‘ಬುದ್ಧಿವಂತರ ಜಿಲ್ಲೆ’ ಎಂದೇ ಪರಿಗಣಿತವಾಗಿರುವ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರದ ಕುಡುಪು ಮೈದಾನದಲ್ಲಿ ಅಪರಿಚಿತ ವಲಸೆ ಕಾರ್ಮಿಕನನ್ನು ಸುಮಾರು ಐವತ್ತರಷ್ಟಿದ್ದ ಕೋಮುವಾದಿ ಗುಂಪು ಹೊಡೆದು ಹತ್ಯೆಗೈದಿದೆ. ಸದ್ಯ ಈ ಘಟನೆಯು ಕಾಶ್ಮೀರದ ಪೆಹಲ್ಗಾಮ್ ಉಗ್ರರ ದಾಳಿಯ ಬೆನ್ನಲ್ಲೇ ನಡೆದ ಹಿನ್ನೆಲೆಯಲ್ಲಿ ಮಂಗಳೂರು ಮಾತ್ರವಲ್ಲದೇ, ರಾಷ್ಟ್ರೀಯ ಮಟ್ಟದಲ್ಲೂ ಸುದ್ದಿಯಾಗುತ್ತಿದೆ.
ವಲಸೆ ಕಾರ್ಮಿಕನನ್ನು ಮುಸ್ಲಿಂ ಎಂದು ಶಂಕಿಸಿಯೇ ಉನ್ಮಾದಿತ ಗುಂಪು ಅಮಾನವೀಯವಾಗಿ ಹಲ್ಲೆ ನಡೆಸಿದೆ ಎಂದು ಸ್ಥಳೀಯವಾಗಿ ಸುದ್ದಿ ಹರಡಿದೆಯಾದರೂ, ಈ ಬಗ್ಗೆ ಮಂಗಳೂರು ನಗರ ಪೊಲೀಸರು ಈವರೆಗೆ ಈ ಬಗ್ಗೆ ಅಧಿಕೃತ ಹೇಳಿಕೆ ನೀಡಿಲ್ಲ. ವಲಸೆ ಕಾರ್ಮಿಕನನ್ನು ಹತ್ಯೆ ಮಾಡಿರುವ ಉದ್ರೇಕಿತ ಗುಂಪು, ತಮ್ಮೊಳಗಿನ ದ್ವೇಷದ ಕ್ರೌರ್ಯವನ್ನು ತಣಿಸಿಕೊಳ್ಳಲು ಯತ್ನಿಸಿದೆ.
ಘಟನೆ ನಡೆದಿರುವುದು ಏಪ್ರಿಲ್ 27ರ ಭಾನುವಾರ ಮಧ್ಯಾಹ್ನದ ಬಳಿಕ. ಮೊದಲು ಅಪರಿಚಿತ ಯುವಕನ ಮೃತದೇಹ ಪತ್ತೆಯಾಗಿದೆ ಎಂದು ಸುದ್ದಿ ಹರಡಿತ್ತು. ಆದರೆ, ಘಟನೆ ತಿರುವು ಪಡೆದುಕೊಂಡ ಬೆನ್ನಲ್ಲೇ ಗುಂಪಿನಿಂದ ಹಲ್ಲೆಗೊಳಗಾಗಿ ಹತ್ಯೆಯಾಗಿರುವುದನ್ನು ಪೊಲೀಸರು ಖಚಿತಪಡಿಸಿಕೊಂಡಿದ್ದಾರೆ. ಘಟನೆಯ ಬಗ್ಗೆ ಸ್ಥಳೀಯ ಸಾಮಾಜಿಕ ಹೋರಾಟಗಾರರು, ಮುಖಂಡರು ಸತ್ಯಾಸತ್ಯತೆ ಹೊರಬರಬೇಕು ಎಂದು ಒತ್ತಡ ಹಾಕಿದ ನಂತರ ಒಂದೊಂದೇ ಸಂಗತಿಗಳು ಹೊರಬಂದಿದೆ.
