‘ಬೀದರ್ ಜಿಲ್ಲಾಡಳಿತ ಕಚೇರಿಗಳ ಸಂಕೀರ್ಣ 2025ರ ಡಿಸೆಂಬರ್ನೊಳಗೆ ಉದ್ಘಾಟಿಸಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಹೇಳಿದರು.
ಜಿಲ್ಲಾಡಳಿತದಿಂದ ನಗರದ ಜಿಲ್ಲಾ ನೆಹರೂ ಕ್ರೀಡಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಜಿಲ್ಲಾಡಳಿತ ಸಂಕೀರ್ಣ ನಿರ್ಮಾಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಉನ್ನತ ಮಟ್ಟ ಸಭೆ ನಡೆಸಲಾಗಿದೆ. ಲೋಕೋಪಯೋಗಿ ಇಲಾಖೆಯು ಕಟ್ಟಡದ ವಿನ್ಯಾಸ ಸಿದ್ಧಪಡಿಸಿದ್ದು, ಕಂದಾಯ ಸಚಿವ ಕೃಷ್ಣ ಭೈರೇಗೌಡ ಹಾಗೂ ಇಲಾಖೆ ಪ್ರಧಾನ ಕಾರ್ಯದರ್ಶಿಗಳೊಂದಿಗೆ ಮಾತನಾಡಿದ್ದೇನೆ. ಅಂದಾಜು ₹75 ಕೋಟಿ ರೂ. ಪ್ರಸ್ತಾವನೆ ತಯಾರು ಮಾಡಿದ್ದಾರೆ. ಎರಡು ವಾರಗಳಲ್ಲಿ ಈ ವಿಷಯ ಸಚಿವ ಸಂಪುಟದ ಮುಂದೆ ಬರಲಿದೆ. ಆಡಳಿತಾತ್ಮಕ ಒಪ್ಪಿಗೆ ಪಡೆದು, ಸೆಪ್ಟೆಂಬರ್ ಅಕ್ಟೋಬರ್ ತಿಂಗಳಲ್ಲಿ ಟೆಂಡರ್ ಕರೆದು ಶಂಕುಸ್ಥಾಪನೆ ಮಾಡಲಾಗುವುದು’ ಎಂದು ಮಾಹಿತಿ ನೀಡಿದರು.
ಈ ಕುರಿತು ‘ಈದಿನ.ಕಾಮ್‘ ನಲ್ಲಿ ‘ಕನಸಾಗಿಯೇ ಉಳಿದ ಜಿಲ್ಲಾಡಳಿತ ಸಂಕೀರ್ಣ’ ಶಿರ್ಷಿಕೆ ಅಡಿ ನಿನ್ನೆ (ಆ.14ರಂದು) ವಿಸ್ತ್ರತ ವರದಿ ಪ್ರಕಟವಾಗಿತ್ತು. ಅದರ ಬೆನ್ನಲ್ಲೇ ಇಂದು ಜಿಲ್ಲಾ ಉಸ್ತುವಾರಿ ಸಚಿವರು ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ವರದಿಗೆ ಸ್ಪಂದಿಸಿದ್ದಾರೆ.
‘2017-18ರಲ್ಲಿ ನಾನು ಉಸ್ತುವಾರಿ ಮಂತ್ರಿಯಾಗಿದ್ದ ವೇಳೆ ಜಿಲ್ಲಾಡಳಿತ ಸಂಕೀರ್ಣ ನಿರ್ಮಾಣಕ್ಕೆ ಸಿಎಂ ಸಿದ್ದರಾಮಯ್ಯ ಅವರು ಶಂಕುಸ್ಥಾಪನೆ ನೆರೆವೇರಿಸಿದ್ದರು. ಅದಾದ ನಂತರ ಬಂದ ಸರ್ಕಾರಗಳು ಏನು ಮಾಡಿರಲಿಲ್ಲ. ಈಗ ಶೀಘ್ರದಲ್ಲೇ ಜಿಲ್ಲಾಡಳಿತ ಸಂಕೀರ್ಣ ಕಾಮಗಾರಿ ಆರಂಭಿಸಿ 2025ರ ಡಿಸೆಂಬರ್ನೊಳಗೆ ಉದ್ಘಾಟನೆ ಮಾಡಲಾಗುವುದು’ ಎಂದು ಜಿಲ್ಲೆಯ ಜನತೆಗೆ ತಿಳಿಸಿದ್ದಾರೆ.
