ಈ ದಿನ ಸಂಪಾದಕೀಯ | ಅಸ್ಪೃಶ್ಯತೆ, ಮೌಢ್ಯ, ಜಾತೀಯತೆ ತೊಲಗಿಸಿ ಬಸವಣ್ಣನಿಗೆ ನಿಜ ಗೌರವ ಸಲ್ಲಿಸೋಣ

Date:

ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದರೆ ಸಾಲದು, ಬಸವಣ್ಣನವರ ಅವರ ಆಶಯಗಳನ್ನು ಕಾರ್ಯರೂಪಕ್ಕೆ ತರಬೇಕು. ಮೌಢ್ಯ, ಅಸ್ಪೃಶ್ಯತೆ ನಿವಾರಣೆ, ಸಮಸಮಾಜ ನಿರ್ಮಾಣವಾಗಬೇಕು. ಸಿದ್ದರಾಮಯ್ಯ ಸರ್ಕಾರ ಈ ದಿಸೆಯಲ್ಲಿ ಶ್ರಮಿಸಬೇಕು

 

ಜಗಜ್ಯೋತಿ ಬಸವಣ್ಣನವರನ್ನು ಕರ್ನಾಟಕದ “ಸಾಂಸ್ಕೃತಿಕ ನಾಯಕ” ಎಂದು ನಿನ್ನೆಯಷ್ಟೇ ಸಿದ್ದರಾಮಯ್ಯ ಸರ್ಕಾರ ಘೋಷಿಸಿದೆ. ಇದು ರಾಜ್ಯದ ಪಾಲಿಗೆ ಅತ್ಯಂತ ಖುಷಿಯ ಗಳಿಗೆ. ಬಹುಶಃ ಈ ನಿರ್ಧಾರವನ್ನು ಯಾರೊಬ್ಬರೂ ತಿರಸ್ಕರಿಸುವುದಿರಲಿ ಅಪಸ್ವರವನ್ನೂ ಎತ್ತಲಾರರು. ಅಷ್ಟರ ಮಟ್ಟಿಗೆ ಬಸವಣ್ಣ ಈ ಮಣ್ಣಿನ ಅಸ್ಮಿತೆಯಾಗಿ ಸಾಂಸ್ಕೃತಿಕ ನಾಯಕರಾಗಿ ಎಂದೋ ಜನರ ಹೃದಯ ಸಿಂಹಾಸನವೇರಿದ್ದಾರೆ. ಈಗ ಅದಕ್ಕೊಂದು ಸರ್ಕಾರಿ ಮೊಹರು ಬಿದ್ದಿದೆಯಷ್ಟೇ.

12ನೇ ಶತಮಾನದಲ್ಲೇ ಈ ನೆಲದಲ್ಲಿ ಪ್ರಜಾಪ್ರಭುತ್ವದ ಬೀಜ ಬಿತ್ತಿದ್ದ, ಮಹಾ ಮಾನವತಾವಾದಿ, ಮೌಢ್ಯ-ಅಸ್ಪೃಶ್ಯತೆ, ಜಾತೀಯತೆಯ ವಿರುದ್ಧ ಸಮರ ಸಾರಿದ್ದ ವಚನಗಳ ಮೂಲಕ ತನ್ನ ತತ್ವಗಳನ್ನು ಜನಮಾನಸಕ್ಕೆ ದಾಟಿಸಿದ ಬಸವಣ್ಣನಲ್ಲದೇ ಬೇರಾರು ಈ ನೆಲದ ಸಾಂಸ್ಕೃತಿಕ ನಾಯಕರಾಗಲು ಸಾಧ್ಯ? ಬ್ರಾಹ್ಮಣ ಕುಟುಂಬದಲ್ಲಿ ಜನಿಸಿ ಅಲ್ಲಿನ ಜಾತಿಪದ್ಧತಿ, ಅನಿಷ್ಟ ಆಚರಣೆಗಳ ವಿರುದ್ಧ ಸೆಟೆದು ನಿಂತು ಲಿಂಗಾಯತವನ್ನು ಸಾರಿದವರು ಬಸವಣ್ಣ. ಅವರ ಅನುಯಾಯಿಗಳೆನಿಸಿಕೊಂಡವರೇ ಇಂದು ಸನಾತನದ ಅಸಮಾನತೆಯ ಪೋಷಕರಾಗಿದ್ದಾರೆ. ಕೋಮುವಾದ, ಮೌಢ್ಯ, ಜಾತೀಯತೆಗೆ ಇವರು ನೀರು ಗೊಬ್ಬರ ಎರೆಯುತ್ತಿರುವುದು ಬಹು ದೊಡ್ಡ ದುರಂತವೇ ಸರಿ. ಲಿಂಗಾಯತರಲ್ಲಿ ಬಹುತೇಕರು ಇಂದು ‘ಧರ್ಮ ದಂಗಲ್‌’ ನ ಸೂತ್ರಧಾರರಾಗಿದ್ದಾರೆ.