ಘಟನೆ ನಡೆದು ಎರಡು ದಿನಗಳ ತನಿಖೆಯ ನಂತರ ಸುದ್ದಿಗೋಷ್ಠಿ ನಡೆಸಿರುವ ಮಂಗಳೂರು ಪೊಲೀಸರು, “ಕುಡುಪು ಎಂಬಲ್ಲಿ ಅಪರಿಚಿತ ಯುವಕನ ಮೇಲೆ 25 ರಿಂದ 30 ಜನರ ಗುಂಪು ಗುಪ್ತಾಂಗ ಸೇರಿದಂತೆ ಮೈಮೇಲೆ ದೊಣ್ಣೆ ಸೇರಿದಂತೆ ಹಲವು ವಸ್ತುಗಳಲ್ಲಿ ಹಲ್ಲೆ ಮಾಡಿದ ಪರಿಣಾಮ ಮೃತಪಟ್ಟಿದ್ದಾನೆ. ಧರ್ಮದ ಆಧಾರದಲ್ಲಿ ಕೊಲೆ ಎನ್ನುವುದು ಈವರೆಗಿನ ತನಿಖೆಯಲ್ಲಿ ತಿಳಿದುಬಂದಿಲ್ಲ. ತಲೆಮರೆಸಿಕೊಂಡಿರುವ ಕೆಲವು ಆರೋಪಿಗಳನ್ನು ಶೀಘ್ರವಾಗಿ ಪತ್ತೆ ಹಚ್ಚುತ್ತೇವೆ. ಜೊತೆಗೆ ಮೃತಪಟ್ಟ ವ್ಯಕ್ತಿಯು ಮಲಯಾಳಂ ಮಾತನಾಡುತ್ತಿದ್ದ. ಮುಸ್ಲಿಂ ಎಂದು ಪ್ರಾಥಮಿಕ ತನಿಖೆಯ ವೇಳೆ ತಿಳಿದುಬಂದಿದೆ. ಮಲಯಾಳಿ ಇರಬಹುದು ಅಥವಾ ಬೇರೆ ರಾಜ್ಯದಿಂದಲೂ ಇರಬಹುದು ಎಂದು ಅಂದಾಜಿಸಲಾಗಿದೆ. ಸುಮಾರು 35ರಿಂದ 40 ವರ್ಷ ವಯಸ್ಸು ಇರಬಹುದು. ಗುರುತು ಪತ್ತೆಹಚ್ಚಲು ಪೊಲೀಸ್ ಇಲಾಖೆ ಶ್ರಮಿಸುತ್ತಿದೆ ” ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.
ಈ ಎಲ್ಲ ಮಾಹಿತಿಯನ್ನು ತಿಳಿಸಲು ಪೊಲೀಸ್ ಇಲಾಖೆ ತೆಗೆದುಕೊಂಡದ್ದು ಸುಮಾರು 36 ಗಂಟೆ. ಅಷ್ಟರವರೆಗೆ ಆರೋಪಿಗಳನ್ನು ಹಿಡಿಯದೇ ಸುಮ್ಮನೆ ಬಿಟ್ಟಿದ್ದೇಕೆ? ಗುಂಪು ಹತ್ಯೆ ಎಂದು ತಿಳಿಸಲು ಇಷ್ಟೊಂದು ತಡ ಮಾಡಿದ್ದೇಕೆ? ಎಂಬಿತ್ಯಾದಿ ಪ್ರಶ್ನೆ, ಅನುಮಾನಗಳು ಸಹಜವಾಗಿಯೇ ಕರಾವಳಿಯಲ್ಲಿ ಎದ್ದಿದೆ.
ಸದ್ಯ ಈ ಘಟನೆಯು ಕರಾವಳಿ ಸೇರಿದಂತೆ ನಾಡಿನ ಜನರನ್ನು ಬೆಚ್ಚಿಬೀಳಿಸಿದೆ. ಈ ಘಟನೆಯ ಬಗ್ಗೆ ಮಂಗಳೂರಿನ ಸಾಮಾಜಿಕ ಚಿಂತಕರು, ಹೋರಾಟಗಾರರು ‘ಆಘಾತಕಾರಿ ಬೆಳವಣಿಗೆ’ ಎಂದು ಈದಿನ ಡಾಟ್ ಕಾಮ್ ಜೊತೆಗೆ ಮಾತನಾಡುತ್ತಾ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಘಟನೆಯ ಬಗ್ಗೆ ಮಾಹಿತಿ ತಿಳಿದ ಕೂಡಲೇ ಆರಂಭದಿಂದಲೇ ತನಿಖೆಗೆ ಆಗ್ರಹಿಸಿದ್ದ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್‌ನ ಅಲ್ಪಸಂಖ್ಯಾತ ಘಟಕದ ಮುಖಂಡ ಕೆ ಕೆ ಶಾಹುಲ್ ಹಮೀದ್ ಮಾತನಾಡಿದ್ದು, “ಬೆಳ್ತಂಗಡಿ ತಾಲೂಕಿನ ವೇಣೂರು ಹಾಗೂ ಪೆರಾಡಿ ಎಂಬಲ್ಲಿ ಪುರುಷ ಕಟ್ಟುವ ಸಂಪ್ರದಾಯದ ಹೆಸರಿನಲ್ಲಿ ಮುಸ್ಲಿಂ ಧರ್ಮವನ್ನು ಅವಹೇಳನ ಮಾಡುವ ಘಟನೆಯ ಬಗ್ಗೆ ದೂರು ದಾಖಲಿಸಿದ್ದೆವು. ಎಲ್ಲ ಮಾಹಿತಿ ನೀಡಿದ್ದರೂ ಪೊಲೀಸ್ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ. ಬಹಿರಂಗವಾಗಿ ದ್ವೇಷ ಹರಡುವವರ ವಿರುದ್ಧವೂ ಕ್ರಮ ಕೈಗೊಂಡಿಲ್ಲ. ಇದರಿಂದಾಗಿಯೇ ಕುಡುಪು ಘಟನೆ ನಡೆದಿದೆ. ಜಿಲ್ಲೆಯ ಹಲವೆಡೆ ಅನೈತಿಕ ಪೊಲೀಸ್‌ಗಿರಿ ಬಹಿರಂಗವಾಗಿ ನಡೆಯುತ್ತಿದೆ. ತಕ್ಷಣ ಜಿಲ್ಲಾಡಳಿತ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು. ಪಾತ್ರಧಾರಿಗಳನ್ನಷ್ಟೇ ಪೊಲೀಸರು ಬಂಧಿಸುತ್ತಿದ್ದಾರೆ. ಧಾರ್ಮಿಕ ದ್ವೇಷಗಳನ್ನು ಹರಡುವ ಸೂತ್ರಧಾರಿಗಳನ್ನು ಕೂಡ ಮಟ್ಟಹಾಕಬೇಕು” ಎಂದು ಆಗ್ರಹಿಸಿದ್ದಾರೆ.

