ಸ್ವಾತಂತ್ರ್ಯ ಹೋರಾಟಗಾರ ರಾಮಸ್ವಾಮಿಯವರ 77ನೇ ಹುತಾತ್ಮ ದಿನವನ್ನು ಆಚರಿಸಿ ಎಐಡಿಎಸ್ಒ ಮೈಸೂರು ಜಿಲ್ಲಾ ಸಮಿತಿಯಿಂದ ಬಾಣಾವರದ ರಾಮಸ್ವಾಮಿಯವರಿಗೆ ಗೌರವ ಸಲ್ಲಿಸಿದರು.
ಈ ವೇಳೆ ಎಐಡಿಎಸ್ಒ ಜಿಲ್ಲಾಧ್ಯಕ್ಷೆ ಚಂದ್ರಕಲಾ ಮಾತನಾಡಿ, “ಭಾರತ ದೇಶಕ್ಕೆ ಆಗಸ್ಟ್ 15ರಂದು ಸ್ವಾತಂತ್ರ್ಯ ಬಂದರೂ, ಅಂದಿನ ಮೈಸೂರು ಸಂಸ್ಥಾನಕ್ಕೆ ಸ್ವಾತಂತ್ರ್ಯ ಬಂದಿರಲಿಲ್ಲ. ಮೈಸೂರು ಸಂಸ್ಥಾನ ಸ್ವತಂತ್ರ ಪ್ರಾಂತ್ಯವಾಗಿ ಉಳಿಯಲಿದೆಯೆಂದು ಮಹಾರಾಜರ ಆಪ್ತರು, ಆಗಸ್ಟ್ 10ರಂದೇ ಘೋಷಿಸಿದ್ದರು” ಎಂದು ತಿಳಿಸಿದರು.
“ರಾಜಾಳ್ವಿಕೆ ಖಂಡಿಸಿದ ಹೋರಾಟಗಾರರು ಸ್ವಾತಂತ್ರ್ಯವನ್ನು ಘೋಷಿಸಿ ಸರ್ಕಾರವನ್ನು ರಚಿಸಬೇಕೆಂದು ಒತ್ತಾಯಿಸಿ ಸೆಪ್ಟೆಂಬರ್ 1ರಿಂದ ʼಮೈಸೂರು ಚಲೋʼ ಚಳವಳಿಯನ್ನು ಘೋಷಿಸಿತ್ತು. ಆ ಹೋರಾಟದಲ್ಲಿ 17 ವರ್ಷದ ಬಾಲಕ ರಾಮಸ್ವಾಮಿಯವರು ಭಾಗಿಯಾಗಿದ್ದರು” ಎಂದರು.
“ಪ್ರತಿಭಟನೆಯಲ್ಲಿದ್ದ ಜನರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ, ಅಶ್ರುವಾಯು ಸಿಡಿಸಿದಾಗ ವಿದ್ಯಾರ್ಥಿಗಳು ಚೆಲ್ಲಾಪಿಲ್ಲಿಯಾದರು. ಆದರೆ ಇದರ ನಡುವೆಯೂ ಧೈರ್ಯಶಾಲಿ ರಾಮಸ್ವಾಮಿ ತ್ರಿವರ್ಣ ಧ್ವಜ ಹಿಡಿದು ವೃತ್ತವನ್ನು ಪ್ರವೇಶಿಸಿ, ಧ್ವಜವನ್ನು ಹಾರಿಸಲು ಲಾಂದ್ರದ ಕಂಬವೇರಿದ್ದರು” ಎಂದರು.

“ಅಷ್ಟರಲ್ಲಿ, ಅಂದಿನ ಮೈಸೂರು ಜಿಲ್ಲಾಧಿಕಾರಿ ನಾಗರಾಜರಾವ್ ರಾಮಸ್ವಾಮಿಯೆಡೆಗೆ ಗುರಿಮಾಡಿ ತೋರಿಸಿ ಧ್ವಜವನ್ನು ಬಿಟ್ಟು ಕೆಳಗಿಳಿಯದಿದ್ದರೆ ಗುಂಡು ಹಾರಿಸುವುದಾಗಿ ಗದರಿಸಿದ್ದರು. ಆದರೆ ಧೈರ್ಯಗೆಡದ ರಾಮಸ್ವಾಮಿಯವರು “ನಮ್ಮ ನಾಡಿನ ಸ್ವಾತಂತ್ರ್ಯಕ್ಕಾಗಿ ಜನರೆಲ್ಲಾ ಹೋರಾಡುತ್ತಿರುವಾಗ ನೀವು ಇಷ್ಟು ಓದಿದವರಾಗಿ ಸಂಬಳಕ್ಕೆ ಗುಲಾಮರಾಗಬೇಡಿ. ನೀವು ನಮ್ಮೊಡನೆ ಸೇರಿಕೊಂಡು ಸ್ವಾತಂತ್ರ್ಯಕ್ಕಾಗಿ ಹೋರಾಡಿರಿ ಎಂದಿದ್ದರು. ಅಂತಹ ಧೈರ್ಯಶಾಲಿ ರಾಮಸ್ವಾಮಿ” ಎಂದು ಸ್ಮರಿಸಿದರು.
