ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಕೇಸಾಪೂರ, ನೆರಬೆಂಚಿ ಹಾಗೂ ಆಲೂರ ಗ್ರಾಮದಲ್ಲಿ ಮದ್ಯ ಅಕ್ರಮ ಮಾರಾಟ ತಡೆಗಟ್ಟಬೇಕೆಂದು ಆಗ್ರಹಿಸಿ ಗ್ರಾಮಸ್ಥರು ಅಬಕಾರಿ ಕಚೇರಿ ಎದುರಿಗೆ ಪ್ರತಿಭಟನೆ ನಡೆಸಿ, ಅಬಕಾರಿ ಅಧಿಕಾರಿ ಹೊಸಮನಿ ಅವರಿಗೆ ಮನವಿ ಸಲ್ಲಿಸಿದರು.
ಕಿರಾಣಿ ಅಂಗಡಿ, ಪಾನ್ ಶಾಪ್ ಮತ್ತು 258 ಅಂಗಡಿಗಳಲ್ಲಿ ಮದ್ಯ ಅಕ್ರಮ ಮಾರಾಟ ಮಾಡುತ್ತಿದ್ದಾರೆ. ಊರಿನ ಯುವಕರು, ಕಾಲೇಜು ವಿದ್ಯಾರ್ಥಿಗಳು ಮದ್ಯ ವ್ಯಸನಿಗಳಾಗಿದ್ದಾರೆ. ಮದ್ಯ ಅಕ್ರಮ ಮಾರಾಟ ತಡೆಗಟ್ಟುವಂತೆ ಆಗ್ರಹಿಸಿ ಅಧಿಕಾರಿಗಳಿಗೆ ತಿಳಿಸಿದ್ದರೂ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ ನಡೆಸಿದರು.
‘ಕುಡಿತದ ದಾಸರಾಗಿರುವ ಪುರುಷರಿಂದ ಮನೆಯ ನೆಮ್ಮದಿ ಹಾಳಾಗುತ್ತಿದೆ. ಮನೆಯಲ್ಲಿ ಸಣ್ಣಪುಟ್ಟ ಖರ್ಚುಗಳಿಗೆಂದು ತೆಗೆದಿಟ್ಟಿರುವ ಹಣವನ್ನು ತೆಗೆದುಕೊಂಡು ಹೋಗಿ ಕುಡಿಯುವುದಕ್ಕೆ ಬಳಸುತ್ತಿದ್ದಾರೆ. ಇದನ್ನು ನಿಯಂತ್ರಿಸಬೇಕಾದರೆ ಮದ್ಯ ಮಾರಾಟ ನಿಯಂತ್ರಿಸಬೇಕು. ಇಲ್ಲದಿದ್ದರೆ ನಮ್ಮ ಹೆಣಗಳು ಪೊಲೀಸ್ ಠಾಣೆಗೆ ಬರುತ್ತವೆ’ ಎಂದು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು.

ಮನವಿ ಸ್ವೀಕರಿಸಿದ ಬಳಿಕ ಮಾತನಾಡಿದ ಅಬಕಾರಿ ಅಧಿಕಾರಿ ಹೊಸಮನಿ, “ಮದ್ಯ ಅಕ್ರಮ ಮಾರಾಟ ಮಾಡುವವರ ವಿರುದ್ಧ ಕ್ರಮ ಜರುಗಿಸಲಾಗಿದೆ. ಗ್ರಾಮಸ್ಥರ ಹೇಳಿಕೆಯಂತೆ ಇನ್ನೂ ಮುಂದುವರೆದಿದ್ದರೆ ಅಂತವರನ್ನು ವಶಕ್ಕೆ ಪಡೆದು ನೋಟಿಸ್ ನೀಡಿ ಕ್ರಮ ಜರುಗಿಸಲಾಗುವುದು” ಎಂದು ಹೇಳಿದರು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ಕೊಟ್ಟ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.
ಈ ಸಂದರ್ಭದಲ್ಲಿ ಸಂಗನಗೌಡ ಅವರ ಪಾಟೀಲ್, ಶಾಂತಗೌಡ ನಾಡಗೌಡ, ದ್ಯಾವಣ್ಣ ಹಿರೇಕುರುಬರ, ಬಾಲಪ್ಪ ಶಂಕಪ್ಪ ತಳವಾರ, ಸಂಗಣ್ಣ ಭೋಯೇರ, ಆರೊ ಅಶೋಕ ಹಗರಗುಂಡ, ಶರಣಗೌಡ ಪಾಟೀಲ, ಮಲಕಾಜಪ್ಪ ಕಡಿ, ಅಂಬ್ರಪ್ಪ ಕೋಳೂರು, ಯಮನಪ್ಪ ತಳವಾರ, ಯಲ್ಲಪ್ಪ ಕರಡಿ, ಸಂಗಮ್ಮ ಸಾತಿಹಾಳ, ಅಮ್ಮಕ್ಕ ಖಾನಾಪೂರ, ದೇವಮ್ಮ ತಳವಾರ ಇದ್ದರು.
ಅಪರಾಧ ವಿಭಾಗದ ಆರ್.ಎಲ್.ಮನ್ನಾಭಾಯಿ, ಎಎಸ್‌ಐ ಎ.ವೈ.ಸಾಲಿ, ಪೊಲೀಸ್ ಸಿಬ್ಬಂದಿ ತ ಮಲ್ಲಿಕಾರ್ಜುನ ಬೋಳರೆಡ್ಡಿ ಭದ್ರತೆ ಒದಗಿಸಿದ್ದರು.