ಈದಿನ ಡಾಟ್ ಕಾಮ್ ಜೊತೆಗೆ ಮಾತನಾಡಿದ ಕರಾವಳಿಯ ಸಾಮಾಜಿಕ ಹೋರಾಟಗಾರ್ತಿ ವಿದ್ಯಾ ದಿನಕರ್, “ಕುಡುಪು ಘಟನೆ ನಿಜಕ್ಕೂ ಆಘಾತಕಾರಿ. ಘಟನೆ ನಡೆದು ಎರಡು ದಿನಗಳಾಗಿದ್ದರೂ ಪೊಲೀಸ್ ಕಮಿಷನರ್ ಸರಿಯಾದ ಮಾಹಿತಿಯನ್ನೇ ನೀಡಿರಲಿಲ್ಲ. ಒತ್ತಡದ ಬಳಿಕವಷ್ಟೇ ಮಾಹಿತಿಯನ್ನು ಹೊರ ಹಾಕಿದ್ದಾರೆ. ಮೃತಪಟ್ಟಿರುವ ಅಪರಿಚಿತ ವ್ಯಕ್ತಿ ವಲಸೆ ಕಾರ್ಮಿಕ ಅಂತ ತಿಳಿದುಬಂದಿದೆ. ಕಾರ್ಮಿಕ ಇಲಾಖೆಯ ಅಧಿಕಾರಿಗಳು ಈ ಘಟನೆಗೆ ಸಂಬಂಧಿಸಿ ಏನು ಮಾಡುತ್ತಿದ್ದಾರೆ? ಜಿಲ್ಲಾಧಿಕಾರಿಗಳು ಈ ಬಗ್ಗೆ ಏನೂ ಮಾತನಾಡುತ್ತಿಲ್ಲ ಯಾಕೆ?” ಎಂದು ಪ್ರಶ್ನಿಸಿದ್ದಾರೆ.

“ಮಂಗಳೂರು ನಗರ ಇಷ್ಟು ದೊಡ್ಡದಾಗಿ ಬೆಳೆಯುತ್ತಿರುವುದರಲ್ಲಿ ವಲಸೆ ಕಾರ್ಮಿಕರ ಪಾತ್ರ ಕೂಡ ಬಹಳ ಮುಖ್ಯವಾದದ್ದು. ಈ ಘಟನೆಯು ವಲಸೆ ಕಾರ್ಮಿಕರಲ್ಲಿ ಮಾತ್ರವಲ್ಲದೇ ಮಂಗಳೂರಿನಲ್ಲಿ ಒಂದು ರೀತಿಯಲ್ಲಿ ಆತಂಕ ಸೃಷ್ಟಿಸಿದೆ. ಆ ಈ ರೀತಿಯ ಘಟನೆಗಳು ಮಂಗಳೂರಿಗರ ಮೇಲೆಯೇ ಪ್ರಭಾವ ಬೀಳುತ್ತದೆ ಎಂದು ತಿಳಿದುಕೊಳ್ಳಬೇಕು. ಘಟನೆ ನಡೆದು ಎರಡು ದಿನ ಕಳೆದ ನಂತರವಷ್ಟೇ ಕಮಿಷನರ್ ಅಪೂರ್ಣ ಮಾಹಿತಿ ಹಂಚಿಕೊಂಡಿದ್ದಾರೆ. ಕಮಿಷನರ್ ಅವರು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಬೇಕು. ವಲಸೆ ಕಾರ್ಮಿಕರನ್ನು ಪೊಲೀಸ್ ಅಧಿಕಾರಿಗಳು ಭೇಟಿ ಮಾಡಿ, ಅವರ ಸುರಕ್ಷತೆಯನ್ನು ಪರಿಗಣಿಸಬೇಕು. ಕುಡುಪು ಪ್ರಕರಣದಲ್ಲಿ ಎದ್ದಿರುವ ಎಲ್ಲ ಊಹಾಪೋಹಗಳ ಸತ್ಯಾಸತ್ಯತೆಯನ್ನು ಪೊಲೀಸರು ಸಾರ್ವಜನಿಕರಿಗೆ ತಿಳಿಸಬೇಕು” ಎಂದು ವಿದ್ಯಾ ಆಗ್ರಹಿಸಿದ್ದಾರೆ.
