ಜುಲೈ 27ರಂದು ರಂಗಾಯಣ ಕಲಬುರಗಿಯಲ್ಲಿ ಪಯಣ ತಂಡವು ‘ತಲ್ಕಿ’ ನಾಟಕವನ್ನು ಪ್ರಸ್ತುತ ಪಡಿಸಿತು.
ಹುಟ್ಟುವಾಗ ಯಾರೂ ಕೂಡ ಗಂಡಾಗಿ ಅಥವಾ ಹೆಣ್ಣಾಗಿ ಹುಟ್ಟುವುದಿಲ್ಲ. ದೈಹಿಕ ಅಂಗಾಂಗಗಳ ಮೇಲೆ ನಾವು ಹೆಣ್ಣು, ಗಂಡು ಎಂದು ಗುರುತಿಸುತ್ತೇವೆ. ಗುರುತಿಸುವುದರ ಜೊತೆಗೆ ಗಂಡು ಹೀಗೆಯೇ ಇರಬೇಕು, ಹೆಣ್ಣು ಹೀಗೆಯೇ ಇರಬೇಕು ಎಂದು ಬೆಳೆಸುತ್ತೇವೆ ಎನ್ನುತ್ತಾರೆ ಸ್ತ್ರೀವಾದಿ ಚಿಂತಕಿ ಸಿಮೊನ್ ದ ಬೊವಾ.
ಹುಟ್ಟಿದ ದೇಹಕ್ಕೆ ಗಂಡು ಹೆಣ್ಣು ಎಂಬ ಪಟ್ಟ ಕಟ್ಟುವ ನಾವು, ಬೆಳೆಯುವ ದೇಹಕ್ಕೆ ಮತ್ತು ಬದಲಾಗುವ ಭಾವನೆಗಳಿಗೆ ತನ್ನದೇ ಆಯ್ಕೆ ಸ್ವತಂತ್ರ್ಯ ನೀಡಲು ನಿರಾಕರಿಸುತ್ತೇವೆ. ಎಲ್ಲಿಯವರೆಗೆ ಈ ಬಂಧನ ಎಂಬ ಪ್ರಶ್ನೆ ಶುರುವಾದಾಗ ಲೈಂಗಿಕ ಅಲ್ಪಸಂಖ್ಯಾತರ ಸ್ವಂತ ಆಯ್ಕೆಯ ಒಂಟಿ ಬದುಕು ಶುರುವಾಗುತ್ತದೆ. ತಾವು ಕಟ್ಟಿಕೊಂಡ ಕುಟುಂಬದ ಒಳ ಜಗತ್ತನ್ನು ರಂಗದ ಮೇಲೆ ಎಳೆ ಎಳೆಯಾಗಿ ಹೂ ಪಕಳೆಯಂತೆ ಬಿಚ್ಚುತ್ತಾ ಸಾಗುತ್ತದೆ ಈ ನಾಟಕ.

‘ತಲ್ಕಿ’ ಎಂದರೆ ಟ್ರಾನ್ಸ್ ಸಮುದಾಯದಲ್ಲಿ ಮಾಡುವ ಒಂದು ಮಾಂಸದ ಖಾದ್ಯ. ಕೂಡು ಕುಟುಂಬದಲ್ಲಿ ಖುಷಿ, ದುಖಃ ಹೇಳಿಕೊಳ್ಳಲು ಅಮ್ಮ, ಅಪ್ಪ, ಅಣ್ಣ, ತಂಗಿ ಮತ್ತು ಅಕ್ಕ ಎಲ್ಲರೂ ಕಿವಿಯಾಗುತ್ತಾರೆ. ಆದರೆ ಇಲ್ಲಿ ನಾನಿ ಗುರು ಎಲ್ಲರ ತಾಯಿಯಾಗಿ ತಂದೆಯಾಗಿ ಜೊತೆಯಾಗುತ್ತಾಳೆ. ಪ್ರೀತಿಗೂ ಅವಳೇ. ಕೋಪಕ್ಕೂ ಅವಳೇ ಧ್ವನಿಯಾಗಿ ಹಸಿದ ಹೊಟ್ಟೆಗೆ ತಲ್ಕಿ ಖಾದ್ಯವಾಗುತ್ತಾಳೆ. ತನ್ನವರ ಕಷ್ಟ ಕೇಳಿ ತನ್ನ ಮಕ್ಕಳೆಂದೇ ಎದೆ ಬಡಿದುಕೊಳ್ಳುವ ದೃಶ್ಯ ತಾಯಿಯನ್ನು ರಂಗದ ಮೇಲೆ ನಿಲ್ಲಿಸುತ್ತದೆ. 50 ವಯಸ್ಸು ದಾಟಿದ ಲೈಂಗಿಕ ಅಲ್ವಸಂಖ್ಯಾತರ ಬದುಕು ಹೇಗಿರುತ್ತೆ ಎಂಬ ಚಿತ್ರಣ ಕಣ್ಣ ಮುಂದೆ ದಿನದಿಂದ ದಿನಕ್ಕೆ ಸಾಗುತ್ತದೆ.
