ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಪಿಡಿಒಗಳ ಮೇಲಿನ ತನಿಖೆಯನ್ನು ಚುರುಕುಗೊಳಿಸಿ ಅಂತಹವರ ವಿರುದ್ಧ ಕಾನೂನುಬದ್ಧವಾಗಿ ಕ್ರಮ ಜರುಗಿಸಬೇಕು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಸೂಚನೆ ನೀಡಿದ್ದಾರೆ.
ವಿಧಾನಸೌಧದಲ್ಲಿ ರಾಜ್ಯದ ಎಲ್ಲ ಜಿಲ್ಲಾ ಪಂಚಾಯತ್ ಸಿಇಒಗಳೊಂದಿಗೆ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ ಇಲಾಖೆಯನ್ನು ಜನಸ್ನೇಹಿಗೊಳಿಸಲು ಹಲವು ಸಲಹೆ ಸೂಚನೆ ನೀಡಿದರು.
ತಳಮಟ್ಟದಲ್ಲಿ ಪಾರದರ್ಶಕ ಆಡಳಿತ ಜಾರಿಗೊಳಿಸಲು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ(ಪಿಡಿಒ), ಗ್ರಾಮ ಪಂಚಾಯಿತಿ ಅಧ್ಯಕ್ಷರನ್ನು ಉತ್ತರದಾಯಿಯಾಗಿಸಲು ಹಾಗೂ ಗ್ರಾಮ ಮಟ್ಟದಲ್ಲಿ ಆಡಳಿತ ಚುರುಕುಗೊಳಿಸಲು ನೀತಿ ರೂಪಿಸುವಂತೆ ಎಲ್ಲ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ (ಸಿಇಒ) ಸೂಚನೆ ನೀಡಿದ್ದಾರೆ.
“ಜಿಲ್ಲಾ ಪಂಚಾಯತ್ ಸಿಇಒಗಳು ಹಾಗೂ ಗ್ರಾಮ ಪಂಚಾಯತಿ ಅಧ್ಯಕ್ಷರ, ಉಪಾಧ್ಯಕ್ಷರ ನಡುವಿನ ಸಮನ್ವಯತೆ ಹೆಚ್ಚಿಸಲು ಇಲಾಖಾ ವತಿಯಿಂದಲೇ ಪ್ರತಿ ಹದಿನೈದು ದಿನಕ್ಕೊಮ್ಮೆ ಸಮನ್ವಯ ಸಭೆಗಳನ್ನು ನಡೆಸಲು ನಿರ್ದೇಶನ ನೀಡಿದರು. ಜತೆಗೆ ಸಿಇಒಗಳು ಗ್ರಾಮ ಮಟ್ಟದಲ್ಲಿ ಕಡ್ಡಾಯವಾಗಿ ವೈಯಕ್ತಿಕ ಪರಿಶೀಲನೆ ನಡೆಸಬೇಕು” ಎಂದು ಹೇಳಿದರು.
ಇಬ್ಬರು ಎಂಜಿನಿಯರ್‌ಗಳ ಅಮಾನತು: ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯಲ್ಲಿ ಬೇಜವಾಬ್ದಾರಿ ಹಾಗೂ ಕರ್ತವ್ಯ ಲೋಪದಿಂದ ಕೋಟ್ಯಂತರ ರೂಪಾಯಿ ನಷ್ಟಉಂಟಾಗಲು ಕಾರಣವಾಗಿರುವ ಇಬ್ಬರು ಕಾರ್ಯನಿರ್ವಾಹಕ ಎಂಜಿನಿಯರ್‌ಗಳನ್ನು ಅಮಾನತು ಮಾಡಿ ಆದೇಶಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಸಂವಿಧಾನ ಬದಲಾಯಿಸಲು ಬಂದವರನ್ನೇ ನಾವು-ನೀವು ಬದಲಾಯಿಸಿದ್ದೀವಿ: ಸಿಎಂ ಸಿದ್ದರಾಮಯ್ಯ
ತುಮಕೂರಿನ ಪಂಚಾಯತ್ ರಾಜ್ ಎಂಜಿನಿಯರ್ ವಿಭಾಗದಲ್ಲಿ ವಿಳಂಬ ಧೋರಣೆ, ಬೇಜವಾಬ್ದಾರಿತನ ಹಾಗೂ ಕರ್ತವ್ಯ ನಿರ್ಲಕ್ಷ್ಯತೆಯಿಂದ ಸುಮಾರು 2.76 ಕೋಟಿ ರೂ. ನಷ್ಟಕ್ಕೆ ನೇರ ಕಾರಣವಾಗಿದ್ದ ಕಾರ್ಯಪಾಲಕ ಎಂಜಿನಿಯರ್ ಎಸ್ ಆರ್ ಹರೀಶ್ ಎಂಬುವವರನ್ನು ಸೇವೆಯಿಂದ ಅಮಾನತು ಮಾಡಲು ಸಚಿವ ಪ್ರಿಯಾಂಕ್ ಖರ್ಗೆ ಸೂಚಿಸಿದರು.
ಗ್ರಾಮೀಣಾಭಿವೃದ್ಧಿ ಸಚಿವರ ಸೂವನೆ ಅನ್ವಯದಂತೆ ಕಾರ್ಯಪಾಲಕ ಎಂಜಿನಿಯರ್ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ. ಜತೆಗೆ ಯಾದಗಿರಿಯ ಪಂಚಾಯತ್ ರಾಜ್ ಎಂಜಿನಿಯರ್ ವಿಭಾಗದಲ್ಲಿ 41 ವಿವಿಧ ಕಾಮಗಾರಿಗಳಲ್ಲಿ ಕರ್ತವ್ಯಲೋಪವೆಸಗಿ ಸರ್ಕಾರಕ್ಕೆ ಒಟ್ಟು 1.3 ಕೋಟಿ ರೂ. ನಷ್ಟ ಉಂಟು ಮಾಡಿದ್ದ ಕಾರ್ಯಪಾಲಕ ಎಂಜಿನಿಯರ್ ಬಸವರಾಜ ಕೆ ಹಲಚೇರ ಅವರನ್ನೂ ಸೇವೆಯಿಂದ ಅಮಾನತು ಮಾಡಲಾಗಿದೆ.