- ಸರಿಯಾದ ಸಮಯಕ್ಕೆ ಆಗಮಿಸಿದ್ದ ಹಾಸನ ಉಸ್ತುವಾರಿ ಸಚಿವ
- ಅಧಿಕಾರಿಗಳು ಸರಿಯಾಗಿ ಕೆಲಸ ಮಾಡಬೇಕು ಎಂದು ತಾಕೀತು
ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಇಂದು ಮೊದಲ ತ್ರೈಮಾಸಿಕ ಕೆಡಿಪಿ ಸಭೆ ನಡೆಸಿದರು. ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಚೊಚ್ಚಲ ಸಭೆಯಲ್ಲಿ ಸಮಯ ಪಾಲನೆ ಮಾಡದ, ತಪ್ಪು ಮಾಡಿರುವ ಅಧಿಕಾರಿಗಳ ಬೆವರಿಳಿಸಿದರು.
ಸರಿಯಾದ ಸಮಯಕ್ಕೆ ಸಚಿವರು ಆಗಮಿಸಿದ್ದರೂ, ಕೆಲ ಅಧಿಕಾರಿಗಳು ಇನ್ನೂ ಬಂದಿರಲಿಲ್ಲ. ಇದರಿಂದ ಗರಂ ಆದ ಸಚಿವರು, ನೀವೆಲ್ಲಾ ಹಿರಿಯ ಅಧಿಕಾರಿಗಳಿದ್ದೀರಾ, ಆದರೆ ಸಕಾಲಕ್ಕೆ ಏಕೆ ಸಭೆಗೆ ಬರುವುದಿಲ್ಲ. ಇದನ್ನು ಇನ್ನು ಮುಂದೆ ನಾನು ಸಹಿಸುವುದಿಲ್ಲ ಎಂದು ಎಚ್ಚರಿಸಿದರು.
ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಎಲ್ಲರೂ ಶ್ರಮಿಸಬೇಕು. ನಾನು ಜಿಲ್ಲೆಗೆ ಏನಾದರೂ ಸಣ್ಣ ಕಾಣಿಕೆ ಕೊಡಬೇಕು. ನನಗೆ ಅದಕ್ಕೆ ಜನ ಅವಕಾಶ ಮಾಡಿಕೊಟ್ಟಿದ್ದಾರೆ. ಯಾವುದೇ ಸರ್ಕಾರ ಇರಲಿ, ಯಾರೇ ಮಂತ್ರಿ ಇರಲಿ, ಅಧಿಕಾರಿಗಳು ಕೆಲಸ ಮಾಡಬೇಕು ಎಂದು ತಾಕೀತು ಮಾಡಿದರು.
ಸಕಾಲಕ್ಕೆ ಸಭೆಗೆ ಹಾಜರಾಗದ ಅಧಿಕಾರಿಗಳಿಗೆ ನೋಟಿಸ್ ನೀಡಿ, ಅದರ ಬಗ್ಗೆ ನನಗೂ ಒಂದು ವರದಿ ಕೊಡಿ. ಯಾವುದೇ ಕಾರಣಕ್ಕೂ ಅಶಿಸ್ತು ಸಹಿಸುವುದಿಲ್ಲ ಎಂದು ಮೊದಲ ಸಭೆಯಲ್ಲಿಯೇ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಸುರೇಶ್ ಅವರನ್ನು ತರಾಟೆಗೆ ತೆಗೆದುಕೊಂಡ ಸಚಿವರು, ಅಂಗನವಾಡಿಗಳಿಗೆ ಸರಬರಾಜಾದ ಕಳಪೆ ಮೊಟ್ಟೆ ವಿಚಾರವನ್ನು ಪ್ರಸ್ತಾಪಿಸಿದರು. ‘ಮೊಟ್ಟೆ ಕೇಸೂ ನಿಮ್ಮದೇ. ನೀವು ಅಲರ್ಟ್ ಆಗಿದ್ರೆ ದೂರು ಏಕೆ ಬರ್ತವೆ? ಸುಳ್ಳು ಹೇಳಿದ್ರೆ ಅಮಾನತು ಮಾಡುತ್ತೇನೆ’ ಎಂದು ಎಚ್ಚರಿಸಿದರು.