ಜಮಾಅತೆ ಇಸ್ಲಾಮೀ ಹಿಂದ್ ಸಂಘಟನೆಯ ಮುಖಂಡರಾದ ಮುಹಮ್ಮದ್ ಕುಂಞಿ ಈದಿನ ಡಾಟ್ ಕಾಮ್ ಜೊತೆಗೆ ಮಾತನಾಡುತ್ತಾ, “ಕುಡುಪುವಿನಲ್ಲಿ ನಡೆದ ಈ ಘಟನೆ ಬಹಳ ಆತಂಕಕಾರಿಯಾದದ್ದು. ಉತ್ತರ ಭಾರತದಲ್ಲಿ ನಡೆಯುತ್ತಿರುವ ಗುಂಪು ಹಲ್ಲೆಗಳನ್ನು ನಾವು ಕೇಳುತ್ತಿದ್ದೆವು. ಈಗ ಅದರದ್ದೇ ಸಮಾನವಾದ ಘಟನೆ ಬುದ್ಧಿವಂತರ, ಸುಶಿಕ್ಷಿತರ ನಗರವಾದ ಮಂಗಳೂರಿನಲ್ಲಿ ನಡೆದಿದೆ. ಬಹಳ ಗಂಭೀರವಾಗಿ ಪರಿಗಣಿಸಬೇಕಿದ್ದ ಪೊಲೀಸ್ ಇಲಾಖೆಯು, ಈ ಪ್ರಕರಣವನ್ನು ಕ್ಷುಲಕ ಎಂಬಂತೆ ಆರಂಭದಲ್ಲಿ ನಿರ್ಲಕ್ಷ್ಯ ತೋರಿರುವುದು ಇನ್ನೊಂದು ಆತಂಕಕಾರಿ ಬೆಳವಣಿಗೆ ಎಂಬುದು ಸ್ಪಷ್ಟ. ಇದು ದೊಡ್ಡ ತಪ್ಪು” ಎಂದು ತಿಳಿಸಿದ್ದಾರೆ.

“ಕುಡುಪು ಘಟನೆಯು ಎಲ್ಲಿಯೂ ಮರುಕಳಿಸಬಾರದಂತೆ ನೋಡಿಕೊಳ್ಳುವ ಜವಾಬ್ದಾರಿ ಆಡಳಿತ ಹಾಗೂ ಜನಪ್ರತಿನಿಧಿಗಳದ್ದು. ಪೆಹಲ್ಗಾಮ್ ಉಗ್ರರ ದಾಳಿಯನ್ನಿಟ್ಟುಕೊಂಡು ಜನರ ತಲೆಗೆ ವ್ಯವಸ್ಥಿತವಾಗಿ ದ್ವೇಷ ತುಂಬಿಸಲಾಗುತ್ತಿದೆ. ಮುಸ್ಲಿಮರು ಇರುವ ತನಕ ಈ ದೇಶದಲ್ಲಿ ಶಾಂತಿ ನೆಲೆಸಲು ಸಾಧ್ಯವಿಲ್ಲ ಎಂಬಂತೆ ದ್ವೇಷ ಹರಡಲಾಗುತ್ತಿದೆ. ಅದರ ಪ್ರಭಾವ ಕೂಡ ಇದು ಇರಬಹುದು. ಒಟ್ಟಿನಲ್ಲಿ ಈ ಸಮಾಜವನ್ನು ವಿಭಜಿಸುವ ಷಡ್ಯಂತ್ರದ ಭಾಗವಿದು. ಇದು ಬೇರೆ ಬೇರೆ ಸಂಘರ್ಷಗಳಿಗೂ ಕಾರಣವಾಗಬಹುದು. ಹಾಗಾಗಿ, ಪೊಲೀಸ್ ಇಲಾಖೆ, ಸರ್ಕಾರ ಈ ಬಗ್ಗೆ ಸೂಕ್ತ ಮುನ್ನೆಚ್ಚರಿಕೆ ವಹಿಸಬೇಕು. ಇಡೀ ಜಿಲ್ಲೆಯ ಪ್ರಜ್ಞಾವಂತ ಜನತೆ, ಉದ್ವೇಗಕ್ಕೆ ಒಳಗಾಗದೆ ಇಂತಹ ಘಟನೆಗಳ ಬಗ್ಗೆ ಬಹಳ ವಿವೇಕದಿಂದ ವರ್ತಿಸಬೇಕು. ತಪ್ಪಿತಸ್ಥರಿಗೆ ಸೂಕ್ತ ಶಿಕ್ಷೆಯಾಗುವಂತೆ ಪೊಲೀಸರು ಕಾರ್ಯ ನಿರ್ವಹಿಸಬೇಕು” ಎಂದು ಮುಹಮ್ಮದ್ ಕುಂಞಿ ಆಗ್ರಹಿಸಿದ್ದಾರೆ.
