ಮೈಸೂರಿನ ಜಲದರ್ಶನಿ ಅತಿಥಿಗೃಹದಲ್ಲಿ ಮೈಸೂರು ಹಾಗೂ ಚಾಮರಾಜನಗರ ಭಾಗದ ಕಬ್ಬು ಬೆಳೆಗಾರರೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ ಹೆಚ್ ಸಿ ಮಹದೇವಪ್ಪ ಸಭೆ ನಡೆಸಿ, ಕಬ್ಬು ಬೆಳೆಗಾರರ ಸಮಸ್ಯೆ ಆಲಿಸಿ, ಅಹವಾಲು ಸ್ವೀಕರಿಸಿದರು.
ಇದೇ ವೇಳೆ ಮಾತನಾಡಿದ ಸಚಿವರು, “ರೈತರ ಸಮಸ್ಯೆಗಳನ್ನು ಬಗೆಹರಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಅದರಂತೆ ಕಬ್ಬು ಬೆಳೆಗಾರರ ಹಿತದೃಷ್ಟಿಯಿಂದ ಸಭೆಯಲ್ಲಿ ತಿಳಿಸಿರುವ ಬೇಡಿಕೆಗಳಿಗೆ ಸರ್ಕಾರವು ಪ್ರಾಮಾಣಿಕವಾಗಿ ಸ್ಪಂದಿಸುವ ಕೆಲಸ ಮಾಡಲಿದೆ” ಎಂದು ಭರವಸೆ ನೀಡಿದರು.
ಕೆ ಆರ್ ನಗರ ಬಳಿಯ ಚುಂಚನ ಕಟ್ಟೆ ಶ್ರೀರಾಮ ಸಕ್ಕರೆ ಕಾರ್ಖಾನೆ ಪ್ರಾರಂಭಿಸುವ ಕುರಿತಾಗಿ ಮಾತನಾಡಿ, ಸರ್ಕಾರ ಹಾಗೂ ಸಂಸ್ಥೆ ನಡುವ ಒಡಂಬಡಿಕೆಯಾಗಿದ್ದು ಕಾರ್ಖಾನೆ ಪ್ರಾರಂಭಿಸಿ ಕಬ್ಬು ಬೆಳೆಯುವ ರೈತರಿಗೆ ಅನುಕೂಲ ಮಾಡಿಕೊಡುವ ನಿಲುವಿನಲ್ಲಿದೆ. ಸರ್ಕಾರ ಕಾರ್ಖಾನೆ ಪ್ರಾರಂಭಿಸುವ ಬಗ್ಗೆ ಸಂಬಂಧಿಸಿದವರೊಟ್ಟಿಗೆ
ಸದ್ಯಲ್ಲಿಯೇ ಚರ್ಚಿಸಿ ತೀರ್ಮಾನ ಮಾಡಲಾಗುವುದು ಎಂದು ಹೇಳಿದರು.

ಅಚ್ಚುಕಟ್ಟು ಪ್ರದೇಶದಲ್ಲಿರುವ ಎಲ್ಲ ರೈತರ ಜಮೀನಿಗೆ ನೀರು ತಲುಪಿಸಲು ನೀರಾವರಿ ಯೋಜನೆ ರೂಪಿಸಲಾಗಿದೆ. ಈ ನಡುವೆ ನಾಲೆಗಳಿಂದ ಮೋಟಾರ್ ಮೂಲಕ ನೀರು ಪಡೆಯುವವರ ಮೇಲೆ ಕ್ರಮ ಜರುಗಿಸಲಾಗುತ್ತಿರುವ ಬಗ್ಗೆ ದೂರು ಬರುತ್ತಿದ್ದು, ಇದರ ಮಾರ್ಪಾಡಿಗೆ ರೈತರು ನೀಡುವ ಸಲಹೆಗಳನ್ನು ಸರ್ಕಾರ ಪರಿಗಣಿಸಲಿದೆ ಎಂದು ಸಭೆಗೆ ತಿಳಿಸಿದರು.
ಬ್ಯಾಂಕುಗಳಲ್ಲಿ ರೈತರಿಗೆ ಅಸಹಕಾರ ನೀಡುತ್ತಿದ್ದಾರೆ ಎಂಬ ರೈತರ ಮಾತಿಗೆ ಪ್ರತಿಕ್ರಿಯಿಸಿದ ಸಚಿವರು, ಶೀಘ್ರದಲ್ಲೇ ಬ್ಯಾಂಕ್ ಅಧಿಕಾರಿಗಳ ಸಭೆ ಕರೆದು ಚರ್ಚಿಸಿ ರೈತರನ್ನು ಶೋಷಣೆ ಮಾಡದಂತೆ ಸೂಚನೆ ನೀಡಲಾಗುವುದು ಎಂದು ಭರವಸೆ ನೀಡಿದರು.
ರೈತರು ತಾವು ಬೆಳೆದ ಬೆಳೆ ಸಾಗಿಸಲು ಅನುಕೂಲವಾಗುವ ‘ನಮ್ಮ ಹೊಲ, ನಮ್ಮ ರಸ್ತೆಯನ್ನು’ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಅಭಿವೃದ್ಧಿಪಡಿಸಲು ಅಧಿಕಾರಿಗಳಿಗೆ ಸೂಚಿಸಲಾಗುವುದು. ಜನರು ಕೂಡ ಪ್ರಜಾಪ್ರಭುತ್ವದ ಪ್ರಮುಖ ವೇದಿಕೆಯಾದ ಗ್ರಾಮಸಭೆಗಳಲ್ಲಿ ಭಾಗವಹಿಸಿ ಗ್ರಾಮಕ್ಕೆ ಅಗತ್ಯವಿರುವ ಮೂಲಸೌಕರ್ಯದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಬೆಂಬಲ ಕೋರಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ, ನಗರ ಪೊಲೀಸ್ ಅಧೀಕ್ಷಕಿ ಸೀಮಾ ಲಾಟ್ಕರ್, ಜಿಲ್ಲಾಮಟ್ಟದ ಅಧಿಕಾರಿಗಳು ಹಾಗೂ ರೈತ ಸಂಘದ ಮುಖಂಡರು ಉಪಸ್ಥಿತರಿದ್ದರು.