‘ಯಾವ ಏಜೆನ್ಸಿಯೇ ಮೊಟ್ಟೆ ಪೂರೈಕೆ ಮಾಡುತ್ತಿರಲಿ, ಕಳಪೆ ಮೊಟ್ಟೆ ನೀಡಿದವರ ಕ್ರಿಮಿನಲ್ ಕೇಸ್ ಹಾಕಬೇಕು. ಅವನು ತಪ್ಪು ಮಾಡಿದ್ದಕ್ಕೆ ಮೊಟ್ಟೆ ತೆಗೆದುಕೊಳ್ಳುವುದನ್ನು ನಿಲ್ಲಿಸಿದ್ದೀರಿ. ಅದು ಸರಿಯಾದ ಶಿಕ್ಷೆಯಲ್ಲ. ಅವನ ಮೇಲೆ ಕ್ರಿಮಿನಲ್ ಕೇಸ್ ಹಾಕಬೇಕು’ ಎಂದು ಸೂಚಿಸಿದರು.
ಈ ವೇಳೆ ಮಧ್ಯೆ ಪ್ರವೇಶಿಸಿದ ಶಾಸಕ ಕೆ.ಎಂ.ಶಿವಲಿಂಗೇಗೌಡ, ‘ಅಂಗನವಾಡಿ ಮಕ್ಕಳಿಗೆ ಕಳಪೆ ಮೊಟ್ಟೆ ವಿತರಿಸುತ್ತಿದ್ದಾರೆ. ಇದನ್ನು ತಿನ್ನಲಾಗುತ್ತಿಲ್ಲ’ ಎಂದು ದೂರಿದರು.
ಈ ನಡುವೆ ಸಭೆಯಲ್ಲಿ ಮೈಕ್ ವ್ಯವಸ್ಥೆ ಸರಿಯಿಲ್ಲದ ಬಗ್ಗೆ ಗರಂ ಆದ ಸಚಿವರು, ಜಿಪಂ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಮೈಕ್ ಯಾಕೆ ಸರಿ ಇಲ್ಲಪ್ಪ ಎಂದು ಸಚಿವರು ಪ್ರಶ್ನಿಸಿದ ವೇಳೆ, ‘ಹೊಸ ಕಟ್ಟಡ ರೆಡಿ ಆಗ್ತಾ ಇದೆ’ ಎಂದು ಅಧಿಕಾರಿಗಳು ಸ್ಪಷ್ಷನೆ ನೀಡಿದರು. ‘ಹೊಸ ಕಟ್ಟಡ ಆಗೋವರೆಗೆ ಇಲ್ಲಿಗೆ ಸರಿಯಾದ ಮೈಕ್ ಬೇಡವೇ?’ ಎಂದು ಪ್ರಶ್ನಿಸಿದರು.
ಇದೇ ವೇಳೆ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳಿಗೂ ಸಚಿವ ರಾಜಣ್ಣ ಕ್ಲಾಸ್ ತೆಗೆದುಕೊಂಡ ಬಳಿಕ, ಇನ್ಮುಂದೆ ಸರಿಯಾಗಿ ಕೆಲಸ ಮಾಡಬೇಕೆಂದು ಸೂಚಿಸಿದರು.
ಆಯುಕ್ತರ ವಿರುದ್ಧ ಆಕ್ರೋಶ
ನಗರಸಭೆ ಅಧಿಕಾರಿಗಳು ಅಧಿವೇಶನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಶಾಸಕ ಸ್ವರೂಪ್ ಪ್ರಕಾಶ್ ಸಚಿವರ ಗಮನಕ್ಕೆ ತಂದರು.
ಸ್ವಚ್ಚತೆ, ನೀರಿನ ವ್ಯವಸ್ಥೆ, ಸೌಕರ್ಯ ಸಂಪೂರ್ಣ ಚೆನ್ನಾಗಿದೆ ಎಂದು ತಪ್ಪು ಮಾಹಿತಿ ಕೊಟ್ಟಿದ್ದಾರೆ. ಸೆಷನ್‌ನಲ್ಲಿ ಪ್ರಶ್ನೆ ಕೇಳಿದ್ದೆ, ಉತ್ತರ ತಪ್ಪಾಗಿ ನೀಡಿದ್ದಾರೆಂದರು. ತಪ್ಪು ಮಾಹಿತಿ ಕೊಟ್ಟಿದ್ದ ನಗರಸಭೆ ಕಮಿಷನರ್ ವಿರುದ್ಧ ಸಚಿವರು ಗರಂ ಆದರು.