ಬಸವಣ್ಣನ ಹೆಸರನ್ನು ಸ್ವಾರ್ಥಕ್ಕಾಗಿ ಬಳಕೆಯಾಗುತ್ತಿದೆ. ಆತನ ನಡೆನುಡಿಗಳನ್ನು ಅವಮಾನಿಸುವ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ. ಬಸವಣ್ಣನನ್ನು ರಾಜಕೀಯ ದಾಳವಾಗಿ ಬಳಕೆ ಮಾಡಲಾಗುತ್ತಿದೆ. ಈ ಸರಿ ಹೊತ್ತಿನಲ್ಲಿ ಸರ್ಕಾರ ಸಾಂಸ್ಕೃತಿಕ ನಾಯಕನನ್ನಾಗಿ ಘೋಷಿಸಿದ್ದೇನೋ ಸರಿ. ತನ್ನ ನಡೆ, ನುಡಿ, ಆಡಳಿತದಲ್ಲಿ ಬಸವತತ್ವವನ್ನು ಅಳವಡಿಕೊಳ್ಳುವುದಾಗಿಯೂ ಹೇಳಿಕೊಂಡಿದೆ. “ಇದು ಕೇವಲ ಘೋಷಣೆ ಅಲ್ಲ, ಬಸವತತ್ವದ ಮೇಲಿರುವ ನಮ್ಮ ನಂಬಿಕೆ ಮತ್ತು ಬದ್ದತೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿರುವುದು ಸ್ವಾಗತಾರ್ಹ. ಆದರೆ, ಈ “ಬದ್ಧತೆ” ಎಂಬ ಪದ ರಾಜಕಾರಣಿಗಳ ಬಾಯಲ್ಲಿ ಬಂದರೆ ಅದನ್ನು ಗಂಭೀರವಾಗಿ ಪರಿಗಣಿಸಬಹುದೇ? ಸಚ್ಚಾರಿತ್ರ್ಯದ, ಸ್ವಾರ್ಥರಹಿತ, ಶುದ್ಧಹಸ್ತದ ರಾಜಕಾರಣಿಗಳನ್ನು ಎಲ್ಲಿಂದ ಹುಡುಕಿ ತರುವುದು? ರಾಜಕಾರಣವನ್ನು ದುಷ್ಟರ ಕೂಟ ಮುಷ್ಠಿಗೆ ತೆಗೆದುಕೊಂಡಿರುವಾಗ, ಸರ್ಕಾರಗಳೆಂಬುವು ಭ್ರಷ್ಟಾಚಾರದ ಆಡಂಬೊಲಗಳಾಗಿರುವಾಗ ಬಸವತತ್ವವನ್ನು ಸರ್ಕಾರದ ನಡವಳಿಕೆ, ನೀತಿ ನಿರೂಪಣೆಗಳಲ್ಲಿ ಜಾರಿಗೆ ತರುವುದು ದೂರದ ಮಾತು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಪ್ರಧಾನಿ ನರೇಂದ್ರ ಮೋದಿಯವರೂ, ಗೃಹಸಚಿವ ಅಮಿತ್‌ ಶಾ ಅವರೂ ಬಸವಣ್ಣನನ್ನು ಹಾಡಿ ಹೊಗಳಿದವರೇ. ಚುನಾವಣಾ ಭಾಷಣಗಳಲ್ಲಿ ಬಸವಣ್ಣನ ವಚನಗಳನ್ನು ತೊದಲಿದವರು ನಂತರ ಬಸವತತ್ವಕ್ಕೆ ವಿರುದ್ಧವಾಗಿ ನಡೆದುಕೊಂಡವರು. ಇವರಿಗೂ ಬಸವಣ್ಣ ʼಶ್ರೇಷ್ಠ ಸಂದೇಶʼ ಎಂಬುದಷ್ಟೇ ಗೊತ್ತು. ಆ ಹೆಸರಷ್ಟೇ ಅವರಿಗೆ ಬೇಕು. ಲಿಂಗಾಯತ ಸಮುದಾಯದ ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದಲ್ಲಿ ನಡೆದ ಕೋಮು ಸಂಘರ್ಷ, ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ, ಬಹಿಷ್ಕಾರದಂತಹ ಅಮಾನವೀಯ ಘಟನೆಗಳಿಗೆ ಕಣ್ಣುಮುಚ್ಚಿ ಕುಳಿತಿದ್ದರು. ಕ್ರಿಯೆಗೆ ಪ್ರತಿಕ್ರಿಯೆ ಎಂಬ ಸಮರ್ಥನೆ ಕೊಟ್ಟಿರುವುದು ಇದಕ್ಕೆ ಸಾಕ್ಷಿ. ಅವರಷ್ಟೇ ಅಲ್ಲ ಬಸವಣ್ಣ ಜನಿಸಿ ಬದುಕಿ ಬಾಳಿದ ನೆಲದಿಂದ ಬಂದ ಹಲವು ರಾಜಕಾರಣಿಗಳು ಇಂದಿಗೂ ಬಸವತತ್ವಕ್ಕೆ ತದ್ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ಈ ಮಾತಿಗೆ ಪಕ್ಷಭೇದವಿಲ್ಲ. ಇಂತಹ ಸಂದರ್ಭದಲ್ಲಿ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಕೇವಲ ಘೋಷಿಸಿದರೆ ಸಾಕೇ?

