- ಐದು ವರ್ಷಗಳಿಂದ ಪರಿಷ್ಕರಣೆಯಾದ ಮಾರ್ಗಸೂಚಿ ದರ
- ಸರಾಸರಿಯಾಗಿ ಶೇ.25 ರಿಂದ ಶೇ.30 ರಷ್ಟು ದರ ಏರಿಕೆ
- ತಕರಾರು ಸಲ್ಲಿಕೆಗೂ ಇದೆ ಅವಕಾಶ: ಕೃಷ್ಣಭೈರೇಗೌಡ
ಅಕ್ಟೋಬರ್ 01 ರಿಂದ ರಾಜ್ಯಾದ್ಯಂತ ಸ್ಥಿರಾಸ್ತಿಗಳ ಪರಿಷ್ಕೃತ ನೂತನ “ಮಾರ್ಗಸೂಚಿ ದರ” (ಗೈಡೆನ್ಸ್ ವ್ಯಾಲ್ಯೂ) ಜಾರಿಯಾಗಲಿದೆ ಎಂದು ಸಚಿವ ಕೃಷ್ಣಭೈರೇಗೌಡ ಸ್ಪಷ್ಟಪಡಿಸಿದರು.
ವಿಕಾಸಸೌಧದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ಸಚಿವರು, “ನೋಂದಣಿ ಇಲಾಖೆ ಕಾನೂನಿನ ಪ್ರಕಾರ ಪ್ರತಿ ವರ್ಷ ಮಾರ್ಗಸೂಚಿ ದರ ಪರಿಷ್ಕರಣೆಯಾಗಬೇಕು. ಆದರೆ, ಕಳೆದ ಐದು ವರ್ಷದಿಂದ ಮಾರ್ಗಸೂಚಿ ದರ ಪರಿಷ್ಕರಣೆಯಾಗಿಲ್ಲ. ಇದರಿಂದ ಹಲವು ಕಡೆಗಳಲ್ಲಿ ಭೂಮಿ ಮಾರಾಟಗಾರರು ಮತ್ತು ರೈತರಿಗೆ ಅನ್ವಯವಾಗಿದ್ದರೆ, ಕಪ್ಪು ಹಣ ವಹಿವಾಟಿಗೂ ಕಾರಣವಾಗಿದೆ” ಎಂದರು.
“ಮಾರ್ಗಸೂಚಿ ದರ ಪರಿಷ್ಕರಣೆಯಾಗದಿರುವುದು ಪರೋಕ್ಷವಾಗಿ ಕಪ್ಪು ಹಣ ವಹಿವಾಟಿಗೂ ಕಡಿವಾಣ ಹಾಕಿದಂತಾಗುತ್ತದೆ. ಹೀಗಾಗಿ ಅಕ್ಟೋಬರ್ 01 ರಿಂದ ನೂತನ ಮಾರ್ಗಸೂಚಿ ದರ ಜಾರಿಯಾಗಲಿದೆ. ಮಾರುಕಟ್ಟೆ ದರಕ್ಕೂ ಮಾರ್ಗಸೂಚಿ ದರಕ್ಕೂ ಸಾಮ್ಯತೆ ಇರುವ ಪ್ರದೇಶಗಳಲ್ಲಿ ಮಾರ್ಗಸೂಚಿ ದರವನ್ನು ಶೇ.10 ರಷ್ಟು ಏರಿಕೆ ಮಾಡಲಾಗಿದೆ” ಎಂದು ಹೇಳಿದರು.
“ಮಾರ್ಗಸೂಚಿ ದರಕ್ಕಿಂತ ಮಾರುಕಟ್ಟೆ ದರ 200 ಪಟ್ಟು ಹೆಚ್ಚಿರುವ ಪ್ರದೇಶಗಳಲ್ಲಿ ಪರಿಷ್ಕೃತ ದರವನ್ನು ಶೇ.20 ರಿಂದ ಶೇ.25 ರಷ್ಟು ಹೆಚ್ಚಿಸಲಾಗಿದೆ. ಇನ್ನೂ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಭಾಗದಲ್ಲಿ ಮಾರುಕಟ್ಟೆ ದರ ಮಾರ್ಗಸೂಚಿ ದರಕ್ಕಿಂತ 500 ಪಟ್ಟು ಹೆಚ್ಚಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಭೂಮಿಗಳಿಗೆ ಮಾರ್ಗಸೂಚಿ ದರ 5 ರಿಂದ 10 ಲಕ್ಷ ಇದ್ದರೆ, ಮಾರುಕಟ್ಟೆ ದರ 10 ಕೋಟಿಗೂ ಅಧಿಕವಿದೆ. ಇಂತಹ ಪ್ರದೇಶಗಳಲ್ಲಿ ನೂತನ ಮಾರ್ಗಸೂಚಿ ದರವನ್ನು ಶೇ. 50ರಷ್ಟು ಹೆಚ್ಚಿಸಲಾಗಿದೆ” ಎಂದರು.
