ಕಾವೇರಿ ನೀರು ನಿರ್ವಹಣಾ ಸಮಿತಿಯ ತೀರ್ಮಾನವು ರಾಜ್ಯದ ರೈತ ವಿರೋಧಿಯಾಗಿದೆ. ಸರ್ಕಾರ ರಾಜ್ಯದಿಂದ ತಮಿಳುನಾಡಿಗೆ ನೀರು ಹರಿಸದೆ, ರಾಜ್ಯದ ರೈತರನ್ನು ರಕ್ಷಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಮೈಸೂರು ಗ್ರಾಮಾಂತರದ ಇಲವಾಲದಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಿದ ರೈತರು ರೈತ ಸಂಘದ ತಾಲೂಕು ಅಧ್ಯಕ್ಷ ಆನಂದೂರು ಪ್ರಭಾಕರ್ ನೇತೃತ್ವದಲ್ಲಿ ಉಪ ತಹಶೀಲ್ದಾರ್ ಮುಖಾಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದರು.
“ರಾಜ್ಯದಲ್ಲಿ ಮಳೆ ಕೊರತೆಯಿಂದಾಗಿ ನೀರಾವರಿ ಜಲಾಶಯಗಳಿಗೆ ಒಳಹರಿವು ಕಡಿಮೆಯಾಗಿದೆ. ಅಲ್ಲದೆ ಈವರೆಗೆ ಜಲಾಶಯಗಳ ನೀರಿನ ಶೇಖರಣೆಯೂ ಕಡಿಮೆ ಇರುವುದು ಕಳವಳಕಾರಿಯಾಗಿದೆ. ಹಾಗಾಗಿ ಕಾವೇರಿ ಜಲಾನಯನ ಪ್ರದೇಶದ ಜಲಾಶಯಗಳಿಂದ ತಮಿಳುನಾಡಿಗೆ ನೀರು ಹರಿಸಬಾರದು” ಎಂದು ಆಗ್ರಹಿಸಿದರು.

“ಉಪಯೋಗಿಸಲು ಸಾಧ್ಯವಿರುವ ನೀರು ಕಡಿಮೆ ಇದೆ. ಕಾವೇರಿ ನೀರು ನಿರ್ವಹಣಾ ಸಮಿತಿಯ ನಿರ್ದೇಶನದಂತೆ ರಾಜ್ಯದ ಜಲಾಶಯಗಳಿಂದ ತಮಿಳುನಾಡಿಗೆ 15 ದಿನಗಳವರೆಗೆ 5 ಸಾವಿರ ಕ್ಯೂಸೆಕ್ ನೀರು ಹರಿಸಿದರೆ ಅಚ್ಚುಕಟ್ಟಿನಲ್ಲಿ ಬೆಳೆದಿರುವ ಫಸಲು ಉಳಿಸುವುದಿರಲಿ, ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಲಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಮಂಡ್ಯ | ತಮಿಳುನಾಡಿಗೆ ನೀರು ಬಿಡದಂತೆ ಆಹೋರಾತ್ರಿ ಧರಣಿ
“ತಮಿಳುನಾಡಿಗೆ ನೀರು ಹರಿಸದಿರಲು ಸ್ಪಷ್ಟ ತೀರ್ಮಾನ ಮಾಡಿ, ಕಾನೂನು ಹೋರಾಟಕ್ಕೆ ಮುಂದಾಗಬೇಕು. ಸ್ಪಷ್ಟ ಸಂಕಷ್ಟ ಸೂತ್ರದ ಮಾನದಂಡ ಇರದೇ ಇರುವುದು ಈ ಸಮಸ್ಯೆಗೆ ಮೂಲ ಕಾರಣವಾಗಿದೆ. ಸ್ಪಷ್ಟ ಸಂಕಷ್ಟ ಸೂತ್ರವನ್ನು ರೂಪಿಸಲು ತಾವು ಕೇಂದ್ರದ ಮೇಲೆ ಒತ್ತಡ ಹೇರಬೇಕು. ಅಗತ್ಯ ಇರುವ ಇತರೆ ಎಲ್ಲ ಕ್ರಮಗಳನ್ನು ಅನುಸರಿಸಿ ರಾಜ್ಯದ ರೈತರನ್ನು ರಕ್ಷಿಸಲೇಬೇಕು” ಎಂದು ಮುಖ್ಯಮಂತ್ರಿ ಅವರಿಗೆ ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ರೈತಸಂಘದ ಗೌರವಾಧ್ಯಕ್ಷ ನಾಗನಳ್ಳಿ ವಿಜಯೇಂದ್ರ, ಮಹೇಶ್ ಪ್ರಧಾನ ಕಾರ್ಯದರ್ಶಿ ಸೇರಿದಂತೆ ಹಲವು ರೈತರು ಇದ್ದರು.