ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಮೈಸೂರು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ ಎಂ ಗಾಯತ್ರಿ ಅವರು ಪಂಚಾಯತ್ ಅಧಿಕಾರಿಗಳಿಗೆ ಸೂಚಿಸಿದರು.
ತಿ ನರಸೀಪುರ ತಾಲೂಕಿನ ಸೋಮನಾಥಪುರ ಗ್ರಾಮ ಪಂಚಾಯಿತಿಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
“ಎಲ್ಲ ಮನೆಗಳಿಗೆ ನಲ್ಲಿ ನೀರಿನ ಸಂಪರ್ಕವನ್ನು ಸಂಪರ್ಕಿಸುವ ʼಜಲಜೀವನ್ ಮಿಷನ್ʼ ಸೌಲಭ್ಯವನ್ನು ಒಂದು ತಿಂಗಳೊಳಗೆ ಪೂರ್ಣಗೊಳಿಸಬೇಕು” ಎಂದು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗೆ ಸೂಚಿಸಿದರು.
“ನೀರಿನ ಸಂರಕ್ಷಣೆಯ ಪ್ರಾಮುಖ್ಯತೆ ಮತ್ತು ನೀರಿನ ನ್ಯಾಯಯುತ ಬಳಕೆಯ ಬಗ್ಗೆ ಗ್ರಾಮಸ್ಥರನ್ನು ಸಂವೇದನಾಶೀಲಗೊಳಿಸಬೇಕು” ಎಂದು ಸೂಚಿಸಿದರು.
“ಸ್ವಸಹಾಯ ಗುಂಪುಗಳ ಮಹಿಳಾ ಸದಸ್ಯರು ತಯಾರಿಸಿದ ಉಪ್ಪಿನಕಾಯಿ, ಸಾಂಬಾರ್ ಪುಡಿ ಮತ್ತು ಇತರ ಸ್ಥಳೀಯ ವಸ್ತುಗಳನ್ನು ಮಾರಾಟ ಮಾಡಲು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಂಗಡಿಗಳನ್ನು ಸ್ಥಾಪಿಸಲು ಸ್ಥಳಾವಕಾಶ ಒದಗಿಸಬೇಕು” ಎಂದು ಸಿಇಒ ಗಾಯತ್ರಿ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಮದ್ಯದಂಗಡಿ ಬಂದ್ ಮಾಡುವಂತೆ ಆಗ್ರಹ
ಮನರೇಗಾ ಅಡಿಯಲ್ಲಿ ಕಾರ್ಮಿಕರಿಗೆ ಕೆಲಸ ನೀಡಿ, ಬೂದು ನೀರು ಸರಬರಾಜು ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ಕೂಲಿಕಾರರಿಗೆ ಹೆಚ್ಚಿನ ಅನುಕೂಲವಾಗುವ ಕೆಲಸಗಳತ್ತ ಗಮನಹರಿಸಲು ಮತ್ತು ಯೋಜನೆಯಡಿಯಲ್ಲಿ ಅಗತ್ಯವಿರುವವರಿಗೆ ಹೆಚ್ಚಿನ ಉದ್ಯೋಗಗಳನ್ನು ಒದಗಿಸಬೇಕು. ಜತೆಗೆ ಹೆಚ್ಚಾಗಿ ಮಹಿಳೆಯರಿಗೆ ಉದ್ಯೋಗ ಕಲ್ಪಿಸಬೇಕು” ಎಂದು ಸಿಇಒ ನಿರ್ದೇಶನ ನೀಡಿದರು.
ತಿ.ನರಸೀಪುರ ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಕೃಷ್ಣ, ಸೋಮನಾಥಪುರ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಇದ್ದರು.