“ಬೇರೆ-ಬೇರೆ ಊರು ಸೇರಿದಂತೆ ಅನ್ಯರಾಜ್ಯಗಳಿಂದ ಹೊಟ್ಟಪಾಡಿಗಾಗಿ ಬರುವ ಬಡ, ಕೂಲಿ ಕಾರ್ಮಿಕರನ್ನು ರಕ್ಷಿಸುವುದು, ಏನೂ ಆಗದಂತೆ ನೋಡಿಕೊಳ್ಳುವುದು ಆಡಳಿತದ ಜೊತೆಗೆ ನಮ್ಮ ಸ್ಥಳೀಯರ ಕರ್ತವ್ಯವಾಗಿದೆ. ಇಂದು ನಮ್ಮ ದೇಶದೊಳಗೆಯೇ ಕೆಲವು ಕಿಡಿಗೇಡಿಗಳು ಮತೀಯ ಉನ್ಮಾದವನ್ನು ಹೆಚ್ಚಿಸಲಿಕ್ಕಾಗಿ ಬಡ ಕಾರ್ಮಿಕರನ್ನು ಗುರಿಯಾಗಿರಿಸಿ ಕೊಂದಿರುವುದು ನಿಜಕ್ಕೂ ಆಘಾತಕಾರಿ ಹಾಗೂ ಬೇಸರದ ಸಂಗತಿ” ಎಂದು ಮಂಗಳೂರಿನ ಪ್ರಗತಿಪರ ವೈದ್ಯರಾದ ಡಾ. ಶ್ರೀನಿವಾಸ್ ಕಕ್ಕಿಲ್ಲಾಯ ಈದಿನ ಡಾಟ್ ಕಾಮ್ ಜೊತೆಗೆ ಅಭಿಪ್ರಾಯ ಹಂಚಿಕೊಳ್ಳುತ್ತಾ ತಿಳಿಸಿದ್ದಾರೆ.

“ಪೆಹಲ್ಗಾಮ್ ಘಟನೆಯ ಬಳಿಕ ಪಾಕಿಸ್ತಾನದ ವಿರುದ್ಧ ಇವತ್ತು ಸರ್ಕಾರದಿಂದ ಹಿಡಿದು ಎಲ್ಲರೂ ದಾಳಿ ಮಾಡುವ ಬಗ್ಗೆ ಮಾತನಾಡುತ್ತಿರುವ ಹೊತ್ತಿನಲ್ಲಿ ಎಂದು ಸುದ್ದಿಗಳು ಹರಿದಾಡುತ್ತಿದೆ. ಈ ಮಧ್ಯೆಯೇ ಕುಡುಪು ಪ್ರದೇಶದಲ್ಲಿ ನಡೆದ ಈ ಘಟನೆಗಳು ನಮ್ಮ ನಡುವೆಯೇ ಆತಂರಿಕ ಕಲಹಗಳಿಗೆ ಕಾರಣವಾಗುತ್ತದೆ. ಆಂತರಿಕ ಸಂಘರ್ಷ ನಡೆಯದಂತೆ ದೇಶದೊಳಗಿನ ಭದ್ರತೆ ಕೂಡ ಮುಖ್ಯ. ನಮ್ಮ ನಡುವೆಯೇ ಇಂತಹದ್ದೊಂದು ಘಟನೆ ನಡೆದಿದೆ ಎಂದರೆ ಬಹಳ ಬೇಸರದ ವಿಷಯ. ಇಂತಹ ಘಟನೆ ಆಗಲೇಬಾರದು. ಪ್ರಜ್ಞಾವಂತ ಪ್ರತಿಯೊಬ್ಬ ಮಂಗಳೂರಿಗ ಇದನ್ನು ಖಂಡಿಸಬೇಕು. ಗೃಹ ಸಚಿವ ಪರಮೇಶ್ವರ್ ಅವರು ‘ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ್ದ ಕಾರಣ’ ಎಂದು ಎಂದು ಹೇಳಿಕೆ ನೀಡಿರುವುದು ಗಮನಕ್ಕೆ ಬಂದಿದೆ. ಒಂದು ವೇಳೆ ಅಪರಿಚಿತ ಯುವಕ ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿದ್ದಿದ್ದರೆ ಈ ಬಗ್ಗೆ ಹಲ್ಲೆ ನಡೆಸಿದ ಆರೋಪಿಗಳು, ಪೊಲೀಸರಿಗೆ ಮಾಹಿತಿ ನೀಡಬಹುದಿತ್ತಲ್ಲವೇ? ನಮ್ಮ ದೇಶದಲ್ಲಿ ಪಾಕ್ ಪರ ಘೋಷಣೆ ಕೂಗಿದ್ದಾರೆ ಎಂಬ ಪ್ರಕರಣಗಳಲ್ಲಿ ಯಾರಿಗಾದರೂ ನಮ್ಮ ದೇಶದಲ್ಲಿ ಶಿಕ್ಷೆಯಾದದ್ದು ಇದೆಯೇ? ಕಾನೂನು ಕೈಗೆತ್ತಿಕೊಳ್ಳುವ ಅಧಿಕಾರ ಯಾರಿಗೂ ಇಲ್ಲ. ಘಟನೆಯನ್ನು ಗೃಹ ಸಚಿವರೇ ಪರೋಕ್ಷವಾಗಿ ಸಮರ್ಥಿಸುತ್ತಿದ್ದಾರೆ ಎಂದರೆ ಅದು ಖಂಡಿತ ತಪ್ಪು” ಎಂದು ಡಾ. ಶ್ರೀನಿವಾಸ್ ಕಕ್ಕಿಲ್ಲಾಯ ತಿಳಿಸಿದ್ದಾರೆ.
