ಮುಸ್ಲಿಂ ಸಮುದಾಯವನ್ನು ನಿಂದಿಸಿ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಾಕಾರಿ ಪೋಸ್ಟ್ ಹಾಕಿದ್ದ ಆರೋಪಿ ಸುರೇಶ್ ಎಂಬಾತನನ್ನು ಮೈಸೂರು ಪೊಲೀಸರು ಬಂಧಿಸಿದ್ದಾರೆ.
ಮೈಸೂರಿನ ಉದಯಗಿರಿ ನಿವಾಸಿ ಸುರೇಶ್ ಎಂಬಾತ ಪೋಸ್ಟರ್‌ವೊಂದನ್ನು ರಚಿಸಿದ್ದು, ಅದರಲ್ಲಿ ರಾಹುಲ್ ಗಾಂಧಿ, ಅಖಿಲೇಶ್ ಯಾದವ್ ಹಾಗೂ ಅರವಿಂದ ಕೇಜ್ರಿವಾಲ್ ಅವರನ್ನು ಅರೆನಗ್ನ ರೀತಿಯಲ್ಲಿ ಚಿತ್ರಿಸಿ, ಅವರ ತೊಡೆಮೇಲೆ ವ್ಯಕ್ತಿಯೊಬ್ಬ ನಮಾಜ್ ಮಾಡುತ್ತರುವಂತೆ ಚಿತ್ರಿಸಲಾಗಿತ್ತು. ಜೊತೆಗೆ ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ ಕುರಿತು ಅವಹೇನಾಕಾರಿ ಸಾಲುಗಳನ್ನು ಬರೆಯಲಾಗಿತ್ತು. ಆ ಪೋಸ್ಟರ್‌ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ.
ಆ ಪೋಸ್ಟ್ ವೈರಲ್ ಆದ ಬಳಿಕ, ಸೋಮವಾರ ರಾತ್ರಿ, ಮುಸ್ಲಿಂ ಸಮುದಾಯ ಮುಖಂಡರು ಉದಯಗಿರಿ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದ್ದರು. ಆರೋಪಿ ಸುರೇಶ್‌ನನ್ನು ಬಂಧಿಸಬೇಕೆಂದು ಒತ್ತಾಯಿಸಿದ್ದರು.
ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಯತ್ನಿಸಿದಾಗ, ಕಲ್ಲು ತೂರಾಟ ನಡೆದಿದೆ. ಬಳಿಕ, ಪ್ರತಿಭಟನಾಕಾರರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿ, ಅಶ್ರುವಾಯು ಸಿಡಿಸಿದ್ದರು. ಆರೋಪಿಯನ್ನು ಬಂಧಿಸುವುದಾಗಿ ಭರವಸೆ ನೀಡಿದ ಬಳಿಕ, ಪ್ರತಿಭಟನೆ ಸ್ಥಗಿತಗೊಂಡಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿತ್ತು.
ಲಾಠಿ ಚಾರ್ಜ್ ವೇಳೆ ಹಲವರಿಗೆ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿ ಸುರೇಶ್‌ನನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಠಾಣೆಯ ಸುತ್ತ ಪೊಲೀಸರನ್ನು ನಿಯೋಜಿಸಲಾಗಿದೆ.