ನಿರಂತರ ಕಿರುಕುಳದಿಂದ ಬೇಸತ್ತು ಡೆತ್ ನೋಟ್ ಬರೆದು ಹುಲ್ಲಹಳ್ಳಿ ನಾಡಕಚೇರಿಯಲ್ಲಿ ಆತ್ಮಹತ್ಯೆಗೆ ಶರಣಾದ ಕಂಪ್ಯೂಟರ್ ಆಪರೇಟರ್ ಪರಮೇಶ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪ ಎದುರಿಸುತ್ತಿರುವ ಉಪ ತಹಶೀಲ್ದಾರ್ ಶಿವಕುಮಾರ್ ಅವರನ್ನ ಅಮಾನತು ಮಾಡಲಾಗಿದೆ. ಪ್ರಾದೇಶಿಕ ಆಯುಕ್ತ ಡಾ. ಜಿ ಸಿ ಪ್ರಕಾಶ್ ಅವರು ಅಮಾನತುಗೊಳಿಸಿ, ಆದೇಶ ಹೊರಡಿಸಿದ್ದಾರೆ.
ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ನಾಡಕಚೇರಿಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿರುವ ಪರಮೇಶ್ ಅವರು ಜನವರಿ 7ರ ಭಾನುವಾರದಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ತನ್ನ ಸಾವಿಗೆ ಉಪ ತಹಶೀಲ್ದಾರ್ ಶಿವಕುಮಾರ್ ನೀಡುತ್ತಿರುವ ಕಿರುಕುಳ ಕಾರಣವೆಂದು ಡೆತ್ ನೋಟ್‌ನಲ್ಲಿ ಬರೆದು ವಾಟ್ಸಪ್ ಸ್ಟೇಟಸ್ ಹಾಕಿ ವಿಷ ಸೇವಿಸಿದ್ದರು. ಚಿಕಿತ್ಸೆಗಾಗಿ ಮೈಸೂರಿನ ಕೆ ಆರ್ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಪರಮೇಶ್ ಮೃತಪಟ್ಟಿದ್ದಾರೆ.
ಈ ಸುದ್ದಿ ಓದಿದ್ದೀರಾ? ಧಾರವಾಡ | ಸಹಾಯಕ ಪ್ರಾಧ್ಯಾಪಕ ಹುದ್ದೆ; ಆರು ಸಾವಿರ ಮಂದಿ ನೇಮಕಕ್ಕೆ ಅಭ್ಯರ್ಥಿಗಳ ಆಗ್ರಹ
ನಂಜನಗೂಡು ಶಾಸಕ ದರ್ಶನ್ ಧ್ರವನಾರಾಯಣ್ ಹಾಗೂ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಅವರು ಸೋಮವಾರ ಶವಾಗಾರಕ್ಕೆ ಭೇಟಿ ನೀಡಿದ್ದರು. ಈ ವೇಳೆ ಉಪತಹಶೀಲ್ದಾರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಮೃತರ ಕುಟುಂಬಸ್ಥರು ಒತ್ತಾಯಿಸಿದ್ದರು. ಅಲ್ಲದೆ ಶಾಸಕ ದರ್ಶನ್ ಧೃವನಾರಾಯಣ್ ಕೂಡ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದ್ದರು.
ಈ ಹಿನ್ನೆಲೆಯಲ್ಲಿ ಪ್ರಾದೇಶಿಕ ಆಯುಕ್ತ ಡಾ. ಜಿ ಸಿ ಪ್ರಕಾಶ್ ಅವರು ಉಪತಹಶೀಲ್ದಾರ್ ಶಿವಕುಮಾರ್ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.