ಮೈಸೂರನ್ನು ಯೋಗ ಹಬ್ಬನ್ನಾಗಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎಂದು ಜಿಲ್ಲಾ ಆಯುಷ್ ಅಧಿಕಾರಿ ಡಾ ಸಿ ರೇಣುಕಾದೇವಿ ಹೇಳಿದರು.
ಮೈಸೂರು ಯೋಗ ಅಸೋಸಿಯೇಷನ್ ಹಾಗೂ ಹಿಮಾಲಯ ಪ್ರತಿಷ್ಠಾನ ವತಿಯಿಂದ ನಗರದ ನಮೋ ಯೋಗ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಯೋಗ ಸಾಧಕರಿಗೆ ಯೋಗ ವಿಭೂಷಣ ಹಾಗೂ ಯೋಗ ಭೂಷಣ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
” ಮೈಸೂರು ಯೋಗ ಪರಂಪರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಮೈಸೂರಿನಲ್ಲಿ ನಡೆದ ಯೋಗಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಮೈಸೂರು ಮತ್ತಷ್ಟು ಪ್ರಜ್ವಲಿಸುತ್ತಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಆಯುಷ್ ಇಲಾಖೆಯಿಂದ ಮೈಸೂರನ್ನು ಯೋಗ ಹಬ್ ಮಾಡಲು ಸೂಚನೆಗಳು ಬಂದಿವೆ ” ಎಂದರು.
ಹಿರಿಯ ಪತ್ರಕರ್ತ ಅಂಶಿ ಪ್ರಸನ್ನ ಕುಮಾರ್ ಮಾತನಾಡಿ ” ಮನುಷ್ಯನಲ್ಲಿ ಎಷ್ಟೇ ಸಂಪತ್ತು ಇದ್ದರೂ ಆರೋಗ್ಯವೇ ಆತನ ದೊಡ್ಡ ಸಂಪತ್ತು. ಇತ್ತೀಚಿನ ದಿನಗಳಲ್ಲಿ ಆರೋಗ್ಯದ ಬಗ್ಗೆ ಎಲ್ಲರಿಗೂ ಕಾಳಜಿ ಬರುತ್ತಿದೆ. ಪ್ರತಿಯೊಬ್ಬರು ದಿನದ ಒಂದು ಸಮಯದಲ್ಲಾದರೂ ಯೋಗಾಭ್ಯಾಸವನ್ನು ಮಾಡಬೇಕು. ಯೋಗಕ್ಕೆ ಮೈಸೂರು ಅರಸರು ರಾಜಾಶ್ರಯ ನೀಡಿದರು. ಅವರು ನೀಡಿದ ಪ್ರೋತ್ಸಾಹದ ಫಲವಾಗಿ ಮೈಸೂರು ಇಂದು ವಿಶ್ವದೆಲ್ಲೆಡೆ ಗುರುತಿಸಿಕೊಂಡಿದೆ. ನಾನಾ ದೇಶದ ಜನರು ಇಲ್ಲಿಗೆ ಯೋಗ ಕಲಿಯಲು ಬರುತ್ತಿದ್ದಾರೆ. ಇದು ಮೈಸೂರಿನ ಸುಯೋಗ ” ಎಂದರು.
ಸಾಂಸ್ಕೃತಿಕ ಚಿಂತಕ ಡಾ ಕೆ ರಘುರಾಮ್ ವಾಜಪೇಯಿ ಮಾತನಾಡಿ ‘ ಯೋಗ ಎಂದರೆ ಕೇವಲ ಆಸನವಲ್ಲ. ಅಷ್ಟಾಂಗವನ್ನು ಅಳವಡಿಸಿಕೊಂಡು ಅಭ್ಯಾಸ ಮಾಡಿದರಷ್ಟೆ ಯೋಗ ಸಿದ್ದಿಯಾಗುತ್ತದೆ ‘ ಎಂದು ತಿಳಿಸಿದರು.
ಮೈಸೂರು ಯೋಗ ಅಸೋಸಿಯೇಷನ್ ನ ಅಧ್ಯಕ್ಷ ಡಾ ಸಿ ರಮೇಶ್ ಶೆಟ್ಟಿ ಮಾತನಾಡಿ ‘ ಯೋಗ ಕೇವಲ ಒಂದು ಗಂಟೆಗೆ ಸೀಮಿತವಾಗಬಾರದು. ಯೋಗವು ನಮ್ಮ ಜೀವನದ ಒಂದು ಭಾಗವಾಗಬೇಕು ‘ ಎಂದರು.
