ವಿಜಯಪುರದಲ್ಲಿ ವಿಮಾನ ನಿಲ್ದಾಣಕ್ಕೆ ಜಾಗ ಗುರುತಿಸಿ ಆರು ದಶಕದ ನಂತರ ಕಾಮಗಾರಿ ಶುರುವಾಗಿ ಐದು ವರ್ಷ ಕಳೆದಿದ್ದು. ಬಹುತೇಕ ಮುಗಿಯುವ ಹಂತಕ್ಕೆ ಬಂದಿದೆ. ಕೆಲವೇ ದಿನಗಳಲ್ಲಿ ಕಾಮಗಾರಿ ಮುಗಿಸಿ ಮುಂದಿನ ವರ್ಷದಲ್ಲಿಯೇ ವಿಮಾನ ನಿಲ್ದಾಣ ಸಾರ್ವಜನಿಕ ಸೇವೆಗೆ ಒದಗಿಸಲು ಸರ್ಕಾರ ಮುಂದಾಗಿದೆ ಎಂದು ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.
ವಿಜಯಪುರ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ 69ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವರು ವಿಮಾನ ನಿಲ್ದಾಣದ ಪ್ರಗತಿಯ ಕುರಿತು ಮಾಹಿತಿ ನೀಡಿದರು.
ಹುಬ್ಬಳ್ಳಿಗಿಂತ ಮೂರು ವರ್ಷ ಮೊದಲೇ ವಿಮಾನ ನಿಲ್ದಾಣ ಭೂಸ್ವಾಧೀನವಾಗಿದ್ದರೂ ಕೆಲಸ ಮಾತ್ರ ನಾನಾ ಕಾರಣದಿಂದ ಶುರುವಾಗಿರಲಿಲ್ಲ. ಐದೇ ವರ್ಷದಲ್ಲಿ ನಿಲ್ದಾಣ ಕಾಮಗಾರಿ ತ್ವರಿತಗತಿಯಲ್ಲಿ ನಡೆದಿದೆ. ಹಗಲು ವಿಮಾನ ಸಂಚಾರಕ್ಕೆ ಬೇಕಾದ ಕಾಮಗಾರಿಗಳು ಮುಗಿದಿದ್ದರೆ, ರಾತ್ರಿ ಸಮಯದಲ್ಲಿ ವಿಮಾನ ಹಾರಾಟಕ್ಕೆ ಬೇಕಾದ ಕೆಲಸಗಳು ನಡೆದಿವೆ ಎಂದು ತಿಳಿಸಿದರು.
ವಿಜಯಪುರ ಜಿಲ್ಲಾಡಳಿತದ ವತಿಯಿಂದ ನಡೆದ 69ನೇ ಕನ್ನಡ ರಾಜ್ಯೋತ್ಸವದ ಸಂಭ್ರಮದ ಕ್ಷಣಗಳು…#ಕರ್ನಾಟಕರಾಜ್ಯೋತ್ಸವ #ಕನ್ನಡರಾಜ್ಯೋತ್ಸವ pic.twitter.com/nUPI6U3guv
— M B Patil (@MBPatil) November 1, 2024
ವಿಜಯಪುರ ವಿಮಾನ ನಿಲ್ದಾಣದಲ್ಲಿ ಏರ್‌ಬಸ್-320 ವಿಮಾನಗಳ ಹಗಲು ಹಾರಾಟದ ವ್ಯವಸ್ಥೆಗಾಗಿ ಮಂಜೂರಾಗಿರುವ 347.92 ಕೋಟಿ ರೂಪಾಯಿಗಳ ಅನುದಾನದಲ್ಲಿ 2 ಪ್ಯಾಕೇಜ್‍ಗಳಲ್ಲಿ ಕೈಗೊಂಡ ಎಲ್ಲ ಕಾಮಗಾರಿಗಳೂ ಮುಕ್ತಾಯವಾಗಿವೆ. ವಿಮಾನಯಾನ ಕಾರ್ಯಾಚರಣೆಗೆ ಅವಶ್ಯವಿರುವ ವಿಮಾನ ನಿಲ್ದಾಣದ ಪರಿಕರಗಳನ್ನು ಖರೀದಿಸುವ ಸಲುವಾಗಿ ಟೆಂಡರ್ ಆಹ್ವಾನಿಸಲಾಗಿದ್ದು, ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದರು.
ಸದರಿ ವಿಮಾನ ನಿಲ್ದಾಣದಲ್ಲಿ ರಾತ್ರಿ ವೇಳೆಯಲ್ಲಿಯೂ ಕಾರ್ಯಾಚರಣೆ ಕೈಗೊಳ್ಳಲು ಮತ್ತು ರಾಷ್ಟ್ರೀಯ ಹೆದ್ದಾರಿ-50 ರಿಂದ ವಿಮಾನ ನಿಲ್ದಾಣಕ್ಕೆ ನೇರ ಸಂಪರ್ಕ ರಸ್ತೆಯನ್ನು ಅಭಿವೃದ್ಧಿಪಡಿಸಲು ಯೋಜಿಸಲಾಗಿರುತ್ತದೆ. ಇದಕ್ಕಾಗಿ 117 ಕೋಟಿ ರೂಪಾಯಿಗಳ ಹೆಚ್ಚುವರಿ ಮೊತ್ತದ ಡಿ.ಪಿ.ಆರ್ ತಯಾರಿಸಿ ಅನುಮೋದನೆಗಾಗಿ ಸಲ್ಲಿಸಲಾಗಿದೆ ಎಂದರು.
ವಿಮಾನ ನಿಲ್ದಾಣಕ್ಕೆ ಸಂಬಂಧಿಸಿದ ರನ್‍ವೇ ಸಹಿತ ಎಲ್ಲ ಕಾಮಗಾರಿಗಳು ಮುಗಿದಿದೆ. ಆದರೆ, ಪರಿಸರ ಸಚಿವಾಲಯಕ್ಕೆ ಸಂಬಂಧಿಸಿದ ಅನುಮತಿಗಳು ಹಿಂದಿನಿಂದಲೂ ಬಾಕಿ ಇವೆ. ಸರ್ವೋಚ್ಚ ನ್ಯಾಯಾಲಯ ಚೆನ್ನೈ ವಿಮಾನ ನಿಲ್ದಾಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ, ರಾಷ್ಟ್ರದ ಎಲ್ಲ ನೂತನ ವಿಮಾನ ನಿಲ್ದಾಣಗಳಿಗೆ ಪರಿಸರ ಸಂಬಂಧಿತ ವಿಷಯಗಳ ಇತ್ಯರ್ಥವಾಗುವವರೆಗೆ ತಡೆಯಾಜ್ಞೆ ನೀಡಿದೆ. ಈ ತಡೆಯಾಜ್ಞೆ ತೆರವಾದ ಎರಡು ತಿಂಗಳ ಒಳಗೆ ವಿಮಾನ ಹಾರಾಟ ಆರಂಭಿಸಲಾಗುವುದು ಎಂದು ಎಂ.ಬಿ.ಪಾಟೀಲ್ ಸ್ಪಷ್ಟನೆ ನೀಡಿದರು.