12ನೇ ಶತಮಾನದಲ್ಲಿ ದಲಿತ- ‘ಮೇಲ್ಜಾತಿ’ಯ ನಡುವೆ ವಿವಾಹ ಏರ್ಪಡಿಸಿ ಕ್ರಾಂತಿಕಾರಿ ಹೆಜ್ಜೆ ಇಟ್ಟವರು ಬಸವಣ್ಣ. ಈ ನೆಲದಲ್ಲಿ ಈಗಲೂ ಬೇರೆ ಜಾತಿ-ಧರ್ಮದ ಯುವಕ-ಯುವತಿ ಪ್ರೀತಿಸಿದರೆ, ಹೆತ್ತವರೇ ಕೊಲೆ ಮಾಡುವುದು, ಊರಿಂದ ಬಹಿಷ್ಕರಿಸುವುದು ಮುಂತಾದ ವಿಕೃತಿಗಳು ಮುಲಾಜಿಲ್ಲದೇ ನಡೆಯುತ್ತಿವೆ. ಅದನ್ನು ತಡೆಯಲು ಸರ್ಕಾರ, ಸಮಾಜ ವಿಫಲವಾಗಿದೆ. ಈ ನಡವಳಿಕೆ ಬಸವಣ್ಣನಿಗೆ ಮಾಡುವ ಅವಮಾನವಲ್ಲವೇ?

