ಜನರನ್ನ ಜನರು ಅರಿಯಲು, ಪ್ರೀತಿಸಲು, ಪರಸ್ಪರ ಗೌರವಿಸಲು ಉಪವಾಸ ಉಪಯುಕ್ತವಾದದ್ದು. ಎಂತಹ ಕ್ರೂರತ್ವದ ಮನಸು ಕೂಡ ಉಪವಾಸ ಸಮಯದಲ್ಲಿ ಸಮಚಿತ್ತ ಹೊಂದಿ ಎಲ್ಲರೂ ನಮ್ಮವರೇ ಅನ್ನುವ ಮೃದು ಹೃದಯ ತರುವಲ್ಲಿ ಉಪವಾಸ ಅತಿಮುಖ್ಯ ಎಂದು ಫಾದರ್ ಫ್ಯಾಟ್ರಿಕ್ ಕ್ಷೇವಿಯರ್ ಹೇಳಿದರು.
ಮೈಸೂರಿನ ದಿ ಪ್ರೆಸಿಡೆಂಟ್ ಹೋಟೆಲ್‌ನಲ್ಲಿ ಜಮಾ ಅತೆ ಇಸ್ಲಾಮೀ ಈ ಹಿಂದ್ ಆಯೋಜಿಸಿರುವ ಇಫ್ತಾರ್ ಕೂಟದಲ್ಲಿ ಅವರು ಮಾತನಾಡಿದರು. ಉಪವಾಸ ಮಾಡುವುದರಿಂದ ದೇಹ ದಂಡನೆ, ವ್ಯಾಮೋಹ, ದುರ್ಗುಣ ತೊಲಗಿಸಲು ಸಾಧ್ಯವಾಗುತ್ತದೆ. ಪ್ರಾಪಂಚಿಕ ವಸ್ತುಗಳು ತೃಣ ಸಮಾನ ಅನಿಸುವಲ್ಲಿ ಉಪವಾಸ ಮಾರ್ಗ ತೋರಿಸುತ್ತದೆ ಎಂದರು.
ಪ್ರೊ. ಎಸ್. ಶಿವರಾಜಪ್ಪ ಮಾತನಾಡಿ, ನಮ್ಮನ್ನ ಆಳುವ ನಾಯಕರೇ ತಮ್ಮ ಖುರ್ಚಿಗಾಗಿ, ಅಧಿಕಾರಕ್ಕಾಗಿ ಹಾದಿ ತಪ್ಪಿಸುತ್ತಾ ಇದ್ದಾರೆ. ಧರ್ಮ ಧರ್ಮದ ನಡುವೆ ಅಂತರ ಹೆಚ್ಚುವಂತೆ ಮಾಡುತ್ತಾ ಜನಮಾನಸದಲ್ಲಿ ದ್ವೇಷ ಹಚ್ಚುವಂತಹ ಕೆಲಸ ಇಂದಿನ ರಾಜಕಾರಣಿಗಳು ಮಾಡುತ್ತಿದ್ದಾರೆ ಎಂದರು.
ಇವತ್ತಿನ ಸ್ಥಿತಿ ನಮ್ಮವರಿಂದಲೆ ನಮ್ಮವರು ದೂರ. ಪ್ರೀತಿ, ಸೌಹಾರ್ದತೆಯ ಬದುಕು ನಮ್ಮದಾಗದೆಹೋಗಿದೆ ಇದಕ್ಕೆಲ್ಲ ಕಾರಣ ರಾಜಕಾರಣಿಗಳು ಹಾಗೂ ಮಾಧ್ಯಮಗಳು ದಿಕ್ಕು ತಪ್ಪಿದ ಸಮಾಜಕ್ಕೆ ನೇರ ಕಾರಣವಾಗಿವೆ. ಸ್ವಾರ್ಥ ಇರದ ಕೆಲಸ ಯಾವುದು ಸಹ ಇಲ್ಲ.ಇಂತಹ ಸಂದರ್ಭದಲ್ಲಿ ಎಚ್ಚೆತ್ತುಕೊಂಡು ಬದುಕನ್ನ ಸಾಗಿಸಬೇಕಿದೆ ಎಂದರು.
ಜನಾಬ್ ರಿಜಾಜ್ ಅಹ್ಮದ್ ರೋಣ ಮಾತನಾಡಿ ಸೌಹಾರ್ದ ಕೂಟಗಳು ಎಲ್ಲೆಡೆ ಹೆಚ್ಚಬೇಕು, ಎಲ್ಲ ಧರ್ಮಗಳನ್ನು ಅರಿಯುವ ಕೆಲಸ ಆಗಬೇಕಿದೆ. ಧರ್ಮ ಧರ್ಮಗಳ ನಡುವೆ ಮಾತಾಡುವ,ಅರ್ಥ ಮಾಡಿಕೊಳ್ಳುವ ಕೆಲಸ ಸಮಾಜದಲ್ಲಿ ಹೆಚ್ಚಬೇಕಿದೆ. ಎಲ್ಲ ಕ್ಷೇತ್ರಗಳ ಬಗ್ಗೆಯೂ ಮಾತಾಡುತ್ತಾರೆ ಆದ್ರೆ ಧರ್ಮದ ಬಗ್ಗೆ ಮಾತಾಡದೆ ಇರುವುದೇ ಇಂದಿನ ಪರಿಸ್ಥಿತಿಗೆ ಕಾರಣವಾಗಿದೆ.ಧರ್ಮ ಎಂದರೆ ಭಯ ಅನ್ನುವಂತಾಗಿದೆ ಇದು ನಿಜಕ್ಕೂ ದುರ್ದೈವ ಎಂದು ವಿಷಾದಿಸಿದ ಅವರು, ಜನರ ನಡುವಿನ ಮೌಲ್ಯ ಹೆಚ್ಚಲು ಪರಸ್ಪರ ಎಲ್ಲರನ್ನೂ ಅರ್ಥ ಮಾಡಿಕೊಳ್ಳುವ ಕೆಲಸ ಆಗಬೇಕಿದೆ. ಎಲ್ಲರೂ ಒಂದೇ ಅನ್ನುವ ಭಾವನೆ ಬೆಳೆಸಿಕೊಳ್ಳಬೇಕಿದೆ ಆಗ ಮಾತ್ರ ಬದುಕಿನ ಅರ್ಥ ಕಾಣಲು ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ಪ್ರಗತಿಪರ ಚಿಂತಕರು, ಸಂಘಟನೆಗಳ ಪ್ರಮುಖರು ನೆರೆದಿದ್ದು ಹಿಂದೂ ಮುಸಲ್ಮಾನರ ಸೌಹಾರ್ದ ಬಾಂಧವ್ಯಕ್ಕೆ ಮೈಸೂರಿನ ಇಫ್ತಾರ್ ಕೂಟ ಸಾಕ್ಷಿಯಾಯಿತು. ವೇದಿಕೆಯಲ್ಲಿ ಸ್ಥಾನಿಕ ಅಧ್ಯಕ್ಷರಾದ ಮೊಹಮ್ಮದ್ ಅಸ್ಲಾಂ, ಹಿರಿಯ ಮುಖಂಡ ಅಬ್ದುಲ್ ಗಫಾರ್ ಬೇಗ್ ಉಪಸ್ಥಿತರಿದ್ದರು.