ಮೈಸೂರಿನ ಲಲಿತ್ ಮಹಲ್ ಮೈದಾನದ ಬಳಿ ಇರುವ ಕೆಂಪೇಗೌಡ ವೃತ್ತದಲ್ಲಿ ರಾತ್ರೋರಾತ್ರಿ ಕೆಂಪೇಗೌಡರ ಪ್ರತಿಮೆಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ಜಿಲ್ಲಾಡಳಿತದ ಅನುಮತಿ ಪಡೆಯದೆ ನಿರ್ಮಾಣ ಮಾಡಲಾಗಿರುವ ಪ್ರತಿಮೆಯ ತೆರವಿಗೆ ಪೊಲೀಸರು ಸೂಚಿಸಿದ್ದು, ಬಿಗುವಿನ ವಾತಾವರಣ ಸೃಷ್ಠಿಯಾಗಿದೆ.
ಪ್ರತಿಮೆಯನ್ನು ‘ಆಲನಹಳ್ಳಿ ಒಕ್ಕಲಿಗ ಯುವಕರ ಸಂಘ’ದ ಮುಖಂಡರು ಪ್ರತಿಷ್ಠಾಪನೆ ಮಾಡಿದ್ದಾರೆ. ಶನಿವಾರ ಮಧ್ಯರಾತ್ರಿ 10 ಅಡಿ ಎತ್ತರದ ಪ್ರತಿಮೆಯನ್ನು ತಂದು ನಿಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.
ನಗರ ಪಾಲಿಕೆಯ ಅನುಮತಿ ಇಲ್ಲದೆ ಪ್ರತಿಮೆ ಪ್ರತಿಷ್ಠಾಪಿಸಿರುವ ಕಾರಣ, ಪ್ರತಿಮೆಯನ್ನು ತೆರವುಗೊಳಿಸಲು ಪೊಲೀಸರು ಮುಂದಾಗಿದ್ದಾರೆ. ಪೊಲೀಸರ ನಡೆಯನ್ನು ಒಕ್ಕಲಿಗ ಸಮುದಾಯದ ಮುಖಂಡರು ವಿರೋಧಿಸಿದ್ದಾರೆ. ಪೊಲೀಸರು ಮತ್ತು ಮುಖಂಡರ ನಡುವೆ ವಾಗ್ವಾದ ನಡೆದಿದೆ.
ಅನುಮತಿ ಪಡೆಯದೆ ಈ ರೀತಿ ಪ್ರತಿಮೆಗಳನ್ನು ನಿರ್ಮಿಸುವುದು ಕಾನೂನುಬಾಹಿರವೆಂದು ಪೊಲೀಸರು ತಿಳಿಸಿದ್ದಾರೆ. ಆದಾಗ್ಯೂ, ಪ್ರತಿಮೆ ತೆರವಿಗೆ ಬಿಡುವುದಿಲ್ಲವೆಂದು ಕೆಂಪೇಗೌಡರ ಅಭಿಮಾನಿಗಳು ಪಟ್ಟು ಹಿಡಿದಿದ್ದಾರೆ.
ಸ್ಥಳಕ್ಎಕ ಬಂದ ಶಾಸಕ ಹರೀಶ್ ಗೌಡ, ಅನುಮತಿ ಪಡೆದು, ಪ್ರತಿಮೆ ನಿರ್ಮಿಸುವುದಾಗಿ ಭರವಸೆ ನೀಡಿದ್ದಾರೆ. ಇನ್ನೂ, ಪ್ರತಿಮೆಯನ್ನು ತೆರವುಗೊಳಿಸಲಾಗಿಲ್ಲ. ಸ್ಥಳದಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ.
ಹಳೆ ಮೈಸೂರು ಪ್ರಾಂತ್ಯಕ್ಕೆ ಮೈಸೂರು ಅರಸರಿಗಿಂತಲೂ ಮತ್ತಿನ್ನ್ಯಾರ ಪ್ರತಿಮೆಗಳ ಅವಶ್ಯಕತೆಯಿದೆ ನೀವೇ ಹೇಳಿ ಸ್ವಾಮಿ
ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