ಮೈಸೂರು ಮತ್ತು ಮಂಡ್ಯದಲ್ಲಿ ಆನೆಗಳು, ಚಿರತೆಗಳು ಮತ್ತು ಹುಲಿಗಳ ಹಾವಳಿ ಹೆಚ್ಚಾಗಿದೆ. ಮಾನವ-ಪ್ರಾಣಿ ಸಂಘರ್ಷವನ್ನು ತಡೆಯಲು ಕಳೆದ ಎರಡು ತಿಂಗಳಲ್ಲಿ ನಡೆದ ಪ್ರಾಣಿಗಳ ರಕ್ಷಣಾ ಕಾರ್ಯಾಚರಣೆಯಿಂದಾಗಿ ಅರಣ್ಯ ಅಧಿಕಾರಿಗಳು ಸವಾಲಿನ ಪರಿಸ್ಥಿತಿ ಎದುರಿಸಿದ್ದಾರೆ.
ಮೈಸೂರು ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ಮಾಲತಿ ಪ್ರಿಯಾ ಮಾಧ್ಯಗಳಿಗೆ ಮಾತನಾಡಿ, “ಆನೆ ಕಾರ್ಯಪಡೆ ಮತ್ತು ಚಿರತೆ ಕಾರ್ಯಪಡೆಯ ಸಿಬ್ಬಂದಿ ಮತ್ತು ಸ್ಥಳೀಯ ಅರಣ್ಯ ಅಧಿಕಾರಿಗಳು ದಣಿದಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಮಾನವ ಆವಾಸಸ್ಥಾನಗಳ ಬಳಿ ಕಂಡುಬರುವ ಕಾಡು ಪ್ರಾಣಿಗಳಿಂದ ನಿವಾಸಿಗಳನ್ನು ರಕ್ಷಿಸಲು ಇಲಾಖೆ ತರಬೇತಿಯ ಮೂಲಕ ಅವರನ್ನು ಪ್ರೋತ್ಸಾಹಿಸುತ್ತಿದೆ” ಎಂದು ತಿಳಿಸಿದ್ದಾರೆ.
“ಚಿರತೆ ಮತ್ತು ಆನೆ ಕಾರ್ಯಾಪಡೆಗಳಲ್ಲಿ ಸಹಾಯಕ ಸಿಬ್ಬಂದಿ ಸೇರಿದಂತೆ ಸುಮಾರು 100 ಮಂದಿ ಸಿಬ್ಬಂದಿ ಇದ್ದಾರೆ. ಅವರೆಲ್ಲರೂ ಸವಾಲುಗಳ ನಡುವೆಯೂ ತೀವ್ರವಾಗಿ ಕೆಲಸ ಮಾಡುತ್ತಿದ್ದಾರೆ. ಅವರು ಸಂಘರ್ಷದ ಪ್ರದೇಶಗಳಲ್ಲಿ ಹಗಲಿರುಳು ಅನೇಕ ದಿನಗಳ ಕಾಲ ಉಳಿಯುವ ಮೂಲಕ ಕಾರ್ಯಾಚರಣೆ ನಡೆಸಿದ್ದಾರೆ. ಇದೆಲ್ಲವೂ ಕಾಡು ಪ್ರಾಣಿಗಳನ್ನು ರಕ್ಷಣೆ ಮತ್ತು ಮಾನವ-ಪ್ರಾಣಿ ಸಂಘರ್ಷವನ್ನು ತಡೆಗಟ್ಟಲು ಸಿಬ್ಬಂದಿಗಳು ತಮ್ಮ ಶಕ್ತಿ ಮೀರಿ ಕೆಲಸ ಮಾಡಿದ್ದಾರೆ” ಎಂದು ತಿಳಿಸಿದ್ದಾರೆ.
“ಮೈಸೂರು ಹೊರವಲಯದ ಬ್ಯಾತಹಳ್ಳಿಯಲ್ಲಿ ಟಿ-7 ಎಂಬ ಹುಲಿ ಪತ್ತೆಯಾದ ಒಂದು ತಿಂಗಳ ಕಾರ್ಯಾಚರಣೆಯ ನಂತರ, ಸಿಬ್ಬಂದಿ ನವೆಂಬರ್ ಕೊನೆಯ ವಾರದಿಂದ ಸುಮಾರು ಒಂದು ತಿಂಗಳಿಗೂ ಹೆಚ್ಚು ಕಾಲ ಕಳೆದರು. ಈಗ ಶ್ರೀರಂಗಪಟ್ಟಣದ ಬಳಿ ಮತ್ತೊಂದು ಹುಲಿ ಪತ್ತೆಯಾಗಿದೆ” ಎಂದರು.