ಪೂರ್ಣಿಮಾ ಆಸ್ಪತ್ರೆಯ ನಿರ್ದೇಶಕಿ ಡಾ ಪೂರ್ಣಿಮಾ ಮಾತನಾಡಿ ‘ ಅಲೋಪತಿ ಚಿಕಿತ್ಸಾ ಪದ್ಧತಿ ರೋಗಕ್ಕೆ ಪ್ರಾಥಮಿಕ ಪರಿಹಾರ ನೀಡಬಹುದು. ಆದರೆ ಶಾಶ್ವತ ಪರಿಹಾರ ನೀಡುವುದಿಲ್ಲ. ಆದರೆ ಯೋಗ, ಧ್ಯಾನ, ಪ್ರಾಣಾಯಾಮವನ್ನು ಜೀವನದಲ್ಲಿ ಅಳವಡಿಸಿಕೊಂಡೆರೆ ದೇಹಕ್ಕೆ ರೋಗ ಬರದಂತೆ ತಡೆಯಬಹುದಾಗಿದೆ ‘ ಎಂದು ತಿಳಿಸಿದರು.
ಹಿರಿಯ ಯೋಗ ಸಾಧಕರಾದ ಕೆ ಆರ್ ಜಗನ್ನಾಥಯ್ಯ ಶೆಟ್ಟಿ ಮಾತನಾಡಿ ‘ ಯೋಗವು ಹಲವು ರೋಗಗಳಿಗೆ ರಾಮಭಾಣವಾಗಿದೆ. ಹಲವಾರು ಕಾಯಿಲೆಗಳು ಯೋಗದಿಂದ ಗುಣಮುಖವಾಗಿದೆ. ಪ್ರತಿಯೊಬ್ಬರು ಯೋಗಾಭ್ಯಾಸದಲ್ಲಿ ತೊಡಗಿಸಿಕೊಳ್ಳಬೇಕು ‘ ಎಂದರು.
ಹಿರಿಯ ಯೋಗ ಸಾಧಕರಾದ ಕೆ ಅರ್ ಜಗನ್ನಾಥಯ್ಯ ಶೆಟ್ಟಿ, ಟಿ ಜಲೇಂದ್ರ ಕುಮಾರ್ ಅವರಿಗೆ ಯೋಗ ವಿಭೂಷಣ ಪ್ರಶಸ್ತಿ ಹಾಗೂ ನಾಗಮಲ್ಲು, ಎಚ್ ನಾಗರಾಜಪ್ಪ, ಕೆ ಚಂದ್ರು, ಕುಮುದಾ, ಎಚ್ ಪಿ ನವೀನ್ ಕುಮಾರ್ ಹಾಗೂ ನಿಷ್ಕಲ್ ಅವರಿಗೆ ಯೋಗ ಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಈ ಸುದ್ದಿ ಓದಿದ್ದೀರಾ? ಮೈಸೂರು | ಅರಣ್ಯ ಪಾಲಾದ ಲಕ್ಷ್ಮಣಪುರ ಗ್ರಾಮ : ಪರಿಹಾರವೂ ಇಲ್ಲ, ಪುನರ್ವಸತಿಯು ಇಲ್ಲ
ಕಾರ್ಯಕ್ರಮದಲ್ಲಿ ಹಿಮಾಲಯ ಪ್ರತಿಷ್ಠಾನದ ಅಧ್ಯಕ್ಷ ಎನ್ ಅನಂತ್, ಉಪಾಧ್ಯಕ್ಷರಾದ ಎನ್ ಪಶುಪತಿ, ರಾಮಕೃಷ್ಣ ಪರಮಹಂಸ ಸೇವಾ ಸಂಸ್ಥೆ ಕಾರ್ಯದರ್ಶಿ ಕೆಂಪ ಲಿಂಗರಾಜು, ಮೈಸೂರು ಯೋಗ ಒಕ್ಕೂಟದ ಕಾರ್ಯಾಧ್ಯಕ್ಷ ಬಿ ಶಾಂತಾರಾಂ ಇದ್ದರು.