“ಮಾರುಕಟ್ಟೆ ದರಕ್ಕಿಂತ ಮಾರ್ಗಸೂಚಿ ದರ ಹೆಚ್ಚಾಗಿದ್ದರೆ, ಅಂತಹ ಭಾಗದಲ್ಲಿ ಮಾರ್ಗಸೂಚಿ ದರವನ್ನು ಮತ್ತಷ್ಟು ಕಡಿಮೆ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಮಾರ್ಗಸೂಚಿ ದರ ಶೇ.0 ಯಿಂದ ಶೇ.50ರ ವರೆಗೆ ಪ್ರತಿಯೊಂದು ಪ್ರದೇಶಕ್ಕೂ ಸಂಬಂಧಿಸಿದಂತೆ “ಕೇಸ್ ಬೈ ಕೇಸ್” ಹೆಚ್ಚಾಗಲಿದೆ. ಅಕ್ಟೋಬರ್ 01 ರಂದು ಮೊದಲ ಹಂತವಾಗಿ ಬೆಂಗಳೂರಿನ ಪರಿಷ್ಕೃತ ದರ ಜಾರಿಯಾಗಲಿದೆ. ಉಳಿದಂತೆ ಪ್ರತಿ ಜಿಲ್ಲೆಯಲ್ಲಿ ಅಲ್ಲಿನ “ಉಪ ಸಮಿತಿ (ಸಬ್ ಕಮಿಟಿ)” ಚರ್ಚಿಸಿ ನೂತನ ಮಾರ್ಗಸೂಚಿ ದರವನ್ನು ಹಂತಹಂತವಾಗಿ ಜಾರಿಗೊಳಿಸಲಿದೆ. ಒಟ್ಟಾರೆಯಾಗಿ ಪರಿಷ್ಕೃತ ಮಾರ್ಗಸೂಚಿ ದರ ಸರಾಸರಿ ಶೇ.25 ರಿಂದ ಶೇ.30 ರಷ್ಟು ಹೆಚ್ಚಾಗಲಿದೆ” ಎಂದು ಸಚಿವರು ವಿವರಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಅರ್ಚಕರಾಗಿ ದಲಿತರು, ಮಹಿಳೆಯರ ನೇಮಕ ಕ್ರಾಂತಿಕಾರಿ ಹೆಜ್ಜೆಯೇ? ದೇಶ ಬದಲಾಯಿತೇ?
ತಕರಾರು ಸಲ್ಲಿಸಲೂ ಅವಕಾಶ
“ಮಾರ್ಗಸೂಚಿ ದರಕ್ಕೂ ಮಾರುಕಟ್ಟೆ ದರಕ್ಕೂ ಅಜಗಜಾಂತರ ವ್ಯತ್ಯಾಸ ಇರಬಾರದು ಎಂಬ ಕಾನೂನಿದೆ. ಹೀಗಾಗಿ ಈ ಅಲ್ಪ ನ್ಯೂನತೆಯನ್ನು ಸರಿಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿತ್ತು. ಆ ನಿಟ್ಟಿನಲ್ಲಿ ಈ ಕ್ರಮವನ್ನು ಮಾರ್ಗಸೂಚಿ ದರ ಪರಿಷ್ಕರಣೆ ಎಂಬುದಕ್ಕಿಂತ ನ್ಯೂನತೆಯನ್ನು ಸರಿಪಡಿಸಲಾಗಿದೆ. ಮಾರ್ಗಸೂಚಿ ದರ ಪರಿಷ್ಕರಣೆಯಲ್ಲಿ ಯಾರಿಗಾದರೂ ತಕರಾರು ಇದ್ದರೆ, ಅದನ್ನೂ ಸಲ್ಲಿಸಬಹುದು. ಅಧಿಕಾರಿಗಳು ತಕರಾರುಗಳನ್ನೂ ಗಮನಿಸಿ ಹೊಸ ಮಾರ್ಗಸೂಚಿ ದರವನ್ನು ಜಾರಿಗೊಳಿಸುವರು” ಎಂದು ತಿಳಿಸಿದರು.
ಕಾವೇರಿ-2 ಹೆಚ್ಚುತ್ತಿರುವ ನೋಂದಣಿಗಳು
“ಕಾವೇರಿ-2 ತಂತ್ರಾಂಶದ ಬಳಕೆಯ ನಂತರ ಆಸ್ತಿ ನೋಂದಣಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಕಾವೇರಿ-2 ತಂತ್ರಾಂಶ ಜಾರಿಯಾದ ಸಂದರ್ಭದಲ್ಲಿ ಸಣ್ಣಪುಟ್ಟ ನ್ಯೂನತೆಗಳು ಇದ್ದದ್ದು ನಿಜ. ಆದರೆ, ಪ್ರಸ್ತುತ ಬಹುತೇಕ ನ್ಯೂನತೆಗಳನ್ನೂ ಸರಿಪಡಿಸಲಾಗಿದೆ. ಪರಿಣಾಮ ರಾಜ್ಯದಲ್ಲಿ ಪ್ರತಿದಿನ ಅಂದಾಜು 10 ರಿಂದ 13 ಸಾವಿರ ಆಸ್ತಿ ನೋಂದಣಿಗಳಾಗುತ್ತಿವೆ. ಕೆಲ ದಿನಗಳಲ್ಲಿ ಒಂದೇ ಕಚೇರಿಯಲ್ಲಿ 140 ಕ್ಕೂ ಅಧಿಕ ರಿಜಿಸ್ಟ್ರೇಷನ್ ಆಗಿದ್ದೂ ಇದೆ. ಕಳೆದ ವರ್ಷಕ್ಕಿಂತ ಈ ಸೆಪ್ಟೆಂಬರ್ ನಲ್ಲಿ ಈಗಾಗಲೇ 800 ಕೋಟಿ ರೂ. ಗೂ ಅಧಿಕ ಆದಾಯ ಸರ್ಕಾರಕ್ಕೆ ಬಂದಿದೆ. ಇನ್ನೂ ಜನ ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ದಿನವಿಡೀ ಕಾಯುವ ಬದಲು ಕೇವಲ 20 ನಿಮಿಷದಲ್ಲಿ ತಮ್ಮ ಕೆಲಸ ಮುಗಿಸುತ್ತಿದ್ದಾರೆ” ಎಂದರು.