ನಿಜ ಜೀವನದಲ್ಲಿ ತಾವು ಅನುಭವಿಸಿದ ನೋವುಗಳು ಮತ್ತು ಎದೆಯಲ್ಲಿರುವ ಕನಸುಗಳ ಹೊತ್ತುಕೊಂಡು ರಂಗದ ಮೇಲೆ ತಾವೇ ನಟಿಸುವುದು ಹೊಸ ರಂಗ ಪ್ರಯೋಗ. ಇಡೀ ಜೀವನ ಸಾಗಿ ಬಂದ ದಾರಿಯಲ್ಲಿ ಅನುಭವಿಸಿದ ನೋವುಗಳು, ಕಟ್ಟಿಕೊಂಡ ಕುಟುಂಬ, ಬದುಕುವ ರೀತಿ ಮತ್ತು ಮಾಸದೆ ಉಳಿದ ಕನಸುಗಳನ್ನ ಬಿಚ್ಚುತ್ತಾ ಸಾಗುವ ಈ ನಾಟಕ LGBTQ ಸಮುದಾಯಗಳ ಬದುಕನ್ನು ನೋಡುಗರಿಗೆ ಅರ್ಥ ಮಾಡಿಸುತ್ತದೆ. ಹುಟ್ಟಿದ ಕುಟುಂಬದಿಂದ ಹೊರ ಬಿದ್ದಮೇಲೆ ಬದುಕು ಅಷ್ಟು ಸುಲಭವಲ್ಲ ಎನ್ನುತ್ತಲೇ ಭಿಕ್ಷಾಟನೆಯಿಂದ ಶುರುವಾಗಿ ಲೈಂಗಿಕ ವೃತ್ತಿಯವರೆಗೆ ದೇಹ ಹಣ್ಣಾಗುವ ತನಕದ ಒಟ್ಟು ಪಯಣದ ಕುರಿತು ಅಡುಗೆ ಮನೆಯಲ್ಲಿ ಚರ್ಚೆ ನಡೆಯುತ್ತದೆ.
ಸ್ನಾನಕ್ಕೆ ಕುಳಿತು ತಮ್ಮ ಮೈಮೇಲಾದ ಗಾಯಗಳ ಬಗ್ಗೆ ಒಬ್ಬಬ್ಬರಾಗಿ ಅನುಭವ ಬಿಚ್ಚುತ್ತಾರೆ. ಉಚಿತವಾಗಿ ಮೈ ಕೇಳಿದವನು ಮಾಡಿದ ಗಾಯಗಳು ಒಂದು ಕಡೆಯಾದರೆ, ನೀವು ಇರುವುದೇ ಲೈಂಗಿಕ ವೃತ್ತಿಗಾಗಿ ಎನ್ನುವ ಪೊಲೀಸರ ಮಾಡುವ ಗಾಯಗಳು ಮತ್ತೊಂದು ಕಡೆ. ಈ ಗಾಯಗಳ ನಡುವೆ ನೀನು ಗಂಡೋ ಅಥವಾ ಹೆಣ್ಣೋ ಎಂಬ ಸಮಾಜದ ಕೊಂಕು ಮಾತುಗಳು ಎದೆಗೆ ಚುಚ್ಚುತ್ತವೆ.

ನಾವು ಮಾಡಿದ ಅದೆಷ್ಟು ಗಾಯಗಳನ್ನು ವಾಸಿ ಮಾಡಬೇಕು ಎಂಬ ನೋವು ನಾಟಕ ನೋಡುವವರನ್ನು ಕಾಡುತ್ತದೆ. ನನಗೂ ಒಂದು ಕುಟುಂಬ ಬೇಕು ಎಂಬ ಕನಸಿಗೆ ಮಕ್ಕಳನ್ನು ಸಾಕಿಕೊಂಡರೆ ತಂದೆ ಯಾರು ಎಂಬ ಪ್ರಶ್ನೆ ಮಕ್ಕಳನ್ನು ಮಾನಸಿಕವಾಗಿ ಕುಗ್ಗಿಸಿ ಅವರನ್ನ ಕ್ರೂರಿಯಾಗಿಸುತ್ತದೆ ಈ ವ್ಯವಸ್ಥೆ. ಗಂಡಿಲ್ಲದ ಬದುಕು ಬದುಕೇ ಅಲ್ಲ ಅನ್ನುವವರ ನಡುವೆ ಗಂಡಿಲ್ಲದೆ ಸಾಗಿದವರ ಹೋರಾಟದ ಬದುಕು ರಂಗದ ಮೇಲೆ ಅನಾವರಣಗೊಳ್ಳುತ್ತದೆ.
