ಕಳೆದ ಒಂದು ತಿಂಗಳಿಂದ ಅನಧಿಕೃತ ರಜೆ ಇರುವ ಮತ್ತು ಅತಿವೃಷ್ಟಿ ಸಮಯದಲ್ಲಿ ಸ್ಪಂದಿಸದ ಕುಂದಗೋಳ ತಾಲೂಕಿನ ಸಂಶಿ ಗ್ರಾಮ ಪಂಚಾಯಿತಿ ಪಿಡಿಓ ನಾಗರಾಜ ಗಿಣಿವಾಲ ಅವರನ್ನು ಅಮಾನತುಗೊಳಿಸಲು ತಕ್ಷಣ ಕ್ರಮವಹಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಜಿಲ್ಲಾ ಪಂಚಾಯತ ಸಿಇಓ ಅವರಿಗೆ ಆದೇಶಿಸಿದರು.
ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿಯ ನೂತನ ಸಭಾಂಗಣದಲ್ಲಿ ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಭಾರಿ ಮಳೆಯಿಂದ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮ ಹಾಗೂ ಪರಿಹಾರ ಕೈಗೊಂಡ ಕ್ರಮಗಳ ಕುರಿತು ಜಿಲ್ಲಾ ಮಟ್ಟದ ವಿಪತ್ತು ನಿರ್ವಹಣೆ ಸಭೆಯಲ್ಲಿ ಕರ್ತವ್ಯ ಲೋಪ ಎಸಗಿದವರ ವಿರುದ್ಧ ಕಿಡಿಕಾರಿದರು.
ʼಜಿಲ್ಲೆಯಲ್ಲಿ ನಿರಂತರ ಮಳೆಯಿಂದಾಗಿ ಸಾಕಷ್ಟು ಜನರು ತೊಂದರೆ ಅನುಭವಿಸುತ್ತಿದ್ದಾರೆ. ಸಾಕಷ್ಟು ಮನೆ, ಬೆಳೆ ಹಾನಿಯಾಗಿ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಆದರೆ ಇಂತಹ ವೇಳೆ ಅಧಿಕಾರಿಗಳು ಸ್ಥಳೀಯವಾಗಿ ಲಭ್ಯವಿದ್ದು ಸ್ಥಳಗಳಿಗೆ ಭೇಟಿ ನೀಡಿ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ಆದರೆ ಸಂಬಂಧಪಟ್ಟ ಅಧಿಕಾರಿಗಳು ರಜೆ, ಬೇಜವಾಬ್ದಾರಿತನ, ಕರ್ತವ್ಯ ಲೋಪ ಎಸಗಿದರೆ ಅಂತಹವರ ವಿರುದ್ಧ ಸರಕಾರ ಸುಮ್ಮನಿರುವದಿಲ್ಲʼ ಎಂದು ಸೂಚಿಸಿದರು.
ಈ ಸುದ್ದಿ ಓದಿದ್ದೀರಾ? ಉತ್ತರ ಕನ್ನಡ | ಶಿರೂರ ಭೂ ಕುಸಿತ : ಮೃತರಿಗೆ ಪರಿಹಾರ ಒದಗಿಸಲು ಎಸ್‌ಎಫ್‌ಐ ಆಗ್ರಹ
ಮೇಲಾಧಿಕಾರಿಗಳಿಗೆ ಸರಿಯಾದ ಮಾಹಿತಿ ನೀಡದೆ, ಅನುಮತಿ ಇಲ್ಲದೆ ಕಳೆದ ಒಂದು ತಿಂಗಳಿಂದ ಗೈರಾಗಿರುವ ಸಂಶಿ ಗ್ರಾಮ ಪಂಚಾಯತ ಪಿಡಿಓ ಅವರನ್ನು ತಕ್ಷಣ ಅಮಾನತ್ತು ಮಾಡಬೇಕು. ಜಿಲ್ಲಾ ಪಂಚಾಯತ ಸಿಇಓ ಅವರಿಗೆ ಮಾಹಿತಿ ನೀಡದೆ, ಉದಾಸೀನತೆ ತೋರಿದ ಕುಂದಗೋಳ ತಾಲೂಕು ಪಂಚಾಯತ ಇಓ ಅವರಿಗೂ ಕಾರಣ ಕೇಳಿ ನೋಟಿಸ್ ನೀಡಬೇಕು. ಈ ರೀತಿಯಾಗಿ ಯಾವುದೇ ಹಂತದ ಅಧಿಕಾರಿಗಳು ಕರ್ತವ್ಯದಲ್ಲಿ ಉದಾಸೀನತೆ, ಬೇಜವಾಬ್ದಾರಿತನ ತೋರಿದರೆ ಜಿಲ್ಲಾಧಿಕಾರಿ ಮತ್ತು ಸಿಇಓ ಅವರು ಕಠಿಣ ಕ್ರಮ ಜರುಗಿಸಬೇಕುʼ ಎಂದರು.