“ಕೆರಳಿದ ಅಧಿಕಾರಿ, ‘ಹಿಂದಕ್ಕೆ ಸರಿಯದಿದ್ದರೆ ಸಾಯಬೇಕಾಗುತ್ತದೆʼ ಎಂದು ಗುಡುಗಿದಾಗ ‘ನನ್ನೊಬ್ಬನನ್ನು ಕೊಂದರೇನಂತೆ? ಕೋಟ್ಯಂತರ ಭಾರತೀಯರು ಸಿಡಿದೇಳುತ್ತಾರೆ. ಮೈಸೂರು ರಾಜ್ಯ ಸ್ವತಂತ್ರವಾಗುತ್ತದೆ. ನಿಮ್ಮ ಅಧಿಕಾರ ಹೋಗುತ್ತದೆ’ ಎಂದೇಳಿದ ಬಾಲಕ ತನ್ನ ಅಂಗಿಕಿತ್ತು ಅಧಿಕಾರಿಯೆಡೆಗೆ ತನ್ನ ಎದೆ ಚಾಚಿದನು. ಅಧಿಕಾರಿ ರಿವಾಲ್ವರ್‌ನಿಂದ ಹಾರಿದ ಮೂರು ಗುಂಡುಗಳು ರಾಮಸ್ವಾಮಿಯವರ ಎದೆಯನ್ನು ಭೇದಿಸಿದವು. ಬಳಿಕ ರಾಮಸ್ವಾಮಿಯವರು ಅಲ್ಲೇ ಕೊನೆಯುಸಿರೆಳೆದರು. ಅಂದಿನ ಹೋರಾಟದ ಫಲವಾಗಿ ಅಕ್ಟೋಬರ್ 28ರಂದು ಮೈಸೂರು ಸಂಸ್ಥಾನದ ಆಡಳಿತ ಕೊನೆಯಾಯಿತು” ಎಂದು ನಡೆದ ಘಟನೆಯನ್ನು ಮೆಲುಕು ಹಾಕಿದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಅರವಿಂದ್ ಕೇಜ್ರಿವಾಲ್ ಪ್ರಕರಣ ಪ್ರಾಮಾಣಿಕತೆಗೆ ಸಾಕ್ಷಿ: ಭೋಗೇಶ್ ಸೋಲಾಪುರ್
ಉಪಾಧ್ಯಕ್ಷೆ ಸ್ವಾತಿ ಮಾತನಾಡಿ, “17 ವರ್ಷದ ಬಾಲಕ ರಾಮಸ್ವಾಮಿ ಅನ್ಯಾಯದ ವಿರುದ್ಧ ಅಂದು ಹೋರಾಟ ಮಾಡದೇ ಇದ್ದಿದ್ದರೆ, ಬಲಿದಾನ ನೀಡದೇ ಇದ್ದಿದ್ದರೆ ಸ್ವಾತಂತ್ರ್ಯ ಭಾರತದಲ್ಲಿ ಸ್ವಾತಂತ್ರ್ಯವಿರದೆ ಆತಂತ್ರರಾಗಿ ರಾಜಾಳ್ವಿಕೆಯಲ್ಲಿ ಬದುಕಬೇಕಿತ್ತು. ಆದರೆ ರಾಮಸ್ವಾಮಿ ದಿಟ್ಟತನ, ಸತ್ಯದ ಪರವಾಗಿ ನಿಂತ ಅವರ ಧೈರ್ಯ ರಾಜಪರಂಪರೆ ಕೊನೆಗಾಣಿಸಿ ಸ್ವಾತಂತ್ರ್ಯ ಧಕ್ಕಿಸಿಕೊಂಡಿತು. ಇಂದಿನ ವಿದ್ಯಾರ್ಥಿ, ಯುವಜನರಿಗೆ ರಾಮಸ್ವಾಮಿ ಆದರ್ಶವಾಗಬೇಕು. ಹೋರಾಟದ ಕಿಚ್ಚು ಹೆಚ್ಚಬೇಕು, ಅನ್ಯಾಯವಾದಾಗ ಪ್ರಶ್ನಿಸುವ ಗಟ್ಟಿತನವಿರಬೇಕು” ಎಂದರು.
ಪದಾಧಿಕಾರಿಗಳಾದ ಹೇಮ, ಚಂದನ, ಅಂಜಲಿ, ದಿಶ, ಗೌತಮ್ ಸೇರಿದಂತೆ ಇತರ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಇದ್ದರು.