ನಾವು ಚಂದ್ರನ ಮೇಲೆ ಕಾಲಿಟ್ಟು ವಿಜ್ಞಾನಯುಗದಲ್ಲಿ ಇದ್ದರೂ, ನಮ್ಮ ಮನಸ್ಥಿತಿಗಳು ಮಾತ್ರ ಮ್ಯಾನ್ ಹೋಲ್ಗೆ ಒಬ್ಬ ವ್ಯಕ್ತಿಯನ್ನು ಇಳಿಸುವ ಮಟ್ಟಕ್ಕೆ ಅಮಾನವೀಯವಾಗಿವೆ. ಇದನ್ನು ಮೈಸೂರು ಜಿಲ್ಲೆಯ ಎಚ್.ಡಿ ಕೋಟೆ ತಾಲೂಕು ಸರಕಾರಿ ಆಸ್ಪತ್ರೆ ಸಾಬೀತು ಮಾಡಿದೆ. ಆಸ್ಪತ್ರೆ ಆಡಳಿತ ಡಿ ದರ್ಜೆ ನೌಕರರನ್ನು ಬಲವಂತವಾಗಿ ಮ್ಯಾನ್ ಹೋಲ್ ಗುಂಡಿಗೆ ಇಳಿಸಿ ಸ್ವಚ್ಛತೆ ಮಾಡಿಸಿದ ಅಮಾನವೀಯತೆ ಘಟನೆ ನಡೆದಿದೆ. ಆರೋಗ್ಯ ಕವಚವೆಂದು ಕರೆಯುವ ಆಸ್ಪತ್ರೆಯೇ ಅನಾರೋಗ್ಯಕರ ಮಲಗುಂಡಿಗಳಲ್ಲಿ ಮನುಷ್ಯರನ್ನು ಇಳಿಸಿ ದುರಂತ ಘಟನೆಗೆ ಸಾಕ್ಷಿಯಾಗಿದೆ.
ಅಕ್ಟೋಬರ್ 13ರಂದು ಈ ಘಟನೆ ನಡೆದಿದೆ. ಡಿ ದರ್ಜೆ ನೌಕರರನಿಗೆ ಮಲದಗುಂಡಿಗಳನ್ನು ಸ್ವಚ್ಚ ಮಾಡುವಂತೆ ಆಸ್ಪತ್ರೆಯ ಆಡಳಿಮಂಡಳಿ ಆದೇಶಿಸಿದ್ದು, ಒತ್ತಾಯದಿಂದ ಗುಂಡಿಗೆ ಇಳಿಸಿದ್ದಾರೆ. ಎಚ್‌ಡಿ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೆಡಿಕಲ್ ಆಫೀಸರ್ ಡಾ. ಸೋಮಣ್ಣ, ನರ್ಸ್ ಪರಿಮಳ, ಪರುಶುರಾಮ್ ಎಂಬುವವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಈ ಕುರಿತು ಈ ದಿನ.ಕಾಮ್‌ಗೆ ಸಫಾಯಿ ಕರ್ಮಚಾರಿ ಕಾವಲು ಸಮಿತಿಯ ರಾಜ್ಯ ಸಂಚಾಲಕ ಓಬಲೇಶ್ ಮಾಹಿತಿ ನೀಡಿದ್ದಾರೆ. “ಘಟನೆ ಬಗ್ಗೆ ವಿಜಲೆನ್ಸ್ ಕಮಿಟಿ ಸದಸ್ಯರು ನನಗೆ ಫೋನ್ ಮಾಡಿ ತಿಳಿಸಿದರು. ನಾನು, ನಮ್ಮ ಸಫಾಯಿ ಕರ್ಮಚಾರಿ ಆಯೋಗದ ಕಾರ್ಯದರ್ಶಿಗಳಿಗೆ ವಾಟ್ಸಪ್ ಮೂಲಕ ದೂರು ನೀಡಿದ್ದೇನೆ. ಅವರು ತಕ್ಷಣ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಿಗೆ ಮಾಹಿತಿ ನೀಡಿದ್ದಾರೆ. ಅಧಿಕಾರಿಗಳಿಗೆ ಸ್ಥಳಕ್ಕೆ ಭೇಟಿಕೊಟ್ಟು ತನಿಖೆ ಮಾಡುವಂತೆ ತಿಳಿಸಿದ್ದಾರೆ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ನಾವು ಅವರನ್ನು ಕೂಡಲೇ ಬಂಧಿಸಬೇಕೆಂದು ಒತ್ತಾಯಿಸಿದ್ದೇವೆ” ಎಂದು ತಿಳಿಸಿದ್ದಾರೆ.
“ನಮ್ಮ ದೇಶದಲ್ಲಿ ಮಲಹೊರುವ ಪದ್ಧತಿ ನಿಷೇದವಾಗಿ ವರ್ಷಗಳೇ ಉರುಳಿದರೂ, 1993ರ ಕಾಯ್ದೆ ಇದ್ದಾಗ, ಅದು ಸರಿಯಿಲ್ಲವೆಂದು ಹೊಸ ಕಾಯ್ದೆಯನ್ನು 2013ರಲ್ಲಿ ಜಾಯಿಮಾಡಲಾಗಿದೆ. ಈ ಕಾಯ್ದೆ ಪ್ರಕಾರ, ಯಾರು ಕಾಯ್ದೆ ಉಲ್ಲಂಘನೆ ಮಾಡುತ್ತಾರೋ ಅವರಿಗೆ ಶಿಕ್ಷೆಯಾಗಬೇಕು ಮತ್ತು ಜಾಮೀನು ರಹಿತ ಕೇಸ್ ಹಾಕಬೇಕು ಎಂದು ಸ್ಪಷ್ಟವಾಗಿದೆ.ಸರ್ಕಾರ ಸಹ ಸುತ್ತೋಲೆ ಹೊರಡಿಸಿದೆ.ಇಷ್ಟಾದರೂ ದುರಹಂಕಾಋ ತೋರಿಸುವ ಅಧಿಕಾರಿಗಳು, ಸಿಬ್ಬಂದಿ ವರ್ಗ ಉದ್ದೇಶಪೂರ್ವಕವಾಘಿ ಸಫಾಯಿ ಕರ್ಮಚಾರಿಗಳನ್ನು ಮಲದಗುಂಡಿಗೆ ಇಳಿಸಿಸುವ ಕೆಲಸ ಆಗಿಂದಾಗ್ಗೆ ನಡೆಯುತ್ತಲೇ ಇವೆ. ಈ ವಿಷಯವಾಗಿ ಸರ್ಕಾರ ತಕ್ಷಣವೇ ಕ್ರಮ ತೆಗೆದುಕೊಳ್ಳಬೇಕು. ವೈದ್ಯಾಧಿಕಾರಿ ಮತ್ತು ಇನ್‌ಚಾರ್ಜ್ ನರ್ಸ್ ಹಾಗೂ ಗುತ್ತಿಗೆದಾರನನ್ನು ತಕ್ಷಣವೇ ಬಂಧಿಸಬೇಕು. ಪಿಎಂಎಸ್‌ಆರ್ ಕಾಯ್ದೆ ಮತ್ತು ದೌರ್ಜನ್ಯ ಕಾಯ್ದೆಯಡಿ ದೂರು ದಾಖಲಿಸಿಕೊಂಡು ಕಾನೂನು ಕ್ರಮ ಜರುಗಿಸಬೇಕು” ಎಂದು ಒತ್ತಾಯಿಸಿದ್ದಾರೆ.