ನುಡಿದರೆ ಮುತ್ತಿನ ಹಾರದಂತಿರಬೇಕು!
ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು!
ನುಡಿದರೆ ಸ್ಫಟಿಕದ ಶಲಾಕೆಯಂತಿರಬೇಕು!
ನುಡಿದರೆ ಲಿಂಗ ಮೆಚ್ಚಿ ಅಹುದಹುದೆನಬೇಕು! ಎಂದಿದ್ದರು ಬಸವಣ್ಣ.
ಇಂದಿನ ಬಹುತೇಕ ರಾಜಕಾರಣಿಗಳ ನುಡಿಮುತ್ತುಗಳನ್ನು ಕೇಳಿಸಿಕೊಳ್ಳುವುದೆಂದರೆ ಅದು ಕಾದ ಸೀಸವನ್ನು ಕಿವಿಗೆ ಸುರಿದುಕೊಂಡಂತೆಯೇ ಸರಿ. ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದರೆ ಸಾಲದು, ಬಸವಣ್ಣನವರ ಅವರ ಆಶಯಗಳನ್ನು ಕಾರ್ಯರೂಪಕ್ಕೆ ತರಬೇಕು. ಮೌಢ್ಯ, ಅಸ್ಪೃಶ್ಯತೆ ನಿವಾರಣೆ, ಸಮಸಮಾಜ ನಿರ್ಮಾಣವಾಗಬೇಕು. ಸಿದ್ದರಾಮಯ್ಯ ಸರ್ಕಾರ ಈ ದಿಸೆಯಲ್ಲಿ ಶ್ರಮಿಸಬೇಕು.

ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ರೈತರ ವಿರುದ್ಧ ʼರಾಷ್ಟ್ರೀಯ ಭದ್ರತಾ ಕಾಯ್ದೆʼ ಅಸ್ತ್ರ ಪ್ರಯೋಗ; ಪ್ರಜಾಪ್ರಭುತ್ವದ ಅಣಕ

ಈಗಾಗಲೇ ಮೋದಿಯವರ ಮಾತು ನಂಬಿ ಅದಾನಿ ಕಂಪನಿ ದೇಶದೆಲ್ಲೆಡೆ ಗೋದಾಮುಗಳನ್ನು ನಿರ್ಮಾಣ...

ಈ ದಿನ ಸಂಪಾದಕೀಯ | ಬಾಂಡ್ ಎಂಬ ಬಿಜೆಪಿ ಭ್ರಷ್ಟಾಚಾರದ ಬಗ್ಗೆ ಜನ ಪ್ರಶ್ನಿಸಬಾರದೇ?

ಬಿಜೆಪಿಯ ಹತ್ತು ವರ್ಷಗಳ ಆಡಳಿತದಲ್ಲಿ ಬೆಲೆ ಏರಿಕೆ, ನಿರುದ್ಯೋಗ ಮತ್ತು ಹಣದುಬ್ಬರದಿಂದ...

ಈ ದಿನ ಸಂಪಾದಕೀಯ | ಮುಸ್ಲಿಮರ ತುಷ್ಟೀಕರಣ, ಬಿಜೆಪಿ ಮತ್ತು ಗೋದಿ ಮೀಡಿಯಾ

ಬಿಜೆಪಿ, ಜೆಡಿಎಸ್ ಅಥವಾ ಕಾಂಗ್ರೆಸ್- ಯಾವ ಪಕ್ಷವಾದರೂ, ಅಧಿಕಾರಕ್ಕೆ ಬಂದಾಗ ಎಲ್ಲರನ್ನೂ...

ಈ ದಿನ ಸಂಪಾದಕೀಯ | ಆರಕ್ಷಕ ಇಲಾಖೆ ಯಾತಕ್ಕಾಗಿ, ಪೊಲೀಸರು ಇರುವುದು ಯಾರ ರಕ್ಷಣೆಗಾಗಿ?

ಪೊಲೀಸ್ ಇಲಾಖೆಯಲ್ಲಿ ಭ್ರಷ್ಟಾಚಾರ ಬೇರೂರಿದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ಸತ್ಯ. ಸರಕಾರ...