“ಮಂಗಳೂರು ಕುಡುಪು ಬಳಿ ಹೊರ ರಾಜ್ಯದ ಅಪರಿಚಿತ ವ್ಯಕ್ತಿಯನ್ನು ಧರ್ಮದ ಗುರುತಿನ ಕಾರಣಕ್ಕಾಗಿ ಸಂಘಪರಿವಾರ ಬೆಂಬಲಿಗರ ಗುಂಪೊಂದು ಹೊಡೆದು ಸಾಯಿಸಿದ ಪ್ರಕರಣವನ್ನು ಮಾಬ್ ಲಿಂಚಿಂಗ್, ಕೊಲೆ ಪ್ರಕರಣ ಎಂದು ಮಂಗಳೂರು ಪೊಲೀಸ್ ಕಮೀಷನರ್ ಎರಡು ದಿನಗಳ ತರುವಾಯ ಪತ್ರಿಕಾಗೋಷ್ಟಿಯಲ್ಲಿ ಒಪ್ಪಿಕೊಂಡಿದ್ದಾರೆ. ಕುಡುಪು ಮಾಬ್ ಲಿಂಚಿಂಗ್ ಪ್ರಕರಣದ ಕುರಿತು ಕಮೀಷನರ್ ಅಗ್ರವಾಲ್ ಮಾಧ್ಯಮಗಳಿಗೆ ನೀಡಿರುವ ಒಟ್ಟು ಹೇಳಿಕೆ ಪೊಲೀಸ್ ಇಲಾಖೆ ಈ ಪ್ರಕರಣದಲ್ಲಿ ನ್ಯಾಯಯುತವಾಗಿ ನಡೆದುಕೊಂಡಿಲ್ಲ, ಬದಲಿಗೆ ಹತ್ಯೆಕೋರರನ್ನು ರಕ್ಷಿಸುವ ಅನುಮಾನಾಸ್ಪದ ನಡೆಗಳಾಗಿ ಕಾಣುತ್ತಿದೆ” ಎಂದು ಸಿಪಿಐಎಂ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಮುನೀರ್ ಕಾಟಿಪಳ್ಳ ಪ್ರತಿಕ್ರಿಯೆ ನೀಡಿದ್ದಾರೆ.

ಅಸಹಜ ಸಾವಿನ ಪ್ರಕರಣವಾಗಿ ಮಾತ್ರ ಒಂದಿಡೀ ದಿನ ವ್ಯರ್ಥ ಮಾಡಿದ್ದು ದಟ್ಟ ಅನುಮಾನಗಳಿಗೆ ಕಾರಣವಾಗಿದೆ. ಪೊಲೀಸರು ಪ್ರಜ್ಞಾಪೂರ್ವಕವಾಗಿ ಮಾಬ್ ಲಿಂಚಿಂಗ್ ಪ್ರಕರಣವನ್ನು ಮುಚ್ಚಿಹಾಕುವ, ಬಿಜೆಪಿಯೊಂದಿಗೆ, ಶಾಸಕರುಗಳೊಂದಿಗೆ ಸಂಪರ್ಕ ಹೊಂದಿರುವ ಬಲಪಂಥೀಯ ಕ್ರಿಮಿನಲ್ ಗುಂಪನ್ನು ರಕ್ಷಿಸಲು ಮಾಡಿದ ಯತ್ನದಂತೆ ಕಾಣಿಸುತ್ತದೆ. ಮಾಬ್ ಲಿಂಚಿಂಗ್ ಪ್ರಕರಣ ಮಂಗಳೂರು ನಗರದಲ್ಲಿ ಹದಗೆಟ್ಟಿರುವ ಕಾನೂನು ಸುವ್ಯವಸ್ಥೆಯ ಪರಿಸ್ಥತಿಯನ್ನು ಎತ್ತಿತೋರಿಸಿರುವುದರಿಂದ ಆ ಕಳಂಕದಿಂದ ಪಾರಾಗಲೂ ಪೊಲೀಸ್ ಇಲಾಖೆ ಎಲ್ಲಾ ಮಾಹಿತಿಗಳ ಹೊರತಾಗಿಯೂ ಪ್ರಕರಣವನ್ನು ಲಘುವಾಗಿಸಲು ಗರಿಷ್ಠ ಯತ್ನ ನಡೆಸಿದೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ಮಂಗಳೂರು ವಲಸೆ ಕಾರ್ಮಿಕನ ಹತ್ಯೆ: 25ರಿಂದ 30 ಜನರ ಗುಂಪು ಹಲ್ಲೆ ನಡೆಸಿ ಕೃತ್ಯ; ಪೊಲೀಸ್ ಕಮಿಷನರ್
