ಭತ್ತ ತುಂಬಿದ ಲಾರಿಯೊಂದು ತೆರಳುತ್ತಿದ್ದಾಗ ಸೇತುವೆ ಕುಸಿದು ಬಿದ್ದಿರುವ ಘಟನೆ ಮೈಸೂರು ಜಿಲ್ಲೆಯ ಸರಗೂರು ತಾಲೂಕಿನ ಹಾಲುಗಡದಲ್ಲಿ ನಡೆದಿದೆ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಚಾಲಕ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ಹಾಲುಗಡ ಬಳಿ ಕಬಿಸಿ ಬಲದಂಡೆ ನಾಲೆಯ ಮೇಲೆ ನಿರ್ಮಿಸಲಾಗಿದ್ದ ಸೇತುವೆಯು ಭತ್ತದ ಮೂಟೆಗಳನ್ನು ಹೊತ್ತ ಲಾರಿ ಸಾಗುತ್ತಿದ್ದಾಗ ಕುಸಿದು ಬಿದ್ದಿದೆ. ಈ ಸೇತುವೆಯು ಚಿಕ್ಕದೇವಮ್ಮನ ಬೆಟ್ಟ ಮತ್ತು ವಿವಿಧ ಗ್ರಾಮಗಳಿಗೆ ತೆರಳುವ ಪ್ರಮುಖ ರಸ್ತೆಯ ಭಾಗವಾಗಿತ್ತು. ಇದೀಗ, ವಿವಿಧ ಗ್ರಾಮಗಳ ನಡುವಿನ ಸಂಪರ್ಕಕೊಂಡಿ ಕಳಚಿದಂತಾಗಿದೆ.
ಭತ್ತದ ಮೂಟೆಗಳು ತುಂಬಿದ್ದ ಲಾರಿಯು ಸರಗೂರು ಬಳಿಯ ಇಟ್ನ ಗ್ರಾಮದಿಂದ ತಮಿಳುನಾಡಿಗೆ ತೆರಳುತ್ತಿತ್ತು. ಲಾರಿಯು ಸೇತುವೆ ಮೇಲೆ ಬಂದಾಗ, ಸೇತುವೆ ಕುಸಿದಿದೆ. ಲಾರಿ ನಾಲೆಗೆ ಜಾರಿದೆ. ಅದೃಷ್ಟವಶಾತ್, ಚಾಲಕಿಗೆ ಯಾವುದೇ ಅಪಾಯವಾಗಿಲ್ಲ. ಲಾರಿಗೂ ಹೆಚ್ಚಿನ ಹಾನಿಯಾಗಿಲ್ಲ ಎಂದು ವರದಿಯಾಗಿದೆ.
ಸೇತುವೆಯು ಹಲವು ದಶಕಗಳಷ್ಟು ಹಳೆಯದಾಗಿದ್ದು, ದುರಸ್ತಿ ಮಾಡಿಸುವಂತೆ ಗ್ರಾಮಸ್ಥರು ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರು. ಆದರೂ, ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಪರಿಣಾಮವಾಗಿ, ಈ ಅವಘಡ ನಡೆದಿದೆ ಎಂದು ಸ್ಥಳೀಯರು ಅಸಮಧಾನ ವ್ಯಕ್ತಪಡಿಸಿದ್ದಾರೆ.
ಘಟನಾ ಸ್ಥಳಕ್ಕೆ ಕಬಿನಿ ಜಲಾಶಯದ ಕಾರ್ಯಪಾಲಕ ಅಭಿಯಂತರ ಕೆ ಉಷಾ ಹಾಗೂ ಸರಗೂರು ಪೊಲೀಸ್ ಠಾಣೆಯ ಎಸ್‌ಐ ಕಿರಣ್ ಕುಮಾರ್ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.
ಈ ವರದಿ ಓದಿದ್ದೀರಾ?: ಯುವತಿಯ ಅಪಹರಣ- ಪ್ರತ್ಯಕ್ಷ ಸಾಕ್ಷಿಯಿಂದ ಎಸ್‌ಐಟಿಗೆ ದೂರು; ಅಲ್ಲಿದ್ದ ಆ ವ್ಯಕ್ತಿ ಯಾರು ಗೊತ್ತೇ?
“ಹಳೆಯದಾದ ಸೇತುವೆಯ ಮೇಲೆ ಭಾರೀ ವಾಹನಗಳು ಸಂಚರಿಸದಂತೆ ಎಚ್ಚರಿಕೆ ವಹಿಸಲು ಗ್ರಾಮಸ್ಥರು ಮತ್ತು ರೈತರಿಗೆ ಸೂಚಿಸಿದ್ದೆವು. ಆದರೂ, ದೊಡ್ಡ ವಾಹನಗಳು ಇದೇ ಸೇತುವೆ ಮೇಲೆ ಸಂಚರಿಸುತ್ತಿವೆ. ಅದಕ್ಕಾಗಿ, ವಾಹನಗಳನ್ನು ತಡೆಯಲು ಬ್ಯಾರಿಕೇಡ್‌ಗಳನ್ನು ಹಾಕಲಾಗಿತ್ತು. ಆದರೆ, ಲಾರಿ ಚಾಲಕರು ರಾತ್ರಿ ವೇಳೆ, ಬ್ಯಾರಿಕೇಡ್‌ಗಳನ್ನು ಸರಿಸಿ, ಸೇತುವೆ ಮೇಲೆ ಲಾರಿಗಳನ್ನು ಚಲಾಯಿಸುತ್ತಿದ್ದಾರೆ” ಎಂದು ಉಷಾ ಆರೋಪಿಸಿದ್ದಾರೆ.
“ಹೊಸ ಸೇತುವೆ ನಿರ್ಮಾಣಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುತ್ತದೆ ರೈತರ ಅನುಕೂಲಕ್ಕೆ ತಾತ್ಕಾಲಿಕವಾಗಿ ಬೇರೆ ಸೇತುವೆ ನಿರ್ಮಾಣ ಮಾಡಲು ಮುಂದಾಗುತ್ತೇವೆ” ಎಂದು ಹೇಳಿದ್ದಾರೆ.