇಶ ಮೂರ್ತಿಯನ್ನು ವಶಪಡಿಸಿಕೊಂಡು, ಆ ಬಳಿಕ ವಿಸರ್ಜನೆ ಮಾಡಿದ್ದರು.
ಆದರೆ ಈ ಘಟನೆಯನ್ನು ತಿರುಚಿ, ಸುಳ್ಳು ಲೇಪನ ಹಚ್ಚಿರುವ ಬಿಜೆಪಿ, “ಕೇಡುಗಾಲಕ್ಕೆ ನಾಯಿ ಮೊಟ್ಟೆ ಇಟ್ಟಂತೆ ಕಾಂಗ್ರೆಸ್ ಸರ್ಕಾರ ರಾಹು ಕಾಲಕ್ಕೆ ಗಣೇಶ ಮೂರ್ತಿಗಳನ್ನು ಬಂಧಿಸಿದೆ. ಹಿಂದೂ ವಿರೋಧಿ ಕರ್ನಾಟಕ ಕಾಂಗ್ರೆಸ್ ಸರ್ಕಾರ ಅದೆಷ್ಟರಮಟ್ಟಿಗೆ ಲಜ್ಜೆ ಬಿಟ್ಟು ನಿಂತಿದೆ ಎನ್ನುವುದಕ್ಕೆ ಗಣೇಶ ಮೂರ್ತಿಯನ್ನೇ ಬಂಧಿಸಿ ಪೊಲೀಸ್ ವಾಹನದಲ್ಲಿ ತೆಗೆದುಕೊಂಡು ಹೋಗುತ್ತಿದೆ. ಇಷ್ಟು ದಿನ ಹಿಂದೂಗಳ ಮೇಲೆ ದಾಳಿ ಮಾಡಿಸುವುದು, ಹಿಂದೂಗಳ ಭೂಮಿ ಕಬಳಿಸುವುದು, ಹಿಂದೂಗಳನ್ನು ಬಂಧಿಸುವುದು, ಹಿಂದೂಗಳನ್ನು ಹತ್ತಿಕ್ಕುತ್ತಿದ್ದ ಭ್ರಷ್ಟ ಸಿಎಂ ಸಿದ್ದರಾಮಯ್ಯ ಅವರು ಗಣೇಶ ಮೂರ್ತಿಗಳನ್ನೇ ಬಂಧಿಸಿರುವುದು ರಾಹುಕಾಲ ಶೀಘ್ರದಲ್ಲೇ ಕೊನೆಯಾಗಲಿದೆ ಎಂಬುದರ ಮುನ್ಸೂಚನೆ” ಎಂದು ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಕಿಡಿಕಾರಿತ್ತು.
ಅಲ್ಲದೇ, ಈ ಘಟನೆಗೆ ಸಂಬಂಧಿಸಿ ಪೊಲೀಸ್ ವಾಹನದಲ್ಲಿರುವ ಗಣೇಶ ಮೂರ್ತಿಯ ಫೋಟೋ ಹಂಚಿಕೊಂಡು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸಂಘಪರಿವಾರದ ಮುಖಂಡ ಚಕ್ರವರ್ತಿ ಸೂಲಿಬೆಲೆ ಸೇರಿದಂತೆ ಹಲವು ಬಿಜೆಪಿ ನಾಯಕರು ಸುಳ್ಳು ಆಯಾಮ ನೀಡುವಲ್ಲಿ ಪ್ರಯತ್ನಪಟ್ಟಿದ್ದಾರೆ. ಘಟನೆ ಎಲ್ಲಿಯದ್ದೆಂದು ತಿಳಿಯದ ಶೋಭಾ ಕರಂದ್ಲಾಜೆ, ಮಂಡ್ಯದಲ್ಲಿ ನಡೆದದ್ದು ಎಂದು ಸುಳ್ಳು ಸುದ್ದಿ ಹರಡಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಆಲ್ಟ್ ನ್ಯೂಸ್‌ನ ಪತ್ರಕರ್ತ ಹಾಗೂ ಫ್ಯಾಕ್ಟ್ ಚೆಕ್ ನಡೆಸುವ ಮುಹಮ್ಮದ್ ಝುಬೇರ್, “ನೀವು ಹಂಚಿರುವ ಫೋಟೋಗಳು ಮಂಡ್ಯದ್ದಲ್ಲ, ಬೆಂಗಳೂರಿನ ಟೌನ್‌ಹಾಲ್ ಮುಂದೆ ನಡೆದದ್ದು” ಎಂದು ಸ್ಪಷ್ಟಪಡಿಸಿದ್ದಾರೆ.
ಅಲ್ಲದೇ, “ದಾರಿ ತಪ್ಪಿಸುವುದನ್ನು ನಿಲ್ಲಿಸಿ. ಚಿತ್ರಗಳು ಮಂಡ್ಯದ್ದಲ್ಲ, ಬೆಂಗಳೂರಿನ ಟೌನ್‌ಹಾಲ್ ಮುಂದೆ ನಡೆದಿರುವ ಪ್ರತಿಭಟನೆಯ ವೇಳೆಯದ್ದು ಎಂಬುದು ಸತ್ಯ. ಟೌನ್‌ಹಾಲ್‌ಗೆ ವಿಗ್ರಹದೊಂದಿಗೆ ಬಂದ ಪ್ರತಿಭಟನಾಕಾರರಿಂದ ಗಣೇಶ ಮೂರ್ತಿಯನ್ನು ರಕ್ಷಿಸಿ, ನಂತರ ಪೊಲೀಸರೇ ವಿಸರ್ಜನೆ ಮಾಡಿದ್ದಾರೆ” ಎಂದು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸದ್ಯದ ನಿಯಮದ ಪ್ರಕಾರ ಫ್ರೀಡಂ ಪಾರ್ಕ್ ಬಿಟ್ಟು ಎಲ್ಲೂ ಪ್ರತಿಭಟನೆ ಮಾಡುವಂತಿಲ್ಲ. ಆದರೆ, ನಿನ್ನೆ ಬೆಂಗಳೂರಿನ ಟೌನ್ ಹಾಲ್ ಬಳಿ ಸಂಘಪರಿವಾರದ ಕಾರ್ಯಕರ್ತರು ಗಣೇಶ ಮೂರ್ತಿಯನ್ನು ಮುಂದೆ ಇಟ್ಟು, ಪ್ರತಿಭಟನೆ ಮಾಡಲು ಯತ್ನಿಸಿದ್ದಾರೆ. ಈ ವೇಳೆ ಪೊಲೀಸರು ಎಲ್ಲರನ್ನೂ ಬಂಧಿಸಿದ್ದರು.

ಪುಂಗ್ಲಿ ಅಣ್ಣಾ ಜೀವನ ಪರ್ಯಂತ ಸತ್ಯವಲ್ಲದನೇ ನಾಟಕೀಯವಾಗಿ ಒದರುವ ಕಲಾಕಾರ,,, ಜವಾಬ್ದಾರಿ ಸ್ಥಾನದಲ್ಲಿರುವ ಮಂತ್ರಿಣಿ ಸಹ ಹಾಗೆಯೇ ಅಂದ್ರೆ ಇಲಾಖೆಯನ್ನು ಇನ್ನೇಗೆ ನಡಸ್ತಿರಬೇಕು,,ಈ ದೇಶವನ್ನು ವಿಘ್ನೇಶ್ವನೇ ಕಾಪಾಡಬೇಕು