ಡಾ. ಬಿ.ಆರ್ ಅಂಬೇಡ್ಕರ್ ಅವರ ಭಾವಚಿತ್ರವಿದ್ದ ನಾಮಫಲಕವನ್ನು ಕಿಡಿಗೇಡಿಗಳು ವಿರೂಪಗೊಳಿಸಿರುವ ಘಟನೆ ಮೈಸೂರು ಜಿಲ್ಲೆಯ ಸಿಂಧುವಳ್ಳಿ ಗ್ರಾಮದಲ್ಲಿ ನಡೆದಿದೆ. ಘಟನೆಯನ್ನು ಖಂಡಿಸಿ ಗ್ರಾಮದ ದಲಿತ ಮುಖಂಡರು ಪ್ರತಿಭಟನೆ ನಡೆಸಿದ್ದಾರೆ.
ಸಿಂಧುವಳ್ಳಿ ಗ್ರಾಮದಲ್ಲಿನ ಅಂಬೇಡ್ಕರ್ ಭವನದ ಬಳಿ ‘ಅಂಬೇಡ್ಕರ್ ಯುವಕ ಸಂಘ’ವು ಅಂಬೇಡ್ಕರ್ ಭಾವಚಿತ್ರ ಇರುವ ನಾಮಫಲಕವನ್ನು ಅಳವಡಿಸಿತ್ತು. ಆ ನಾಮಫಲಕವನ್ನು ಕಿಡಿಗೇರಿಗಳು ಸೋಮವಾರ ರಾತ್ರಿ ವಿರೂಪಗೊಳಿಸಿದ್ದಾರೆ.
ದುಷ್ಕರ್ಮಿಗಳ ಕೃತ್ಯವನ್ನು ಖಂಡಿಸಿ, ಕ್ರಮಕ್ಕೆ ಆಗ್ರಹಿಸಿ ದಲಿತ ಸಂಘಟನೆಗಳ ಮುಖಂಡರು, ದಲಿತ ಯುವಕರು ಜಯಪುರ-ಕಡಕೋಳ ಮುಖ್ಯರಸ್ತೆಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಅಂಬೇಡ್ಕರ್ ಭಾವಚಿತ್ರವಿದ್ದ ನಾಮಫಲಕವನ್ನ ಕಿಡಿಗೇಡಿಗಳು ಕಲ್ಲಿನಿಂದ ಹೊಡೆದು, ವಿರೂಪಗೊಳಿಸಿದ್ದಾರೆ. ಅಂಬೇಡ್ಕರ್ ಭಾವಚಿತ್ರದ ಕಿವಿ, ಕನ್ನಡಕ ಇರುವ ಭಾಗ ವಿರೂಪಗೊಂಡಿದೆ. ನಾಮಫಲಕ ಬಿರುಕು ಬಿಟ್ಟಿದೆ. ಕೃತ್ಯ ಎಸಗಿದೆ ದುಷ್ಕರ್ಮಿಗಳನ್ನು ತಕ್ಷಣವೇ ಬಂಧಿಸಬೇಕು” ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
ಗ್ರಾಮಕ್ಕೆ ಡಿವೈಎಸ್‌ಪಿ ಕರೀ ರಾವತ್ ಮತ್ತು ಮೈಸೂರು ದಕ್ಷಿಣ ಠಾಣಾ ಪಿಎಸ್ಐ ಶಾಂತಲಿಂಗಯ್ಯ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಶ್ರೀಘ್ರವೇ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.