ಬಿಸಿಯೂಟ ಕಾರ್ಯಕರ್ತೆಯರಿಗೆ ಕನಿಷ್ಠ ವೇತನ ಜಾರಿಗೊಳಿಸಿ, ಸಮವಸ್ತ್ರ, ಗುರುತಿನ ಚೀಟಿಗಳನ್ನು ನೀಡಿ, ಕಾರ್ಮಿಕರೆಂದು ಪರಿಗಣಿಸುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಎಐಯುಟಿಯುಸಿ ರಾಜ್ಯ ನಾಯಕಿ ಎಂ ಉಮಾದೇವಿಯವರು ಆಗ್ರಹಿಸಿದರು.
ಮೈಸೂರು ತಾಲೂಕಿನ ಎಐಯುಟಿಯುಸಿ ಕಚೇರಿಯಲ್ಲಿ ಬಿಸಿಯೂಟ ಕಾರ್ಯಕರ್ತೆಯರನ್ನು ಸಂಘಟಿಸುವ ಉದ್ದೇಶದಿಂದ ಹಮ್ಮಿಕೊಂಡಿದ್ದ ಮೈಸೂರು ಗ್ರಾಮಾಂತರ ಸಮಾವೇಶಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು.
“ರಾಜ್ಯ ಸರ್ಕಾರದ ಶಾಲೆಗಳಲ್ಲಿ ಹಲವಾರು ವರ್ಷಗಳಿಂದ ಮಧ್ಯಾಹ್ನದ ಬಿಸಿ ಊಟದ ಅಡುಗೆ ತಯಾರು ಮಾಡುವ ಮುಖ್ಯ ಅಡುಗೆಯವರು, ಅಡುಗೆ ಸಹಾಯಕರ ಕೆಲಸವನ್ನು ಖಾಯಂಗೊಳಿಸಬೇಕು. ಇಲ್ಲವೇ ಇವರನ್ನು ಈ ಹುದ್ದೆಗಳಲ್ಲಿ ಖಾಯಂ ಗೊಳಿಸುವವರೆಗೆ ಮುಖ್ಯ ಅಡುಗೆಯವರು, ಅಡುಗೆಯವರು, ಅಡುಗೆ ಸಹಾಯಕರ ಹುದ್ದೆಗಳಿಗೆ ರಾಜ್ಯ ಸರ್ಕಾರದ ಕಾರ್ಮಿಕ ಇಲಾಖೆಯ ಕನಿಷ್ಠ ವೇತನ ಕಾಯ್ದೆಯ ಅನ್ವಯದಂತೆ ಈ ಶೆಡ್ಯೂಲ್ ಹುದ್ದೆಗಳಿಗೆ ನಿಗದಿಪಡಿಸಿರುವಷ್ಟು ಮಾಸಿಕ ವೇತನ, ಇಪಿಎಫ್,ಇಎಸ್‌ಐ ಸೌಲಭ್ಯಗಳನ್ನು ನೀಡಬೇಕು” ಎಂದು ಒತ್ತಾಯಿಸಿದರು.
“ಶಾಸನಬದ್ಧ ಸೌಕರ್ಯಗಳಾದ ವಾರದ ರಜೆ, ರಾಷ್ಟ್ರೀಯ ಹಬ್ಬದ ರಜೆ, ಹೆರಿಗೆ ರಜೆಗಳನ್ನು ನೀಡಬೇಕು. ಈ ರಜಾ ದಿನಗಳಲ್ಲಿ ಕೆಲಸ ಮಾಡಿದವರಿಗೆ ದುಪ್ಪಟ್ಟು ವೇತನ ನೀಡಬೇಕು. ಮಾಸಿಕ ವೇತನವನ್ನು ಪ್ರತಿ ತಿಂಗಳು 5ನೇ ತಾರೀಖಿನೊಳಗೆ ಕಾರ್ಮಿಕರ ಬ್ಯಾಂಕ್ ಖಾತೆಗೆ ಪಾವತಿ ಮಾಡಬೇಕು. ಪ್ರತಿ ತಿಂಗಳು ವೇತನ ಚೀಟಿ ನೀಡಬೇಕು” ಎಂದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ತುಂಗಭದ್ರಾ ಎಡದಂಡೆ ಕಾಲುವೆ ನೀರಿನ ಅಸಮರ್ಪಕ ಬಳಕೆ; ಕ್ರಮಕ್ಕೆ ಆಗ್ರಹ
“ಸುರಕ್ಷಿತ ನಿವೃತ್ತಿ ಬದುಕು ಖಾತರಿಪಡಿಸುವುದಕ್ಕಾಗಿ, ನಿವೃತ್ತಿ ವೇತನಕ್ಕೆ ಒಳಪಡಿಸಿ, ಅಲ್ಲಿಯವರೆಗೆ ರೂ.5 ಲಕ್ಷ ಇಡಿಗಂಟು ನೀಡಬೇಕು. ಜೀವವಿಮೆಗೆ ಒಳಪಡಿಸಿ ಇಲಾಖೆಯಿಂದ ಪ್ರೀಮಿಯಂ ಪಾವತಿಸಬೇಕು” ಎಂದು ಒತ್ತಾಯಿಸಿದರು.
ಈ ವೇಳೆ ಹೊಸದಾದ ಸಮಿತಿ ರಚಿಸಿ ಅಧ್ಯಕ್ಷರಾಗಿ ಕುಮಾರಿ, ಕಾರ್ಯದರ್ಶಿಯಾಗಿ ಮಹದೇವಮ್ಮ ಹಾಗೂ ಉಪಾಧ್ಯಕ್ಷರಾಗಿ ದೇವಮಣಿ, ಇಂದ್ರಮ್ಮ, ಪಾರ್ವತಮ್ಮ ಅವರನ್ನು ಆಯ್ಕೆ ಮಾಡಿದರು.