“ಮಾನವ ಆವಾಸಸ್ಥಾನಗಳ ಬಳಿ ಚಿರತೆಗಳು, ಹುಲಿಗಳು ಮತ್ತು ಆನೆಗಳನ್ನು ನೋಡುವುದು ಗ್ರಾಮಸ್ಥರನ್ನು ಮಾತ್ರವಲ್ಲದೆ ಅರಣ್ಯ ಸಿಬ್ಬಂದಿಯನ್ನೂ ಕಾಡುತ್ತದೆ. ಏಕೆಂದರೆ ಕಾರ್ಯಾಚರಣೆ ವಿಳಂಬವಾದರೆ ಮಾನವ ಜೀವಕ್ಕೆ ಅಪಾಯವನ್ನುಂಟು ಮಾಡುತ್ತದೆ. ಹಾಗಾಗಿ ಇಡೀ ತಂಡದ ಬೆಂಬಲದೊಂದಿಗೆ ನಾವು ಇತ್ತೀಚಿನ ಸವಾಲುಗಳನ್ನು ಪರಿಣಾಮಕಾರಿಯಾಗಿ ನಿಭಾಯಿಸುತ್ತಿದ್ದೇವೆ” ಎಂದು ಮಾಲತಿ ಹೇಳಿದರು.
“ಮಂಡ್ಯದ ಶ್ರೀರಂಗಪಟ್ಟಣದ ಬಳಿ ಹುಲಿ ಕಾಣಿಸಿಕೊಂಡ ಎರಡು ದಿನಗಳ ಬಳಿಕ, ಹುಲಿಯನ್ನು ಕ್ಯಾಮೆರಾ ಟ್ರ್ಯಾಪ್‌ನಲ್ಲಿ ಸೆರೆಹಿಡಿಯಲಾಗಿದೆ. ಆ ಹುಲಿ ಟಿ-9 ಎಂಬ ಸುಮಾರು ಎರಡೂವರೆ ವರ್ಷದ ಹುಲಿಯಾಗಿದೆ” ಎಂದು ಮಾಲತಿ ದೃಢಪಡಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಹೆದ್ದಾರಿ ಬದಿ ತ್ಯಾಜ್ಯಕ್ಕೆ ಬೆಂಕಿ; ಸಾಲು ಮರಗಳಿಗೆ ಕಂಟಕ
“ಮಂಗಳವಾರ ಚನ್ನಹಳ್ಳಿ ಬಳಿ ಹುಲಿ ಕಾಣಿಸಿಕೊಂಡಿತ್ತು. ಈ ಹುಲಿಯನ್ನು ಬಲೆಗೆ ಬೀಳಿಸಲು ನಾವು ನಮ್ಮ ಅತ್ಯುತ್ತಮ ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ತುಮಕೂರು ಪಂಜರವನ್ನು ಸ್ಥಾಪಿಸಲಾಗುತ್ತಿದ್ದು, ಹುಲಿಯನ್ನು ಬಲೆಗೆ ಬೀಳಿಸಲು ಬಲೆಗಳನ್ನು ಬಳಸಲಾಗುವುದು” ಎಂದು ಅವರು ಹೇಳಿದರು.
“ಹುಲಿಯ ಚಲನೆಯನ್ನು ಗಮನಿಸಲು ಥರ್ಮಲ್ ಡ್ರೋನ್ ಬಳಸಲಾಗುತ್ತಿದೆ. ಇದರಿಂದ ಅದು ರಕ್ಷಣಾ ಕಾರ್ಯಾಚರಣೆಗೆ ಸಹಾಯ ಮಾಡುತ್ತದೆ. ಗೆಂಡೆಹೊಸಹಳ್ಳಿ, ಬಿದರಹಳ್ಳಿಹುಂಡಿ, ಮಹದೇವಪುರ, ಚನ್ನಹಳ್ಳಿ ಗ್ರಾಮಸ್ಥರಿಗೆ ಹುಲಿ ಇರುವ ಬಗ್ಗೆ ಮಾಹಿತಿ ನೀಡಲಾಗಿದೆ. ಹುಲಿಯ ಗುರುತುಗಳು ಪತ್ತೆಯಾದ ಬಳಿಕ ಅಪಾಯವನ್ನು ತಪ್ಪಿಸಲು ಮುನ್ನೆಚ್ಚರಿಕೆ ತೆಗೆದುಕೊಳ್ಳಲು ಸೂಚಿಸಲಾಗಿದೆ” ಎಂದು ಸಿಎಫ್ ಹೇಳಿದರು.