ಮೈಸೂರು ಜಿಲ್ಲೆ ನಂಜನಗೂಡು ತಾಲೂಕು ವರುಣ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ತಾಂಡವಪುರ ಕೈಗಾರಿಕಾ ಪ್ರದೇಶದಲ್ಲಿರುವ ಐಟಿಸಿ ಕಂಪನಿಯ ಉತ್ಪಾದನಾ ಘಟಕವನ್ನು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದ್ದಾರೆ.
ಬಳಿಕ ಮಾತನಾಡಿದ ಮುಖ್ಯಮಂತ್ರಿ, ಹೆಚ್ಚು ಹೆಚ್ಚು ಕೈಗಾರಿಕೆಗಳು ಬಂದಷ್ಟು ಸ್ಥಳೀಯ ನಿರುದ್ಯೋಗಿ ಯುವಕರುಗಳಿಗೆ ಉದ್ಯೋಗ ದೊರಕುವಂತಾಗುತ್ತದೆ. ಆ ನಿಟ್ಟಿನಲ್ಲಿ ಕೈಗಾರಿಕೆಗಳು ಸ್ಥಳೀಯ ನಿರುದ್ಯೋಗಳಿಗೆ ಮೊದಲು ಆದ್ಯತೆಯನ್ನು ನೀಡಬೇಕು ಎಂದು ಕೈಗಾರಿಕೆಗಳ ಆಡಳಿತ ಮಂಡಳಿಯವರಿಗೆ ಸೂಚನೆ ನೀಡಿದರು.
ನಮ್ಮ ವರುಣ ಕ್ಷೇತ್ರಕ್ಕೆ ಸೇರುವ ತಾಂಡವಪುರ ಕೈಗಾರಿಕಾ ಪ್ರದೇಶದಲ್ಲಿ ಹಲವಾರು ಕಂಪನಿಗಳಿದ್ದು, ಭೂಮಿ ಕಳೆದುಕೊಂಡ ರೈತರ ಮಕ್ಕಳಿಗೆ ಮೊದಲು ಉದ್ಯೋಗ ನೀಡಬೇಕು. ನಂತರ ಸ್ಥಳೀಯ ನಿರುದ್ಯೋಗಳಿಗೆ ಆದ್ಯತೆ ನೀಡಬೇಕು. ಆಗ ಮಾತ್ರ ಸ್ಥಳೀಯ ನಿರುದ್ಯೋಗ ಸಮಸ್ಯೆ ಬಗೆಹರಿಯುತ್ತದೆ. ಈಗಾಗಲೇ ಹಲವಾರು ಬಾರಿ ಈ ಭಾಗದ ರೈತರು ಮತ್ತು ಸ್ಥಳೀಯರು, ನಮಗೆ ಈ ಭಾಗದಲ್ಲಿ ಉದ್ಯೋಗ ನೀಡುತ್ತಿಲ್ಲ ಎಂಬ ದೂರುಗಳು ಕೇಳಿಬಂದಿವೆ. ಇನ್ನು ಮುಂದೆಯಾದರು ಕೈಗಾರಿಕೆಗಳು ಸ್ಥಳೀಯರಿಗೆ ಮತ್ತು ರೈತರಿಗೆ ಮೊದಲು ಆದ್ಯತೆ ನೀಡಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ವರುಣ ಕ್ಷೇತ್ರದ ಆಶ್ರಯ ಸಮಿತಿ ಅಧ್ಯಕ್ಷ ಮತ್ತು ಮಾಜಿಶಾಸಕ ಯತೀಂದ್ರ ಸಿದ್ದರಾಮಯ್ಯ, ಐಟಿಸಿ ಸಂಸ್ಥೆ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಸಂಜೀವ್ ಪುರಿ, ಉಪಾಧ್ಯಕ್ಷ ನಜೀಬ್ ಆರಿಫ್, ಐಟಿಸಿ ಇಂಡಿವಿಷನ್ ಲಿ ಹಾಗೂ ಅಗ್ರಿ ಗ್ರೂಪ್ ಮುಖ್ಯಸ್ಥ ಎಸ್.ಶಿವಕುಮಾರ್, ಸಿಇಒ ಎಚ್.ಎನ್. ರಾಮಪ್ರಸಾದ್, ಸಿ. ಬಸವೇಗೌಡ, ಜಿ.ಪಂ ಮಾಜಿ ಅಧ್ಯಕ್ಷ ಕೆ. ಮರಿಗೌಡ, ಬಿ.ಎಂ. ರಾಮು ಗ್ರಾ.ಪಂ ಉಪಾಧ್ಯಕ್ಷ ಬಿ. ಶಿವಣ್ಣ ಸೇರಿದಂತೆ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.