ನ್ಯಾಯಮೂರ್ತಿ ನಾಗಮೋಹನದಾಸ್ ಅವರು ಸರ್ಕಾರಕ್ಕೆ ನೀಡಿರುವ ಒಳ ಮೀಸಲಾತಿ ವರದಿಯನ್ನು ಸಂಪೂರ್ಣವಾಗಿ ತಿರಸ್ಕರಿಸಲು ಆಗ್ರಹಿಸಿ ಛಲವಾದಿ ಮಹಾಸಭಾ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕು ಸಮಿತಿಯಿಂದ ಪ್ರತಿಭಟನೆಯನ್ನು ನಡೆಸಲಾಯಿತು.
ಮುದ್ದೇಬಿಹಾಳದ ಅಂಬೇಡ್ಕರ್ ವೃತ್ತದಿಂದ ತಹಶೀಲ್ದಾರ್ ಕಚೇರಿಯವರೆಗೂ ಜಾಥಾ ನಡೆಸಿದ ಬಳಿಕ ತಹಶೀಲ್ದಾರ್ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಸಮೀಕ್ಷೆಯು ಸಂಪೂರ್ಣ ತಾತ್ಕಾಲಿಕ,, ಅಸಂಬದ್ಧ ಮತ್ತು ತೃಪ್ತಿಕರವಾಗಿ ನಡೆದಿರುವುದಿಲ್ಲ. ಐತಿಹಾಸಿಕ ಹಾಗೂ ಕಾನೂನು ಬದ್ಧ ಮಾಹಿತಿಯ ಅಪರ್ಯಾಪ್ತತೆಯಿಂದ ಕೂಡಿದೆ. ಬಲಗೈ ಸಮುದಾಯದ ಜನಸಂಖ್ಯೆಯನ್ನು ಅಂಕಿ ಅಂಶಗಳಿಂದ ಕಡಿಮೆ ಮಾಡುವ ಉದ್ದೇಶದಿಂದ ಮಾದಿಗ ಸಮುದಾಯದ ಜನಸಂಖ್ಯೆಗೆ ಬಲಗೈ ಸಮುದಾಯ ಸೇರ್ಪಡೆಗೊಳಿಸಲಾಗಿದೆ. ಸರ್ಕಾರದ ಆದೇಶಗಳು, ನಿಯಮಾವಳಿ ಉಲ್ಲಂಘನೆಯಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.

ಸಮೀಕ್ಷೆಯಲ್ಲಿ ಅಪೂರ್ಣತೆ ಮತ್ತು ತಾತ್ಕಾಲಿಕ ದೋಷಗಳಿವೆ. ಐತಿಹಾಸಿಕ ಮತ್ತು ಕುಲ ಶಾಸ್ತ್ರೀಯ ಅಧ್ಯಯನದ ಕೊರತೆ ಇದೆ. ಬಲಗೈ ಸಮುದಾಯದ ವಿರುದ್ಧ ದ್ವೇಷಪೂರ್ವಕ ನಿರ್ಧಾರವಾಗಿದ್ದು ಸಮುದಾಯದ ಜನಸಂಖ್ಯೆಯನ್ನು ಕುಗ್ಗಿಸುವ ಉದ್ದೇಶವೇ ಹೊಂದಿದೆ. ನ್ಯಾಯಮೂರ್ತಿ ನಾಗಮೋಹನ ದಾಸ್ ರವರ ವರದಿಯನ್ನು ಸಂಪೂರ್ಣ ತಿರಸ್ಕರಿಸಬೇಕು. ವರದಿಯನ್ನು ಅಂಗೀಕರಿಸಿದರೆ, ಸರ್ಕಾರ, ಪರಿಶಿಷ್ಟ ಜಾತಿ ಸಚಿವರು ಮತ್ತು ಶಾಸಕರು ನಿರ್ವಹಣೆಯ ಫಲಿತಾಂಶಕ್ಕೆ ಹೊಣೆಗಾರರಾಗಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.
ಇದನ್ನು ಓದಿದ್ದೀರಾ? ‘ಶೋಲೆ’ @ 50: ಇವತ್ತಿಗೂ ಅದೇ ತಾಜಾತನ, ಅದೇ ಆಕರ್ಷಣೆ, ಅದೇ ಕುತೂಹಲ
ಪ್ರತಿಭಟನೆಯಲ್ಲಿ ಹರೀಶ್ ನಾಟೇಕರ್, ವೈ ಎಸ್ ವಿಜಯಕರ್, ಪ್ರಕಾಶ ಸರೋವರ, ಗುಂಡಪ್ಪ ಚಲವಾದಿ, ಮಲ್ಲು ತಳವಾರ, ಬಸವರಾಜ ಸಾರೂರ, ಮಂಜುನಾಥ ಕಟ್ಟಿಮನಿ, ಶಿವಪುತ್ರ ಅಜಿಮನಿ, ಶ್ರೀಶೈಲ ಬೀದರಕುಂದಿ, ಪರಶು ಮುರಾಳ, ಎಸ್ ಎನ್ ಚಲವಾದಿ, ಈರಣ್ಣ ತಾರನಾಳ, ಸಿದ್ದಪ್ಪ ಚಲವಾದಿ ಹಾಗೂ ಭೀಮಣ್ಣ ಛಲವಾದಿ ಇದ್ದರು.
