ಒಂದು ಭಾಗದಲ್ಲಿ ಕೃಷ್ಣ ನದಿ, ಮತ್ತೊಂದು ಭಾಗದಲ್ಲಿ ತುಂಗಾಭದ್ರ ನದಿ – ಎರಡು ಬೃಹತ್ ನದಿಗಳು ಹರಿಯುವ ರಾಯಚೂರು ಜಿಲ್ಲೆ ಸದ್ಯ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದೆ. ಕೃಷ್ಣ ನದಿಗೆ ಅಡ್ಡಲಾಗಿ ಕಟ್ಟಿರುವ ನಾರಾಯಣಪುರ ಜಲಾಶಯದ ನಾಲೆಗಳಿಂದ ರಾಯಚೂರು, ಮಾನ್ವಿ ತಾಲೂಕುಗಳ ಕಡೆಯ ಭಾಗಕ್ಕೆ ನೀರು ಬಾರದಿರುವುದು ಕೃಷಿಗೆ ತೊಡಕಾಗುತ್ತಿದೆ ಎಂದು ರೈತರು ಆಗಾಗ್ಗೆ ಪ್ರತಿಭಟನೆ ನಡೆಸುತ್ತಿದ್ದರು. ಇದೀಗ, ಕುಡಿಯುವ ನೀರಿಗಾಗಿಯೂ ಹೋರಾಟ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ರಾಯಚೂರು ತಾಲೂಕಿನ ಕೃಷ್ಣಾ ನದಿಗೆ ಸಮೀಪವೇ ಇರುವ ಡಿ ರಾಂಪುರ ಸೇರಿದಂತೆ ನಾನಾ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೂರಿದೆ. ಕೃಷ್ಣಾ ನದಿ ಒಣಗಿದ್ದು, ನಾಲೆಗಳಲ್ಲಿ ನೀರು ಬರುತ್ತಿಲ್ಲ. ಅಂತರ್ಜಲ ಬರಿದಾಗಿ, ಬೋರ್‌ವೆಲ್‌ಗಳೂ ಬತ್ತಿ ಹೋಗಿವೆ. ದೂರದ ಜಮೀನುಗಳಿಂದ ನೀರು ತರಬೇಕಾದ ಅನಿವರ್ಯತೆ ಗ್ರಾಮಸ್ಥರಿಗೆ ಎದುರಾಗಿದೆ.
ಗ್ರಾಮಗಳ ಜನರ ಕುಡಿಯುವ ನೀರಿನ ಸಮಸ್ಯೆ ಜೊತೆಗೆ, ಜಾನುವಾರುಗಳಿಗೂ ನೀರಿಲ್ಲದೆ, ಅವುಗಳಿಗೂ ಕುಡಿಯಲು ನೀರು ತರುವುದು ಸವಾಲಾಗಿದೆ.
“ನೀರಿನಲ್ಲ ಸ್ನಾನ ಮಾಡಿಲ್ಲ. ಕುಡಿಯುವ ನೀರಿಗಾಗಿ ಪರದಾಡುತ್ತಿದ್ದೇವೆ. ದಿನನಿತ್ಯ ನೀರಿಗಾಗಿ ಜಮೀನುಗಳ ಪಂಪ್‌ಸೆಟ್‌ಗೆ ಹೋದರೆ, ಜಮೀನು ಮಾಲೀಕರು ಬಿಡುವುದಿಲ್ಲ. ಸರ್ಕಾರ, ಸ್ಥಳೀಯ ಆಡಳಿತಗಳು ನಮ್ಮ ಸಮಸ್ಯೆ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ” ಎಂದು ಗ್ರಾಮಸ್ಥರು ಕಿಡಿಕಾರಿದ್ದಾರೆ.