“ಪೊಲೀಸ್ ಇಲಾಖೆಯ 24 ತಾಸುಗಳ ಮೌನಾಚರಣೆಯ ಲಾಭ ಪಡೆದು ಪ್ರಕರಣದ ಪ್ರಮುಖ ಆರೋಪಿ, ಬಿಜೆಪಿ ಮುಖಂಡ ರವೀಂದ್ರ ನಾಯಕ್, ಮೊಬೈಲ್ ಗಳಲ್ಲಿ ಸೆರೆಯಾಗಿದ್ದ ಮಾಬ್ ಲಿಂಚಿಂಗ್, ಹಾಗೂ ಹತ್ಯೆ ಘಟನೆಯ ವೀಡಿಯೋಗಳು ಹಾಗೂ ಸ್ಥಳೀಯ ಸಿ ಸಿ ಕೆಮೆರಾ ಗಳ ರೆಕಾರ್ಡಿಂಗ್‌ಗಳನ್ನು ಅಲಿಸಿ ಹಾಕಿದ್ದಾನೆ ಎಂಬ ಆರೋಪಗಳು ಕೇಳಿ ಬರುತ್ತಿದೆ. ಮಂಗಳೂರು ಕಮಿಷನರೇಟ್ ಪೊಲೀಸರು ಕುಡುಪು ಮಾಬ್ ಲಿಂಚಿಂಗ್ ನಲ್ಲಿ ನಡೆದು ಕೊಂಡಿರುವ ರೀತಿಯನ್ನು ಗಮನಿಸಿದರೆ, ಈ ಪ್ರಕರಣದಲ್ಲಿ ಪ್ರಮುಖ ಆರೋಪಿಗಳ ಬಂಧನ ಹಾಗೂ ಸರಿಯಾದ ಸಾಕ್ಷ್ಯ ಸಂಗ್ರಹ, ನ್ಯಾಯಾಲಯದಲ್ಲಿ ಆರೋಪ ಸಾಬೀತಾಗುವುದು ಸುಲಭ ಅಲ್ಲ ಎಂದು ಕಾಣುತ್ತದೆ. ಈ ಎಲ್ಲಾ ಅಂಶಗಳನ್ನು ರಾಜ್ಯ ಸರಕಾರ ಗಂಭೀರವಾಗಿ ಪರಿಗಣಿಸಬೇಕು, ಕುಡುಪು ಮಾಬ್ ಲಿಂಚಿಂಗ್ ಪ್ರಕರಣವನ್ನು ಮಂಗಳೂರಿನ ಹೊರ ಭಾಗದ ಅಧಿಕಾರಿಗಳನ್ನು ಒಳಗೊಂಡ ವಿಶೇಷ ತನಿಖಾ ತಂಡಕ್ಕೆ ಹಸ್ತಾಂತರಿಸಬೇಕು, ಪ್ರಕರಣದ ಆರಂಭದಿಂದಲೆ ತನಿಖಾ ಲೋಪ ಎಸಗಿರುವ ಮಂಗಳೂರು ಪೊಲೀಸ್ ಕಮಿಷನರ್ ಅಗರ್ವಾಲ್ ಹಾಗೂ ಸಂಬಂಧ ಪಟ್ಟ ಪೊಲೀಸರನ್ನು ಇಲಾಖಾ ತನಿಖೆಗೆ ಒಳಪಡಿಸಬೇಕು, ಮಂಗಳೂರು ಪೊಲೀಸ್ ಕಮಿಷನರ್, ಅಡಿಷನಲ್ ಪೊಲೀಸ್ ಕಮೀಷನರ್ ರನ್ನು ಬದಲಾಯಿಸುವ ಜೊತೆಗೆ ಇಡೀ ಕಮಿಷನರೇಟ್ ಪೊಲೀಸ್‌ನಲ್ಲಿ ಅಮೂಲಾಗ್ರ ಬದಲಾವಣೆ ತರಬೇಕು, ಜೊತೆಗೆ ಹತ್ಯೆಗೀಡಾದ ಅಮಾಯಕನ ಕುಟುಂಬಕ್ಕೆ ಪರಿಹಾರ ಧನ ಒದಗಿಸಬೇಕು ಎಂದು ಸಿಪಿಐಎಂ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ರಾಜ್ಯ ಸರಕಾರವನ್ನು ಆಗ್ರಹಿಸುತ್ತದೆ” ಎಂದು ಮುನೀರ್ ಕಾಟಿಪಳ್ಳ ತಿಳಿಸಿದ್ದಾರೆ.

“ಯುವಕನ ಕೊಲೆಗೆ ಪ್ರಮುಖ ಕಾರಣಕರ್ತನಾದ ಪಿಸ್ತೂಲ್ ರವಿ ಎಂಬಾತನ ಮೇಲೆ ಇನ್ನೂ ಎಫ್‌ಐಆರ್ ಆಗಿಲ್ಲ. ಉತ್ತರ ಭಾರತ ಸೇರಿದಂತೆ ಮಂಗಳೂರಿನಲ್ಲಿರುವ ವಲಸೆ ಕಾರ್ಮಿಕರನೆಲ್ಲ ಜೊತೆ ಸೇರಿಸಿ ನಮ್ಮ ಹೋರಾಟ ಸಮಿತಿಯ ಮೂಲಕ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ಮಾಡುತ್ತೇವೆ. ಪ್ರಮುಖ ಆರೋಪಿ ಪಿಸ್ತೂಲ್ ರವಿ ಬಂಧನ ಆಗಲೇಬೇಕು” ಎಂದು ಸಾಮಾಜಿಕ ಕಾರ್ಯಕರ್ತರಾದ ಸುನಿಲ್ ಬಜಿಲಕೇರಿ ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿದ್ದಾರೆ.

ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ದ.ಕ. ಜಿಲ್ಲಾಧ್ಯಕ್ಷರಾದ ಎಂ. ದಿವಾಕರ್ ರಾವ್, ಕಾರ್ಮಿಕನೋರ್ವನ ಗುಂಪು ಹತ್ಯೆಯ ಹಿಂದೆ ಕೆಲವು ಪ್ರಭಾವಿಗಳ ಕೈವಾಡವಿರುವ ಶಂಕೆಯಿದೆ. ಮಾನವ ಸಮುದಾಯ ತಲೆತಗ್ಗಿಸುವ ಕೆಲಸ ನಡೆದಿದೆ. ಈ ಕೊಲೆಗೆ ಇತ್ತೀಚೆಗೆ ಮಂಗಳೂರಿನಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿರುವವರು ಬೇಕಾಬಿಟ್ಟಿಯಾಗಿ ನೀಡುತ್ತಿರುವ ಕೋಮು ಪ್ರಚೋದನಾಕಾರಿ ಹೇಳಿಕೆಗಳೇ ಕಾರಣ. ಪ್ರಚೋದನಕಾರಿ ಹೇಳಿಕೆ ನೀಡುವ ಸಮಾಜ ದ್ರೋಹಿಗಳ ಮೇಲೆ ಜಾಮೀನು ರಹಿತ ಕೇಸು ದಾಖಲಿಸಬೇಕು. ಕುಡುಪುವಿನಲ್ಲಿ ಕಾರ್ಮಿಕನ ಕೊಲೆಯ ಹಿಂದಿರುವ ಎಲ್ಲಾ ಕೊಲೆಗಾರರ ತಕ್ಷಣ ಬಂಧನವಾಗಬೇಕು. ಅಲ್ಲದೆ ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ವಿಫಲವಾದ ಜಿಲ್ಲೆಯ ಪೊಲೀಸ್ ಇಲಾಖೆಯ ಶುದ್ಧೀಕರಣ ನಡೆಯಬೇಕು” ಎಂದು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಮಂಗಳೂರು ಗುಂಪು ಹತ್ಯೆ ಘಟನೆಗೆ ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆ ಕಾರಣ ಎಂದ ಗೃಹ ಸಚಿವ ಪರಮೇಶ್ವರ್!
“ಈ ರೀತಿಯ ಹತ್ಯೆಗಳು ಪ್ರಚೋದನಾತ್ಮಕ ಹೇಳಿಕೆಗಳು ಮತ್ತು ಕೋಮುವಾದಿ ಕ್ರಮಗಳಿಂದ ಪ್ರೇರಿತವಾಗಿ ನಡೆಯುತ್ತದೆ. ಇಂತಹ ಗುಂಪು ಹತ್ಯೆಗಳು, ನಮ್ಮ ರಾಜ್ಯದ, ಜಿಲ್ಲೆಯ ಶಾಂತಿ ಹಾಗೂ ಸಾಮರಸ್ಯವನ್ನು ಹಾಳು ಮಾಡುತ್ತದೆ. ಮಾತ್ರವಲ್ಲದೆ ಜಿಲ್ಲೆಯ ಹೆಸರನ್ನು ಕೆಡಿಸುತ್ತವೆ. ಜಮಾಅತೆ ಇಸ್ಲಾಮಿ ಹಿಂದ್ ಮಂಗಳೂರು, ಈ ಕೃತ್ಯವನ್ನು ಅತ್ಯಂತ ತೀವ್ರವಾಗಿ ಖಂಡಿಸುತ್ತದೆ ಮತ್ತು ಕೊಲೆಗೈದ ಎಲ್ಲಾ ಆರೋಪಿಗಳನ್ನು ತಕ್ಷಣ ಬಂಧಿಸಿ, ತಮ್ಮ ಕೃತ್ಯಗಳಿಗೆ ಸರಿಯಾದ ಶಿಕ್ಷೆ ನೀಡಲು ಸರ್ಕಾರಕ್ಕೆ ಒತ್ತಾಯಿಸುತ್ತದೆ. ಅಲ್ಪಸಂಖ್ಯಾತರ ರಕ್ಷಣೆ, ವಲಸೆ ಕಾರ್ಮಿಕರ ರಕ್ಷಣೆ ಸರ್ಕಾರವು ಸೂಕ್ತ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು. ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು” ಎಂದು ಜಮಾಅತೇ ಇಸ್ಲಾಮಿ ಹಿಂದ್ ಮಂಗಳೂರು ನಗರ ಸಂಚಾಲಕರಾದ ಕೆ.ಎಂ.ಅಶ್ರಫ್ ಹೇಳಿಕೆ ನೀಡಿದ್ದಾರೆ.