ಮೈಸೂರು ನಗರ ಪ್ರದೇಶಗಳಲ್ಲಿ ನಗರ ಸಂಚಾರ ಪೊಲೀಸರಿಂದ ವಾಹನ ತಪಾಸಣೆ ನಡೆಯುತ್ತಿದೆ. ನಗರ ಸಂಚಾರ ಪೊಲೀಸರು ತಪಾಸಣೆ ವೇಳೆ ಎಲ್ಲ ವಾಹನಗಳನ್ನು ತಡೆದು, ಗಂಟೆಗಟ್ಟಲೆ ನಿಲ್ಲಿಸಿಕೊಂಡು ಸಮಯ ವ್ಯರ್ಥ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.
“ನಗರದ ಸಬರ್ ರಸ್ತೆ, ಅರಮನೆ ರಸ್ತೆ ಆರ್ ಗೇಟ್ ಬಳಿ ಸಂಚಾರ ಪೊಲೀಸರ ದಂಡು ಜಮಾಯಿಸಿದ್ದು, ತಪಾಸಣೆ ಹೆಸರಿನಲ್ಲಿ ಎಲ್ಲ ವಾಹನಗಳನ್ನು ತಡೆದು ಹಣ ವಸೂಲಿ ಮಾಡುತ್ತಿದ್ದಾರೆ. ಮೇಲ್ನೋಟಕ್ಕೆ ಹಗಲು ದರೋಡೆಯಂತೆ ಕಂಡುಬರುತ್ತಿದೆ” ಎಂದು ಸ್ಥಳೀಯ ವಾಹನ ಸವಾರರು ಆರೋಪಿಸಿದ್ದಾರೆ.

“ಪರೀಕ್ಷೆ ಮುಗಿಸಿಕೊಂಡು, ಮುಂದಿನ ಪರೀಕ್ಷೆಗೆ ಕೆಲವು ನೋಟ್ಸ್‌ಗಳನ್ನು ತೆಗೆದುಕೊಳ್ಳಲು ಅರಮನೆ ರಸ್ತೆ ಮಾರ್ಗದಲ್ಲಿ ಹೋಗುತ್ತಿದ್ದಾಗ ಆರ್ ಗೇಟ್ ಬಳಿ ತನ್ನ ವಾಹನವನ್ನು ತಡೆದು ಗಂಟೆ ಗಟ್ಟಲೆ ನಿಲ್ಲಿಸಿಕೊಂಡಿದ್ದಾರೆ. ದಾಖಲೆಗಳೆಲ್ಲವನ್ನು ತೋರಿಸಿದರೂ ಯಾವಾಗಲೋ ಸಿಗ್ನಲ್ ಜಂಪ್ ಮಾಡಿದ್ದೀಯ ಎಂದು ಹೇಳಿ ಗಾಡಿ ತಡೆದಿದ್ದಾರೆ” ಎಂದು ವಿದ್ಯಾರ್ಥಿಯೊಬ್ಬರು ಈ ದಿನ. ಕಾಮ್‌ಗೆ ತಿಳಿಸಿದ್ದಾರೆ.
“ಹಣವಿಲ್ಲ ಎಂದು ಹೇಳಿದರೂ ಬಿಡದೆ ತಡೆ ಹಿಡಿದಿದ್ದು, ಕೊನೆಗೆ ₹500 ಹಣ ಕಸಿದುಕೊಂಡು ಕಳುಹಿಸಿದರು. ನಾನು ಕೆಲಸ ಮಾಡಿಕೊಂಡು ಓದುತ್ತಿದ್ದೇನೆ. ಬಂದ ಹಣದಲ್ಲಿ ಮನೆಗೆ ಕೊಡುವುದರ ಜೊತೆಗೆ ನನ್ನ ಓದಿಗೂ ಅದೇ ಹಣವನ್ನು ಬಳಸಿಕೊಳ್ಳಬೇಕು. ಪರೀಕ್ಷೆಗೆ ಓದಲು ನೋಟ್ಸ್ ತೆಗೆದುಕೊಳ್ಳಲು ಇಟ್ಟುಕೊಂಡು ಹೋಗುತ್ತಿದ್ದ ಹಣವನ್ನು ಅವರಿಗೆ ನೀಡಿ ಪುಸ್ತಕವಿಲ್ಲದೇ ಬರಿಗೈಯಲ್ಲಿ ಮನೆಗೆ ಹೋಗುವಂತಾಯಿತು” ಎಂದು ಅವಲತ್ತುಕೊಂಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಧಾರವಾಡ | ವ್ಯಾಪಕವಾದ ಅಪ್ರಾಪ್ತ ಮಕ್ಕಳ ಬೈಕ್ ಸವಾರಿ; ಸಂಚಾರಿ ಪೊಲೀಸ್ ನಿರ್ಲಕ್ಷ್ಯ
ವಾಹನ ತಪಾಸಣೆಗೆ ಸಂಬಂಧಿಸಿದಂತೆ ಈ ದಿನ.ಕಾಮ್ ಎಸಿಪಿ ಟ್ರಾಫಿಕ್ ಅವರನ್ನು ಸಂಪರ್ಕಿಸಿದಾಗ ಪ್ರತಿಕ್ರಿಯಿಸಿದ್ದು, ಯಾರೋ ಹಾಗೆ ಹೇಳಿ ಹಣ ತೆಗೆದುಕೊಳ್ಳುತ್ತಿದ್ದಾರೆಂದು ಹೇಳಿದರೆ ಹೇಗೆ? ಹಣ ತೆಗೆದುಕೊಂಡು ರಶೀದಿ ಕೊಡದೆ ಕಳುಹಿಸಿರುವುದಕ್ಕೆ ಪ್ರೂಫ್ ಬೇಕಲ್ಲವೇ ಎಂದರು.
“ಯಾರ ಬಳಿ ಹಣ ತೆಗೆದುಕೊಂಡು ರಶೀದಿ ಕೊಡದೆ ಕಳುಹಿಸಿದ್ದಾರೆ, ಹಣ ನೀಡಿದವರು ಬಂದು ತೆಗೆದುಕೊಂಡಿರುವವರ ವಿರುದ್ಧ ದೂರು ನೀಡಲಿ. ಸಂಬಂಧಪಟ್ಟವರ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ” ಎಂದು ಹೇಳಿದರು.