ಸಮುದಾಯಗಳು ಬಳಸುವ ಭಾಷೆ, ಮಾತಿನ ಶೈಲಿ, ಬೈಗುಳಗಳನ್ನು ಮುಕ್ತವಾಗಿ ಬಳಸಲಾಗಿದೆ. ಪ್ರೀತಿ, ಪ್ರೇಮಗಳ ಮಾತುಕತೆ ಜೊತೆಗೆ ಕಂಡ ಕನಸುಗಳ ಕುರಿತು ಸಹಜವಾಗಿ ಚರ್ಚೆಯಾಗುತ್ತದೆ. ಲೈಂಗಿಕತೆ ಕುರಿತು ಇರುವ ಕೀಳರಿಮೆ ಮತ್ತು ಮುಕ್ತ ಮಾತುಕತೆಯನ್ನು ವಿರೋಧಿಸುವ ಸಾಂಪ್ರದಾಯಿಕ ಗೌಪ್ಯತೆಗಳನ್ನು ಒಡೆದು ಮುಕ್ತವಾಗಿ ಮಾತನಾಡುವ ಅಗತ್ಯದ ಅರಿವು ಕೂಡ ಇಲ್ಲಿ ಸೂಕ್ಷ್ಮವಾಗಿ ವ್ಯಕ್ತವಾಗುತ್ತದೆ.
ತಾವು ಕಂಡ ಕನಸುಗಳನ್ನು ರಂಗದ ಮೇಲೆ ನನಸಾಗಿಸು ದೃಶ್ಯ ಒಮ್ಮೆ ನಮ್ಮನ್ನು ಹಿಡಿದಿಟ್ಟುಬಿಡುತ್ತದೆ. ಒಬ್ಬರಿಗೆ ಅರ್ಧನಾರೀಶ್ವರ ಆಗಬೇಕು, ಮತ್ತೊಬ್ಬರಿಗೆ ತಾನು ಶಕುಂತಲೆಯಾಗಬೇಕು, ಮಹಾರಾಣಿಯಾಗಬೇಕು, ಆಂಡಾಳ್ ಆಗಬೇಕು, ಜಯಮಾಲಳಾಗಬೇಕೆಂಬ ಬಯಕೆಗಳನ್ನು ನೃತ್ಯದ ಮೂಲಕ ಪೂರೈಸಿಕೊಳ್ಳುತ್ತಾರೆ. ಟ್ರಾನ್ಸ್ ಸಮುದಾಯದ ಮನೆಯಿಂದ ಹಿಡಿದು ಅಲ್ಲಿರುವ ವಾತಾವರಣವನ್ನ ಅಚ್ಚುಕಟ್ಟಾಗಿ ರಂಗದ ಮೇಲೆ ತಂದಿದ್ದಾರೆ ಶ್ರೀಜಿತ್ ಸುಂದರಂ ಅವರು. ಬೆಳಕು, ವಸ್ತ್ರ ವಿನ್ಯಾಸ ಪಾತ್ರದಿಂದ ಪಾತ್ರಕ್ಕೆ ಸೆಳೆಯುತ್ತವೆ. ನಾನಿ ಗುರುಗೆ ಸ್ನಾನ ಮಾಡಿಸುವಾಗ ಬೆನ್ನ ಮೇಲೆ ಬಿದ್ದ ಗಾಯಗಳ ಗುರುತುಗಳನ್ನ ಇಡೀ ಬೆಂಗಳೂರಿನ ಚಿತ್ರಣಕ್ಕೆ ಕಟ್ಟಿದ್ದಾರೆ. ಈ ಚಿತ್ರಣ ಮತ್ತೊಂದು ಲೋಕದ ಸುಳಿವು ಕೊಡುತ್ತದೆ.
ನಾಟಕದುದ್ದಕ್ಕೂ ನಮ್ಮೊಳಗಿನ ಮಾನವಿಯತೆಯನ್ನ ಕೆಣಕುತ್ತಾ ಸಾಗುತ್ತದೆ. ಹೀಗಾಗಿ ‘ತಲ್ಕಿ’ ಒಂದು ಉತ್ತಮ ನಾಟಕವಾಗಿದೆ. ಗಂಡು-ಹೆಣ್ಣು ಇಬ್ಬರೇ ಶ್ರೇಷ್ಠ ಎನ್ನುವವರ ಮುಂದೆ ಬೆಂದ ತಲ್ಕಿ ಸಾವಿರ ಪ್ರಶ್ನೆಗಳನ್ನೂ ಚೆಲ್ಲುತ್ತದೆ.
ನಾಟಕ : ತಲ್ಕಿ
ಪ್ರಸ್ತುತಿ : ಪಯಣ ತಂಡ
ನಿರ್ದೇಶನ : ಶ್ರೀಜಿತ್ ಸುಂದರಂ
ಕಲಾವಿದರು : ಶಾಂತಮ್ಮ, ಶೋಭನ ಕುಮಾರಿ, ಜಯಮಾಲಿನಿ, ಶರ್ವಣ, ಲಕ್ಷ್ಮಮ್ಮ ಮತ್ತು ಚಾಂದಿನಿ
ಬರೆಹ: ಸಂಜೀವ್ ಜಗ್ಲಿ
